West Bengal Election 2021: ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಟಿಎಂಸಿ; ಈ ಬಾರಿ ಶೇ.30ರಷ್ಟು ಹೊಸಬರಿಗೆ ಟಿಕೆಟ್ !
ಟಿಎಂಸಿ ಪಕ್ಷ ಈ ಬಾರಿ ತಳಮಟ್ಟದ ಸಮೀಕ್ಷೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಈಗಾಗಲೇ 60 ವರ್ಷ ದಾಟಿದ ಹಲವು ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಅದರಲ್ಲೂ 80ವರ್ಷ ಮೇಲ್ಪಟ್ಟ ಯಾರಿಗೂ ಟಿಕೆಟ್ ನೀಡುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಅಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇನ್ನೆರಡು ಮೂರು ದಿನಗಳಲ್ಲಿ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ಈ ಸಂಬಂಧ ನಿನ್ನೆ (ಮಾ.1)ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪಕ್ಷದ ಚುನಾವಣೆ ಸಮಿತಿ ಸಭೆ ನಡೆದಿದೆ. ಮಮತಾ ಬ್ಯಾನರ್ಜಿಯವ ದಕ್ಷಿಣ ಕೋಲ್ಕತ್ತದ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬಲಾಢ್ಯ ಪಕ್ಷ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಿಂದ ಗಮನಾರ್ಹವಾಗಿ ತನ್ನ ವಿಸ್ತಾರವನ್ನು ಹೆಚ್ಚು ಮಾಡುತ್ತಿದೆ. ಈ ಬಾರಿ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿರುವ ಬಿಜೆಪಿ ನಾಯಕರು ಪದೇಪದೆ ಅಲ್ಲಿಗೆ ಭೇಟಿ ನೀಡಿ ಪ್ರಚಾರ ಕಾರ್ಯವನ್ನೂ ಕೈಗೊಂಡಿದ್ದಾರೆ. ಇನ್ನು ಬಿಜೆಪಿ ಯುವ ರಾಜಕಾರಣಿಗಳಿಗೆ ಮಣೆ ಹಾಕುವ ಒಂದು ಪರಿಪಾಠವನ್ನು ಬೆಳೆಸಿಕೊಂಡಿದ್ದು, ಪ್ರತಿ ರಾಜ್ಯಗಳ, ಲೋಕಸಭಾ ಚುನಾವಣೆಯಲ್ಲೂ ಈ ಪ್ರಯೋಗ ಮಾಡಿಕೊಂಡೇಬಂದಿದೆ. ಇದೀಗ ಟಿಎಂಸಿ ಕೂಡ ಇದೇ ಕ್ರಮ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಟಿಎಂಸಿ ಪಕ್ಷ ಈ ಬಾರಿ ತಳಮಟ್ಟದ ಸಮೀಕ್ಷೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಈಗಾಗಲೇ 60 ವರ್ಷ ದಾಟಿದ ಹಲವು ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಅದರಲ್ಲೂ 80ವರ್ಷ ಮೇಲ್ಪಟ್ಟ ಯಾರಿಗೂ ಟಿಕೆಟ್ ನೀಡುತ್ತಿಲ್ಲ. ಹೆಚ್ಚಾಗಿ ಮಹಿಳೆಯರು ಮತ್ತು ಯುವಮುಖಂಡರನ್ನೇ ಆಯ್ಕೆ ಮಾಡಿದೆ ಎನ್ನಲಾಗಿದೆ. ಬಿಜೆಪಿಗೆ ಸೇರಿದ 19 ಶಾಸಕರ ಕ್ಷೇತ್ರಗಳನ್ನೂ ಸೇರಿಸಿ, ಶೇ.30ರಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ ಎಂದು ಹಿರಿಯ ಟಿಎಂಸಿ ಮುಖಂಡರೊಬ್ಬರು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯವೊಂದು ವರದಿ ಮಾಡಿದೆ.
ಟಿಎಂಸಿಯಲ್ಲಿ 60 ವರ್ಷ ಮೇಲ್ಪಟ್ಟ ಅನೇಕ ಶಾಸಕರಿದ್ದಾರೆ. ಸದ್ಯ ಅಧಿಕಾರದಲ್ಲಿ ಇರುವ ಪ್ರತಿಯೊಬ್ಬ ಟಿಎಂಸಿ ಶಾಸಕನ 5 ವರ್ಷಗಳ ಕಾರ್ಯ, ಅವರ ಕ್ಷೇತ್ರದಲ್ಲಿ ಅವರಿಗೆ ಇರುವ ಫಾಲೋವರ್ಸ್, ಅವರ ಬಗ್ಗೆ ಮತದಾರರಿಗೆ ಇರುವ ಅಭಿಪ್ರಾಯಗಳನ್ನೆಲ್ಲ ಸಮೀಕ್ಷೆ ಮಾಡಲಾಗಿತ್ತು. ಈ ವರದಿಯನ್ನೂ ಅನ್ವಯ ಮಾಡಿಕೊಂಡು ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ತಯಾರಿಕೆ ಮಾಡಲಾಗಿದೆ. ಆದರೆ ಇಲ್ಲಿ ಮಮತಾ ಬ್ಯಾನರ್ಜಿಯವರೇ ಟಿಎಂಸಿ ಸುಪ್ರಿಮೋ ಆಗಿದ್ದು, ಕೊನೆಗೆ ಅವರೇ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಈಗಾಗಲೇ ಟಿಎಂಸಿಯಿಂದ ಬಿಜೆಪಿಗೆ ಹಲವರು ಸೇರಿದ್ದು, ಇದೀಗ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೆ ಏನಾಗಬಹುದು? ಮತ್ತೆಷ್ಟು ಜನ ಬಿಜೆಪಿಗೆ ಹೋಗಬಹುದು? ಎಂಬ ಪ್ರಶ್ನೆಯೂ ಎದ್ದಿದೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ಅಹಂಕಾರಕ್ಕೆ ಪಶ್ಚಿಮ ಬಂಗಾಳದ ಜನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅಬ್ಬಾಸ್ ಸಿದ್ದಿಕಿ