ಗುವಾಹಾಟಿ: ಮಾರ್ಚ್ 27ರಿಂದ ಜರುಗಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಬೆಳಗ್ಗೆ ಅಸ್ಸಾಂನ ಬಿಸ್ವನಾಥ್ ಜಿಲ್ಲೆಯ ಚಹಾ ತೋಟದ ಕಾರ್ಮಿಕರ ಜತೆ ಚಹಾ ಗಿಡಗಳ ಕುಡಿಗಳನ್ನು ಬಿಡಿಸಿದ್ದಾರೆ. ಚಹಾ ತೋಟದಲ್ಲಿ ಚಹಾ ಗಿಡಗಳ ಕುಡಿಗಳನ್ನು ಬಿಡಿಸುವ ಕೆಲಸ ನಿರ್ವಹಿಸುವ ಮಹಿಳೆಯರ ಜತೆ ಸಂವಾದ ನಡೆಸುತ್ತ ಚಹಾ ಗಿಡಗಳ ಕುಡಿಗಳನ್ನು ಬಿಡಿಸಿದ ಅವರು ನಂತರ ಚಹಾ ಸವಿದಿದ್ದಾರೆ.
ಚಹಾ ತೋಟದಲ್ಲಿ ಕೆಲಸ ಮಾಡುವ ಮಹಿಳೆಯರ ಜತೆ ನಿನ್ನೆಯಿಂದಲೂ ಬೆರೆಯುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಿನ್ನೆ ಅಸ್ಸಾಂನ ಸಾಂಪ್ರದಾಯಿಕ ನೃತ್ಯ ಝುಮುರ್ಗೆ ಹೆಜ್ಜೆ ಹಾಕಿದ್ದರು. ಇಂದು ಸಹ ಚಹಾ ತೋಟದ ಮಹಿಳಾ ಕಾರ್ಮಿಕರ ಜತರೆ ಸಾಂಪ್ರದಾಯಿಕವಾಗಿ ಹೆಜ್ಜೆ ಹಾಕಿದ ಅವರು, ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರ ಶ್ರಮವನ್ನು ಶ್ಲಾಘಿಸಿದ್ದಾರೆ.
‘ಚಹಾ ತೋಟದ ಕಾರ್ಮಿಕರು ಸರಳತೆ ಮತ್ತು ಸತ್ಯದ ಪ್ರತಿಪಾದಕರು. ಅವರು ಪಡೆಯಬೇಕಾದ ಹಕ್ಕುಗಳಿಗಾಗಿ ನಾನು ಧ್ವನಿ ಎತ್ತುತ್ತೇನೆ. ಅವರ ಪರವಾಗಿ ಹೋರಾಡುತ್ತೇನೆ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಚಹಾ ತೋಟದಲ್ಲಿ ಕೆಲಸ ನಿರ್ವಹಿಸುವ ಮಹಿಳಾ ಕಾರ್ಮಿಕರ ಬಳಿ ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳು ಪೊರೆಯುತ್ತವೆಯೇ ಎಂದು ಅವರು ವಿಚಾರಿಸಿದ್ದಾರೆ.
ನಿನ್ನೆ ಝುಮುರ್ ನೃತ್ಯಗಾರ್ತಿಯಾಗಿದ್ದ ಪ್ರಿಯಾಂಕಾ ಗಾಂಧಿ
ಅಸ್ಸಾಂನ ಚಹಾ ತೋಟದ ಕಾರ್ಮಿಕರ ಸಾಂಪ್ರದಾಯಿಕ ನೃತ್ಯ ಝುಮುರ್ಗೆ ಹೆಜ್ಜೆ ಹಾಕಿದ್ದರು ಕಾಂಗ್ರೆಸ್ ನಾಯಕಿ. ಚುನಾವಣಾ ಪ್ರಚಾರದ ಹೆಸರಲ್ಲಿ ಸಾಂಪ್ರದಾಯಿಕ ನೃತ್ಯವೊಂದು ಜಗತ್ತಿನ ಗಮನ ಸೆಳೆದಿದೆ.
ಝುಮುರ್ ನೃತ್ಯಕ್ಕೆ ಅಸ್ಸಾಂನ ಟೀ ತೋಟದ ಕಾರ್ಮಿಕರ ಬದುಕಲ್ಲಿ ಇರುವ ಮಹತ್ವ ಅಪಾರ. ಟೀ ತೋಟಗಳಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಹೆಚ್ಚಾಗಿ ಶರತ್ಕಾಲದ ತಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲಿ ಝುಮುರ್ ನೃತ್ಯ ಮಾಡುತ್ತಾರೆ. ಅಸ್ಸಾಂ ಪ್ರವಾಸದಲ್ಲಿರುವ 49 ವರ್ಷದ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಟೀ ಕಾರ್ಮಿಕ ಜತೆ ಹೆಜ್ಜೆಹಾಕಿದ್ದರು. ಕೆಂಪು-ಬಿಳಿ ಬಣ್ಣದ ಸೀರೆ ಧರಿಸಿದ್ದ ಟೀ ತೋಟದ ಸ್ಥಳೀಯ ಕಾರ್ಮಿಕ ಹೆಣ್ಣುಮಕ್ಕಳು ಪ್ರಿಯಾಂಕಾ ಗಾಂಧಿ ವಾದ್ರಾ ಜತೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆಹಾಕಿದ್ದರು. ಝುಮುರ್ ನೃತ್ಯ ಪ್ರಕಾರ ಪಶ್ಚಿಮ ಬಂಗಾಳದ ಕೆಲ ಭಾಗಗಳಲ್ಲೂ ಕಂಡುಬರುತ್ತದೆ.
ಅಸ್ಸಾಂ ವಿಧಾನಸಭಾ ಚುನಾವಣೆ ಮಾರ್ಚ್ 27ರಿಂದ ಆರಂಭವಾಗಿ, ಎಪ್ರಿಲ್ 1, ಎಪ್ರಿಲ್ 6ರಂದು ಮುಕ್ತಾಯವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
Smt. @priyankagandhi learns the intricacies of tea leaf plucking directly from the women tea workers at Sadhuru tea garden, Assam.#AssamWithPriyankaGandhi pic.twitter.com/605Kuah2UL
— Congress (@INCIndia) March 2, 2021
ಇದನ್ನೂ ಓದಿ: ಅಸ್ಸಾಂ ಟೀ ತೋಟದಲ್ಲಿ ಕಾರ್ಮಿಕರ ಜತೆ ಪ್ರಿಯಾಂಕಾ ಗಾಂಧಿ ಝುಮುರ್ ನೃತ್ಯ
ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮೈತ್ರಿ ತೊರೆದು ಕಾಂಗ್ರೆಸ್ ಜತೆ ಕೈಜೋಡಿಸಿದ ಬಿಪಿಎಫ್