PM Modi Andhra Visit: ಪ್ರಧಾನಿ ಮೋದಿಯಿಂದ ಇಂದು ಆಂಧ್ರಪ್ರದೇಶ, ತೆಲಂಗಾಣದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ

| Updated By: ಸುಷ್ಮಾ ಚಕ್ರೆ

Updated on: Nov 12, 2022 | 8:25 AM

ಇಂದು ಬೆಳಿಗ್ಗೆ 10.30ರ ಸುಮಾರಿಗೆ ಆಂಧ್ರ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

PM Modi Andhra Visit: ಪ್ರಧಾನಿ ಮೋದಿಯಿಂದ ಇಂದು ಆಂಧ್ರಪ್ರದೇಶ, ತೆಲಂಗಾಣದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ
ನರೇಂದ್ರ ಮೋದಿ
Follow us on

ಹೈದರಾಬಾದ್: ಕರ್ನಾಟಕ, ತಮಿಳುನಾಡಿನ ಭೇಟಿಯ ನಂತರ ಆಂಧ್ರಪ್ರದೇಶಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಸಂಜೆಯೇ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಕ್ಕೆ ತೆರಳಿದ್ದಾರೆ. ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ (Telangana) ಅವರು ಇಂದು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಇಂದು ಬೆಳಿಗ್ಗೆ 10.30ರ ಸುಮಾರಿಗೆ ಆಂಧ್ರ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy), ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇಂದು ಮಧ್ಯಾಹ್ನ 12.05ರ ಸುಮಾರಿಗೆ ಹೈದರಾಬಾದ್‌ಗೆ ತೆರಳುವ ಮೊದಲು ಪ್ರಧಾನಿ ಮೋದಿ ಅದೇ ಸ್ಥಳದಿಂದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 10,842 ಕೋಟಿ ರೂ. ಮೊತ್ತದ ಯೋಜನೆಗಳ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಅವುಗಳಲ್ಲಿ ರೈಲ್ವೆ ಮರು ಅಭಿವೃದ್ಧಿ ಯೋಜನೆ (₹ 460 ಕೋಟಿ), ಮೀನುಗಾರಿಕೆ ಬಂದರಿನ ಆಧುನೀಕರಣ (₹ 152 ಕೋಟಿ), ಶೀಲಾ ನಗರ ಮತ್ತು ಕಾನ್ವೆಂಟ್ ಜಂಕ್ಷನ್ ನಡುವಿನ ರಸ್ತೆ ಅಗಲೀಕರಣ (₹ 566 ಕೋಟಿ), ಶ್ರೀಕಾಕುಳಂನಿಂದ ಗೇಲ್ ಪೈಪ್‌ಲೈನ್ ಅಳವಡಿಕೆ ಅಂಗುಲ್‌ಗೆ (₹2,658 ಕೋಟಿ), ಇಚ್ಚಾಪುರಂ ಮತ್ತು ಪರಲಖೆಮುಂಡಿ ನಡುವಿನ ರಸ್ತೆ ವಿಸ್ತರಣೆ (₹211 ಕೋಟಿ), ಪೂರ್ವ ಕಡಲಾಚೆಯ ಒಎನ್‌ಜಿಸಿ ಕ್ಷೇತ್ರಾಭಿವೃದ್ಧಿ ಯೋಜನೆ (₹2,917 ಕೋಟಿ) ಮತ್ತು ವಿಶಾಖಪಟ್ಟಣಂ-ರಾಯಪುರ ಗ್ರೀನ್‌ಫೀಲ್ಡ್ ಆರ್ಥಿಕ ಕಾರಿಡಾರ್‌ನ ಎಪಿ ವಿಭಾಗ (₹3,778 ಕೋಟಿ) ಯೋಜನೆಗಳು ಸೇರಿವೆ.

ವಿಶಾಖಪಟ್ಟಣಂ ಸಂಚಾರ ಪೊಲೀಸರು ಇಂದು (ಶನಿವಾರ) ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ನಗರದಾದ್ಯಂತ ಹಲವಾರು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ವಿಶಾಖಪಟ್ಟಣಂನ ಕೆಲವು ಮಾರ್ಗಗಳಲ್ಲಿ ಇಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: PM Modi in Bengaluru: ಬೆಂಗಳೂರಿನ ರಸ್ತೆಯಲ್ಲಿ ಅಭಿಮಾನಿಗಳಿಗೆ ಕೈ ಬೀಸಿದ ಮೋದಿ; ಪ್ರಧಾನಿಯ ವಿಶೇಷ ಫೋಟೋಗಳು ಇಲ್ಲಿವೆ

ವಿಶಾಖಪಟ್ಟಣಂನಿಂದ ಹೈದರಾಬಾದ್‌ನ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪೆದ್ದಪಲ್ಲಿ ಜಿಲ್ಲೆಯ ರಾಮಗುಂಡಂಗೆ ತೆರಳಲಿದ್ದಾರೆ. ಅವರು ರಾಮಗುಂಡಂನ ಎನ್‌ಟಿಪಿಸಿ ಟೌನ್‌ಶಿಪ್‌ನಲ್ಲಿರುವ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರಾಮಗುಂಡಂ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ (ಆರ್‌ಎಫ್‌ಸಿಎಲ್) ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಆರ್‌ಎಫ್‌ಸಿಎಲ್ ಕಾರ್ಯಕ್ರಮದ ನಂತರ, ಮೋದಿ ಅವರು ಕೊತಗುಡೆಂ (ಭದ್ರಾಚಲಂ ರಸ್ತೆ) ಮತ್ತು ಸತ್ತುಪಲ್ಲಿ ನಡುವೆ ಹೊಸದಾಗಿ ನಿರ್ಮಿಸಲಾದ 54 ಕಿ.ಮೀ ರೈಲು ಮಾರ್ಗವನ್ನು ಉದ್ಘಾಟಿಸುವ ನಿರೀಕ್ಷೆಯಿದೆ. ಇದನ್ನು ಈ ವರ್ಷ ಮೇ ತಿಂಗಳಲ್ಲಿ ಕಾರ್ಯಗತಗೊಳಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯ ಸಿರೊಂಚಾ-ಮಹದೇವಪುರ, ಬೋಧನ್-ಭೈಂಸಾ ಮತ್ತು ಮೇದಕ್-ಎಲ್ಕತುರ್ಥಿ ವಿಭಾಗಗಳ ಮೂರು ವಿಸ್ತರಣೆ ಕಾಮಗಾರಿಗಳಿಗೆ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ