ಬಿರ್ಸಾ ಮುಂಡಾ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಭೋಪಾಲ್​ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ; ಸರ್ಕಾರದಿಂದ 23 ಕೋಟಿ ರೂ.ಖರ್ಚು

| Updated By: Lakshmi Hegde

Updated on: Nov 13, 2021 | 12:03 PM

ನವೆಂಬರ್​ 15ರಂದು ನಡೆಯಲಿರುವ ಜನಜಾತೀಯ ಗೌರವ ದಿವಸ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಅವರು ಅಂದು ಭೋಪಾಲ್​​ನಲ್ಲಿ ನಾಲ್ಕು ತಾಸುಗಳ ಕಾಲ ಇರಲಿದ್ದಾರೆ.

ಬಿರ್ಸಾ ಮುಂಡಾ ಸ್ಮರಣಾರ್ಥ ಕಾರ್ಯಕ್ರಮಕ್ಕೆ ಭೋಪಾಲ್​ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ; ಸರ್ಕಾರದಿಂದ 23 ಕೋಟಿ ರೂ.ಖರ್ಚು
ನರೇಂದ್ರ ಮೋದಿ
Follow us on

ಭೋಪಾಲ್​: ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಅಂದರೆ ನವೆಂಬರ್​ 15ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ನವೆಂಬರ್​ 15ರಂದು ಭಗವಾನ್​ ಬಿರ್ಸಾ ಮುಂಡಾ ಸ್ಮರಣಾರ್ಥ ಜನಜಾತೀಯ ಗೌರವ ದಿವಸ್​ ಆಚರಣೆ ನಡೆಯಲಿದ್ದು, ಆ ವಾರವನ್ನೆಲ್ಲ ಬುಡಕಟ್ಟು ಜನಾಂಗದವರ ವಾರವೆಂದು ಪರಿಗಣಿಸಲಾಗುವುದು. ಮುಂಡಾ ಬುಡಕಟ್ಟು ಜನಾಂಗಕ್ಕೆ ಸೇರಿದ, ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬಿರ್ಸಾ ಮುಂಡಾ ಹುಟ್ಟಿದ್ದು 1875ರ ನವೆಂಬರ್​ 15ರಂದು. ಅವರ ಜನ್ಮ ಜಯಂತಿಯನ್ನು ಬುಡಕಟ್ಟು ಜನಾಂಗಕ್ಕೆ ಗೌರವ ಸಲ್ಲಿಸಲು ಮುಡಿಪಾಗಿಡಲಾಗಿದೆ. ತನ್ನಿಮಿತ್ತ ನವೆಂಬರ್​ 15ರಿಂದ 22ರವರೆಗೂ ಬುಡಕಟ್ಟು ಹೆಮ್ಮೆಯ ವಾರವೆಂದು ಆಚರಿಸಲಾಗುತ್ತಿದೆ. 

ನವೆಂಬರ್​ 15ರಂದು ನಡೆಯಲಿರುವ ಜನಜಾತೀಯ ಗೌರವ ದಿವಸ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಅವರು ಅಂದು ಭೋಪಾಲ್​​ನಲ್ಲಿ ನಾಲ್ಕು ತಾಸುಗಳ ಕಾಲ ಇರಲಿದ್ದಾರೆ. ಜಂಬೂರಿ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬುಡಕಟ್ಟು ಜನಾಂಗದ ಸುಮಾರು 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂದ ಹಾಗೆ ಪ್ರಧಾನಿ ನರೇಂದ್ರ ಮೋದಿ ಒಂದೂವರೆ ತಾಸುಗಳ ಕಾಲ ವೇದಿಕೆಯ ಮೇಲೆ ಇರಲಿದ್ದಾರೆ. ವೇದಿಕೆ ಮೇಲೆ ಐದು ಗುಮ್ಮಟಗಳನ್ನು ನಿರ್ಮಿಸಲಾಗುತ್ತಿದೆ.  ಈ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶ ಸರ್ಕಾರ ಬರೋಬ್ಬರಿ 23 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಅದರಲ್ಲೂ ಜನರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲೆಂದೇ ಸುಮಾರು 12 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎಂದೂ ಹೇಳಲಾಗಿದೆ.  ಈ ಕಾರ್ಯಕ್ರಮದ ಸಿದ್ಧತೆಗಾಗಿ ಸುಮಾರು 300 ಕೆಲಸಗಾರರು ಕಾರ್ಯನಿರತರಾಗಿದ್ದಾರೆ. ಅತ್ಯಂತ ಹೆಚ್ಚು ಬುಡಕಟ್ಟು ಸಮುದಾಯದ ಜನರನ್ನು ಒಳಗೊಂಡ ರಾಜ್ಯ ಮಧ್ಯಪ್ರದೇಶವಾಗಿದ್ದು, ಈ ಕಾರ್ಯಕ್ರಮದಲ್ಲಿ 52 ಜಿಲ್ಲೆಗಳಿಂದ ಜನರು ಆಗಮಿಸಲಿದ್ದಾರೆ. ವೇದಿಕೆಯ ಮೇಲೆ ಗುಮ್ಮಟ ನಿರ್ಮಾಣಕ್ಕಾಗಿಯೇ 9 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ.

ನವೆಂಬರ್​ 15ರಂದು ಮಧ್ಯಾಹ್ನ 12.30ರ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಭೋಪಾಲ್​ ತಲುಪಲಿದ್ದಾರೆ. 1.10ರಿಂದ 2.25ರವರೆಗೆ ಅವರು ಜಂಬೂರಿ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಇರಲಿದ್ದಾರೆ. ನಂತರ 3.10ಕ್ಕೆ ವಿಶ್ವದರ್ಜೆಯ ಹಬೀಬ್‌ಗಂಜ್ ರೈಲು ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಪಿಪಿಪಿ ಯೋಜನೆ (ಸಾರ್ವಜನಿಕ ಖಾಸಗಿ ಸಹಭಾಗಿತ್ವ)ಯಡಿ ನಿರ್ಮಾಣವಾದ ದೇಶದ ಮೊದಲ ರೈಲ್ವೆ ಸ್ಟೇಶನ್​ ಇದಾಗಿದ್ದು, 450 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಈ ರೈಲು ನಿಲ್ದಾಣಕ್ಕೆ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಹೆಸರಿಡಬೇಕು ಎಂಬುದು ಬಹುತೇಕ ಬಿಜೆಪಿ ನಾಯಕರ ಬೇಡಿಕೆಯಾಗಿದೆ. ಈ ಕಾರ್ಯಕ್ರಮ ಆದ ಬಳಿಕ ಸಂಜೆ 4.20ರ ಹೊತ್ತಿಗೆ ರಾಜಾ ಭೋಜ್​ ಏರ್​ಪೋರ್ಟ್​​ನಿಂದ ದೆಹಲಿಗೆ ತೆರಳಲಿದ್ದಾರೆ.

ಇದನ್ನೂ ಓದಿ: Puneeth Rajkumar: ಪುನೀತ್​ ಕಣ್ಣುಗಳು ಇನ್ನೂ ಹತ್ತು ಜನಕ್ಕೆ ದೃಷ್ಟಿ ನೀಡುವ ಸಾಧ್ಯತೆ; ನಾರಾಯಣ ನೇತ್ರಾಲಯದಿಂದ ವಿನೂತನ ಪ್ರಯೋಗ