ಉಡುಗೊರೆಗಳ ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

| Updated By: ರಶ್ಮಿ ಕಲ್ಲಕಟ್ಟ

Updated on: Sep 19, 2021 | 3:09 PM

Narendra Modi: ಒಲಿಂಪಿಕ್ ಕಂಚಿನ ಪದಕ ವಿಜೇತ ಲೊವ್ಲಿನಾ ಬೊರ್ಗೊಹೈನ್ ಅವರ ಬಾಕ್ಸಿಂಗ್ ಗ್ಲೌಸ್ ಇ-ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಪಡೆದಿದೆ. 80 ಲಕ್ಷ ಮೂಲ ಬೆಲೆಯ ಬೊರ್ಗೊಹೈನ್ ಕೈಗವಸುಗಳು ₹ 1.92 ಕೋಟಿ ಬಿಡ್ ಪಡೆದಿದೆ

ಉಡುಗೊರೆಗಳ ಇ-ಹರಾಜಿನಲ್ಲಿ ಭಾಗವಹಿಸಲು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ
ನರೇಂದ್ರ ಮೋದಿ
Follow us on

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಜನರಿಂದ ಪಡೆದ ಹಲವಾರು ಉಡುಗೊರೆಗಳು ಮತ್ತು ಸ್ಮರಣಿಕೆಗಳು ಹರಾಜಾಗುತ್ತಿದ್ದು ಜನರು ಈ ಹರಾಜಿನಲ್ಲಿ ಭಾಗವಹಿಸಬೇಕೆಂದು ಮೋದಿ ಕರೆ ನೀಡಿದ್ದಾರೆ. ಹರಾಜಿನಲ್ಲಿ ಸಿಗುವ ಹಣವನ್ನು ‘ನಮಾಮಿ ಗಂಗೆ’ ( Namami Gange) ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ನಾನು ಸ್ವೀಕರಿಸಿದ ಹಲವಾರು ಉಡುಗೊರೆಗಳು ಮತ್ತು ಸ್ಮರಣಿಕೆಗಳು ಹರಾಜಾಗುತ್ತಿವೆ. ಇದು ನಮ್ಮ ಒಲಿಂಪಿಕ್ಸ್ ಹೀರೋಗಳು ನೀಡಿದ ವಿಶೇಷ ಸ್ಮರಣಿಕೆಗಳನ್ನು ಕೂಡಾ ಒಳಗೊಂಡಿದೆ. ಹರಾಜಿನಲ್ಲಿ ಭಾಗವಹಿಸಿ. ಆದಾಯವು ನಮಾಮಿ ಗಂಗೆ ಉಪಕ್ರಮಕ್ಕೆ ಹೋಗುತ್ತದೆ, ”ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸಂಸ್ಕೃತಿ ಸಚಿವಾಲಯವು ಆಯೋಜಿಸಿರುವ ಇ-ಹರಾಜು ಶುಕ್ರವಾರ ಆರಂಭವಾಯಿತು ಮತ್ತು ಅಕ್ಟೋಬರ್ 7 ರವರೆಗೆ ಮುಂದುವರಿಯುತ್ತದೆ, ಇದು ಅಂತಹ ಹರಾಜಿನಲ್ಲಿ ಮೂರನೇ ಆವೃತ್ತಿ, ಇದರಲ್ಲಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಭಾಗವಹಿಸಬಹುದು ವೆಬ್‌ಸೈಟ್: https://pmmementos.gov.in ಮೂಲಕ ಹರಾಜಿನಲ್ಲಿ ಭಾಗಿಯಾಗಬಹುದು.


“ಸ್ಮರಣಿಕೆಗಳಲ್ಲಿ ಕ್ರೀಡಾ ಸಾಧನಗಳು ಮತ್ತು ಪದಕ ವಿಜೇತ ಒಲಿಂಪಿಯನ್ ಮತ್ತು ಪ್ಯಾರಾಲಿಂಪಿಯನ್‌ಗಳ ಉಪಕರಣಗಳು, ಅಯೋಧ್ಯೆಯ ರಾಮಮಂದಿರ, ಚಾರ್ ಧಾಮ್, ರುದ್ರಾಕ್ಷ್ ಕನ್ವೆನ್ಶನ್ ಸೆಂಟರ್, ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ‘ಅಂಗವಸ್ತ್ರಂ’ ಇತರವುಗಳು ಸೇರಿವೆ ಎಂದು ಸಚಿವಾಲಯ ಹೇಳಿದೆ.

ಒಲಿಂಪಿಕ್ ಕಂಚಿನ ಪದಕ ವಿಜೇತ ಲೊವ್ಲಿನಾ ಬೊರ್ಗೊಹೈನ್ ಅವರ ಬಾಕ್ಸಿಂಗ್ ಗ್ಲೌಸ್ ಇ-ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಪಡೆದಿದೆ. 80 ಲಕ್ಷ ಮೂಲ ಬೆಲೆಯ ಬೊರ್ಗೊಹೈನ್ ಕೈಗವಸುಗಳು ₹ 1.92 ಕೋಟಿ ಬಿಡ್ ಪಡೆದಿದೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಜಾವೆಲಿನ್ ₹ 1.5 ಕೋಟಿ ಬಿಡ್ ಪಡೆದಿದೆ. ಚೋಪ್ರಾ ಅವರ ಜಾವೆಲಿನ್ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಹರಾಜಿನಲ್ಲಿ ₹1 ಕೋಟಿ ಮೂಲ ಬೆಲೆಯನ್ನು ಹೊಂದಿತ್ತು.

ಹರಾಜಿನಲ್ಲಿ ಇತರ ವಸ್ತುಗಳೆಂದರೆ ಪ್ಯಾರಾಲಿಂಪಿಯನ್ ಅವನಿ ಲೇಖರಾ ಮತ್ತು ಭವಾನಿ ಪಟೇಲ್ ಅವರ ಟೀ ಶರ್ಟ್‌ಗಳು. ಪಿವಿ ಸಿಂಧು ತನ್ನ ಕಂಚಿನ ಪದಕ ವಿಜೇತ ಒಲಿಂಪಿಕ್ ಪಂದ್ಯದಲ್ಲಿ ಬಳಸಿದ ರಾಕೆಟ್ ಕೂಡ ಹರಾಜಿನ ಭಾಗವಾಗಿತ್ತು.

ಕ್ರೀಡಾ ಸಾಮಗ್ರಿಗಳ ಹೊರತಾಗಿ, ಇ-ಹರಾಜಿನಲ್ಲಿ ಕೇದಾರನಾಥ ದೇವಸ್ಥಾನ ಮತ್ತು ಏಕತೆಯ ಪ್ರತಿಮೆ, ಪ್ರಧಾನಿಯವರ ಭಾವಚಿತ್ರಗಳು ಮತ್ತು ಛಾಯಾಚಿತ್ರಗಳು ಸೇರಿವೆ. ಮೋದಿಯವರ ಛಾಯಾಚಿತ್ರ ಮತ್ತು ಭಾವಚಿತ್ರಗಳ ಮೂಲ ಬೆಲೆ ₹ 2 ಲಕ್ಷ ಆಗಿದೆ.

2019 ರಲ್ಲಿ ಸರ್ಕಾರವು ಪ್ರಧಾನ ಮಂತ್ರಿಯಿಂದ ಪಡೆದ 4,000 ಕ್ಕೂ ಹೆಚ್ಚು ಉಡುಗೊರೆಗಳನ್ನು ಹರಾಜು ಹಾಕಿತು. ಹಿಂದಿನ ಹರಾಜಿನ ಆದಾಯವು ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಹೋಗಿತ್ತು.
ನಮಾಮಿ ಗಂಗೆ ಒಂದು ಸಮಗ್ರ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯಕ್ರಮವಾಗಿದ್ದು, ಕೇಂದ್ರ ಸರ್ಕಾರವು ಜೂನ್ 2014 ರಲ್ಲಿ ಆರಂಭಿಸಿತು. ಇದು ಮಾಲಿನ್ಯ ನಿಯಂತ್ರಣ ಮತ್ತು ಗಂಗಾ ನದಿಯ ಸಂರಕ್ಷಣೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ, ಸ್ಮರಣಿಕೆಗಳ ಹರಾಜು ಇಂದಿನಿಂದ; ನೀವೂ ಭಾಗವಹಿಸಬೇಕೆ? ಮಾಹಿತಿ ಇಲ್ಲಿದೆ

(Prime Minister Narendra Modi urges people to take part in the e-auction of gifts mementoes received by him)