Priyanka Gandhi: ಮೃತನ ಕುಟುಂಬಸ್ಥರ ಭೇಟಿಗೆ ಆಗ್ರಾಕ್ಕೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಪೊಲೀಸ್ ವಶಕ್ಕೆ

| Updated By: ಸುಷ್ಮಾ ಚಕ್ರೆ

Updated on: Oct 20, 2021 | 5:12 PM

ಮೃತ ಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಲು ಲಕ್ನೋದಿಂದ ಆಗ್ರಾಗೆ ಹೊರಟಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Priyanka Gandhi: ಮೃತನ ಕುಟುಂಬಸ್ಥರ ಭೇಟಿಗೆ ಆಗ್ರಾಕ್ಕೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಪೊಲೀಸ್ ವಶಕ್ಕೆ
ಪ್ರಿಯಾಂಕಾ ಗಾಂಧಿ ಪೊಲೀಸ್ ವಶಕ್ಕೆ
Follow us on

ನವದೆಹಲಿ: 2 ಲಕ್ಷ ರೂ. ಹಣ ಕದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆಗ್ರಾದ ಕಾರ್ಮಿಕನೊಬ್ಬ ಪೊಲೀಸ್ ವಶದಲ್ಲಿರುವಾಗಲೇ ಸಾವನ್ನಪ್ಪಿದ್ದ. ಮೃತ ಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಲು ಲಕ್ನೋದಿಂದ ಆಗ್ರಾಗೆ ಹೊರಟಿದ್ದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಮಧ್ಯಾಹ್ನ ಆಗ್ರಾಕ್ಕೆ ಹೊರಟಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಲಕ್ನೋ-ಆಗ್ರಾ ಎಕ್ಸ್​ಪ್ರೆಸ್​ ಹೈವೇ ಮಾರ್ಗದ ಟೋಲ್ ಬಳಿ ಪೊಲೀಸರು ತಡೆದಿದ್ದರು. ಪ್ರಿಯಾಂಕಾ ಗಾಂಧಿಗೆ ಆಗ್ರಾಗೆ ತೆರಳಲು ಅನುಮತಿ ನೀಡದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದವೂ ನಡೆದಿತ್ತು.

ಅದಾದ ಬಳಿಕ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಕಾರ್ಮಿಕ ಮೃತಪಟ್ಟ ಹಿನ್ನೆಲೆ ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯ ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದ್ದು, ಪೊಲೀಸ್ ಠಾಣೆ ಇರುವ ಸುತ್ತಮುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಭೇಟಿಯಿಂದ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದಾರೆ.

ಇದಕ್ಕೂ ಮೊದಲು ಲಖೀಂಪುರ ಕೇರಿ ಹಿಂಸಾಚಾರ ನಡೆದ ಸಂದರ್ಭದಲ್ಲೂ ಮೃತಪಟ್ಟ ರೈತರ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದು 3 ದಿನಗಳ ಕಾಲ ಗೆಸ್ಟ್​ ಹೌಸ್​ನಲ್ಲಿ ಇರಿಸಿದ್ದರು. ಇದೀಗ ಎರಡನೇ ಬಾರಿಗೆ ಉತ್ತರ ಪ್ರದೇಶ ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದಾರೆ.

ನಾನು ಆಗ್ರಾಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ನಾನು ಎಲ್ಲೇ ಹೋದರೂ ನನ್ನನ್ನು ತಡೆಯುವ ಪ್ರಯತ್ನವಾಗುತ್ತಿದೆ. ಹಾಗಾದರೆ ನಾನು ರೆಸ್ಟೋರೆಂಟ್​ನಲ್ಲಿ ಕುಳಿತುಕೊಂಡಿರಬೇಕಾ? ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನಾನು ನನ್ನ ಜವಾಬ್ದಾರಿಯನ್ನು ಮಾಡುವುದು ತಪ್ಪಾ? ನಾನು ಮೃತರ ಕುಟುಂಬದವರನ್ನು ಭೇಟಿಯಾಗಿ ಸಮಾಧಾನ ಹೇಳಿದರೆ ಅದರಲ್ಲಿ ತಪ್ಪೇನಿದೆ? ನನ್ನನ್ನು ನೋಡಿದರೆ ಉತ್ತರ ಪ್ರದೇಶ ಸರ್ಕಾರಕ್ಕೆ ಭಯವೇ? ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಅರುಣ್ ವಾಲ್ಮೀಕಿ ಪೊಲೀಸ್ ಕಸ್ಟಡಿಯಲ್ಲಿ ನಿಧನರಾಗಿದ್ದಾರೆ. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ನಾನು ಆ ಕುಟುಂಬವನ್ನು ಭೇಟಿ ಮಾಡಲು ಬಯಸುತ್ತೇನೆ. ಉತ್ತರ ಪ್ರದೇಶ ಸರ್ಕಾರವು ಏಕೆ ಹೆದರುತ್ತಿದೆ? ನನ್ನನ್ನು ಏಕೆ ತಡೆಯಲಾಗಿದೆ? ಇಂದು ಭಗವಾನ್ ವಾಲ್ಮೀಕಿ ಜಯಂತಿ. ಬುದ್ಧನ ಬಗ್ಗೆ ಪಿಎಂ ಮೋದಿ ದೊಡ್ಡದಾಗಿ ಮಾತನಾಡಿದರು. ಆದರೆ ಉತ್ತರ ಪ್ರದೇಶದಲ್ಲಿ ಬುದ್ಧನ ಸಂದೇಶದ ಮೇಲೆ ದಾಳಿ ನಡೆಯುತ್ತಿದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಮಹಿಳಾ ಪೊಲೀಸರು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಘಟನೆಯೂ ನಡೆಯಿತು.

ಇದನ್ನೂ ಓದಿ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ಶೇ.40ರಷ್ಟು ಟಿಕೆಟ್​ ಮಹಿಳೆಯರಿಗೆ ಮೀಸಲು: ಪ್ರಿಯಾಂಕಾ ಗಾಂಧಿ

ನನ್ನ ಬಂಧನ ಕಾನೂನುಬಾಹಿರ, ಸ್ಥಳದಲ್ಲಿ ಇರದವರ ವಿರುದ್ಧವೂ ಎಫ್​ಐಆರ್ ದಾಖಲಿಸಲಾಗಿದೆ; ಪ್ರಿಯಾಂಕಾ ಗಾಂಧಿ ಆರೋಪ

Published On - 5:07 pm, Wed, 20 October 21