ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಶೇ.40ರಷ್ಟು ಟಿಕೆಟ್ ಮಹಿಳೆಯರಿಗೆ ಮೀಸಲು: ಪ್ರಿಯಾಂಕಾ ಗಾಂಧಿ
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ರಾಹುಲ್ ಗಾಂಧಿ ಅಧ್ಯಕ್ಷನ ಸ್ಥಾನದಿಂದ ಕೆಳಗೆಇಳಿದಿದ್ದಾರೆ. ಅದಾದ ಬಳಿಕ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿಯಾಗಿ, ಉತ್ತರಪ್ರದೇಶ ಉಸ್ತುವಾರಿ ಹೊತ್ತಿದ್ದಾರೆ.
ಉತ್ತರಪ್ರದೇಶದಲ್ಲಿ ಮುಂದಿನವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ (Uttar Pradrsh Assembly Election)ಯಲ್ಲಿ ಕಾಂಗ್ರೆಸ್ನಿಂದ ಶೇ.40ರಷ್ಟು ಮಹಿಳೆಯರಿಗೇ ಟಿಕೆಟ್ ನೀಡಲಾಗುವುದು ಎಂದು ಪ್ರಧಾನಕಾರ್ಯದರ್ಶಿ ಪ್ರಿಯಾಂಕಾಗಾಂಧಿ (Priyanka Gandhi Vadra) ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಂದ ಬದಲಾವಣೆ ತರಲು ಸಾಧ್ಯವಿದೆ. ಅವರಿಗೆ ಅವಕಾಶ ಕೊಡಬೇಕು. ಉತ್ತರಪ್ರದೇಶದ ಹೆಣ್ಣುಮಕ್ಕಳಿಗಾಗಿ, ಯಾರು ಬದಲಾವಣೆ ಬಯಸುತ್ತಿದ್ದಾರೋ ಅಂಥ ಮಹಿಳೆಯರಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಉನ್ನಾವೋದಲ್ಲಿ ಅತ್ಯಾಚಾರಕ್ಕೀಡಾದ ಯುವತಿಯನ್ನು ಜೀವಂತವಾಗಿ ದಹನ ಮಾಡಲಾಯಿತು. ಹತ್ರಾಸ್ ರೇಪ್ ಸಂತ್ರಸ್ತೆಗೆ ನ್ಯಾಯವೇ ಸಿಗಲಿಲ್ಲ. ಮೊನ್ನೆ ಲಖಿಂಪುರ ಖೇರಿಗೆ ಭೇಟಿ ನೀಡಿದಾಗ ಅಲ್ಲೊಬ್ಬಳು ಹುಡುಗಿ ತಾನು ಪ್ರಧಾನಿಯಾಗಬೇಕು ಎನ್ನುತ್ತಿದ್ದಳು. ಹೀಗೆ ಅನ್ಯಾಯಕ್ಕೆ ಒಳಗಾದ ಹುಡುಗಿಯರಿಗಾಗಿ, ರಾಜಕೀಯದಲ್ಲಿ ಮುಂದೆಬರುವ ಕನಸು ಹೊತ್ತ ಹುಡುಗಿಯರಿಗಾಗಿ ಕಾಂಗ್ರೆಸ್ ಈ ನಿರ್ಣಯಕ್ಕೆ ಬಂದಿದೆ. ಶೇ.40ರಷ್ಟು ಟಿಕೆಟ್ನ್ನು ನಾವು ಮಹಿಳೆಯರಿಗೇ ನೀಡಿ, ಗೆಲ್ಲಿಸುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.
ನಮ್ಮ ದೇಶದಲ್ಲಿ ರಾಜಕೀಯ ದ್ವೇಷವಿದೆ. ಅದನ್ನು ಮಹಿಳೆಯರು ಮಾತ್ರ ಕೊನೆಗೊಳಿಸಬಹುದಾಗಿದೆ. ಅಷ್ಟೇ ಅಲ್ಲ, ಇಲ್ಲಿ ಧರ್ಮರಾಜಕೀಯವಿದೆ. ಅದರಿಂದಲೂ ದೇಶವನ್ನು ಹೊರತರುವ ಶಕ್ತಿ ಸ್ತ್ರೀಯರಿಗೇ ಇದೆ. ರಾಜಕೀಯದಲ್ಲಿ ನನ್ನೊಂದಿಗೆ ಹೆಚ್ಚಿನ ಸ್ತ್ರೀಯರು ಹೆಗಲುಕೊಡಿ ಎಂದು ಕರೆ ನೀಡಿದರು. ಹಾಗೇ, ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 15ರಿಂದ ಅರ್ಜಿ ಸ್ವೀಕಾರ ಪ್ರಾರಂಭವಾಗುತ್ತದೆ ಎಂದೂ ತಿಳಿಸಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ರಾಹುಲ್ ಗಾಂಧಿ ಅಧ್ಯಕ್ಷನ ಸ್ಥಾನದಿಂದ ಕೆಳಗೆಇಳಿದಿದ್ದಾರೆ. ಅದಾದ ಬಳಿಕ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿಯಾಗಿ, ಉತ್ತರಪ್ರದೇಶ ಉಸ್ತುವಾರಿ ಹೊತ್ತಿದ್ದಾರೆ. ಮುಂಬರುವ ಚುನಾವಣೆಗೆ ಅವರೇ ಕಾಂಗ್ರೆಸ್ ನೇತೃತ್ವ ವಹಿಸಲಿದ್ದಾರೆ. ಅಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾರೇ ಕಾಂಗ್ರೆಸ್ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಮಾತೂ ಕೇಳಿಬಂದಿದೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಬಹುಹಿಂದಿನಿಂದಲೂ ಸಾಮಾನ್ಯವಾಗಿ ಜಾತಿ ಪ್ರಮುಖಪಾತ್ರ ವಹಿಸುತ್ತದೆ. ಈ ಬಾರಿ ಮಾಯಾವತಿಯ ಬಿಎಸ್ಪಿ ಪಕ್ಷ ಸಹ ಬ್ರಾಹ್ಮಣರ ಓಲೈಕೆಗೆ ಮುಂದಾಗಿದೆ. ದಲಿತರು, ಬ್ರಾಹ್ಮಣರು ಹೀಗೆ ಜಾತಿ ಆಧಾರಿತವಾಗಿಯೇ ಟಿಕೆಟ್ ಹಂಚಿಕೆ, ಮತಯಾಚನೆಗಳೆಲ್ಲ ನಡೆಯುತ್ತವೆ. ಆದರೆ ಈ ಬಾರಿ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಲಿಂಗ ಆಧಾರಿತವಾಗಿ ಟಿಕೆಟ್ ನೀಡಲು ಮುಂದಾಗಿದೆ. ಮಹಿಳಾ ಸಮಾನತೆ ಸಾರಲು ಹೊರಟಿರುವುದು ಪ್ರಿಯಾಂಕಾ ಗಾಂಧಿ ನಿರ್ಧಾರದಿಂದ ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: ವಾಲ್ಮೀಕಿ ದಿನಾಚರಣೆ ಹಿನ್ನೆಲೆ: ವಿವಿಧ ಕ್ಷೇತ್ರಗಳ ಆರು ಮಂದಿ ಸಾಧಕರು ಪ್ರಶಸ್ತಿಗೆ ಆಯ್ಕೆ- ಶ್ರೀರಾಮುಲು
Published On - 3:34 pm, Tue, 19 October 21