TRP Scam | ಬಾರ್ಕ್ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ಗುಪ್ತಾಗೆ ಜಾಮೀನು ಮಂಜೂರು
TRP Scam: ಬಾರ್ಕ್ ಸಂಸ್ಥೆಯ ಮಾಜಿ ಸಿಇಓ ಪಾರ್ಥೋ ದಾಸ್‌ಗುಪ್ತಾ ಅವರಿಗೆ ಅರ್ನಬ್ ಗೋಸ್ವಾಮಿ ಬೇರೆ ಬೇರೆ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂದಾಯಿಸಿದ್ದಾರೆ ಎಂದು ಮುಂಬೈ ಪೊಲೀಸರು ತಾವು ಕೋರ್ಟ್ಗೆ ಸಲ್ಲಿಸಿರುವ Remand Report ನಲ್ಲಿ ಉಲ್ಲೇಖಿಸಿದ್ದರು.
ಮುಂಬೈ: ಟಿಆರ್‌ಪಿ ತಿರುಚಿದ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬಾರ್ಕ್ ಸಂಸ್ಥೆಯ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರಿಗೆ ಬಾಂಬೇ ಹೈಕೋರ್ಟ್ ಜಾಮೀನು ನೀಡಿದೆ. ರೂ.2 ಲಕ್ಷ ವೈಯಕ್ತಿಕ ಭದ್ರತೆ ಬಾಂಡ್ ಮತ್ತು ಅದೇ ಮೊತ್ತದ ಎರಡು ಭದ್ರತಾ ಠೇವಣಿ ನೀಡಿ ಜಾಮೀನು ಪಡೆಯಲು ಸೂಚಿಸಿದೆ. ಜತೆಗೆ, ಆರು ತಿಂಗಳವರೆಗೆ ಪ್ರತಿ ತಿಂಗಳ ಮೊದಲ ಶನಿವಾರದಂದು ಮುಂಬೈ ಕ್ರೈಂ ಬ್ರಾಂಚ್ಗೆ ಹಾಜರಾಗುವಂತೆ ಕೋರ್ಟ್ ಷರತ್ತು ವಿಧಿಸಿದೆ.
ಸೆಕ್ಷನ್ 439ರ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಆಧರಿಸಿ ಆರೋಗ್ಯಕ್ಕೆ ಸಂಬಂಧಿಸಿ ಪಾರ್ಥೋ ದಾಸ್‌ಗುಪ್ತಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡು ವಾರಗಳ ಹಿಂದೆ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್ ಇಂದು ಆದೇಶ ನೀಡುವುದಾಗಿ ತಿಳಿಸಿತ್ತು. ಮುಂಬೈಯ ಸೆಶನ್ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಾರ್ಥೋ ದಾಸ್‌ಗುಪ್ತಾ ಬಾಂಬೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿಯ ವಿಚಾರಣೆಯಲ್ಲಿ ಹಿರಿಯ ವಕೀಲರುಗಳಾದ ಆಬಾದ್ ಪೋಂಡಾ ಮತ್ತು ಶಾರ್ದೂಲ್ ಸಿಂಗ್ ಅವರು ಪಾರ್ಥೋ ದಾಸ್‌ಗುಪ್ತಾ ಅವರ ಪರ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆಯೇನು? ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ ವಾಹಿನಿಗಳ ಟಿಆರ್ಪಿಯನ್ನು ಅಕ್ರಮವಾಗಿ ಹೆಚ್ಚಿಸುವ ಸಲುವಾಗಿ ಬಾರ್ಕ್ ಸಂಸ್ಥೆಯ ಮಾಜಿ ಸಿಇಓ ಪಾರ್ಥೋ ದಾಸ್‌ಗುಪ್ತಾ ಅವರಿಗೆ ಅರ್ನಬ್ ಗೋಸ್ವಾಮಿ ಬೇರೆ ಬೇರೆ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಹಣ ಸಂದಾಯಿಸಿದ್ದಾರೆ ಎಂದು ಮುಂಬೈ ಪೊಲೀಸರು ತಾವು ಕೋರ್ಟ್ಗೆ ಸಲ್ಲಿಸಿರುವ Remand Report ನಲ್ಲಿ ಉಲ್ಲೇಖಿಸಿದ್ದರು. ಈ ಮೂಲಕ ಟಿಆರ್‌ಪಿ ಅಕ್ರಮ ಪ್ರಕರಣದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಹೆಸರನ್ನು ನೇರವಾಗಿ ಪ್ರಸ್ತಾಪಿಸಿದ್ದರು.
ಪಾರ್ಥೋ ದಾಸ್‌ಗುಪ್ತಾ ಅವರು ಬಾರ್ಕ್ ಸಂಸ್ಥೆಯ ಸಿಇಓ ಆಗಿದ್ದಾಗ ಅವರೊಂದಿಗೆ ಅಂದಿನ ಇತರೆ ಸಿಬ್ಬಂದಿ ಕೂಡಾ ಅಕ್ರಮದಲ್ಲಿ ಶಾಮೀಲಾಗಿರಬಹುದು ಎಂದು Remand Report ವರದಿಯಲ್ಲಿ ಅನುಮಾನಿಸಲಾಗಿದೆ. ಟೈಮ್ಸ್ ನೌ ವಾಹಿನಿಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಅರ್ನಬ್ ಮತ್ತು ದಾಸ್‌ಗುಪ್ತಾ ಇಬ್ಬರೂ ರಿಪಬ್ಲಿಕ್ ಟಿವಿಯ ಟಿಆರ್‌ಪಿ ಹೆಚ್ಚಳದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದರು.
ಮುಂಬೈನ ಹೊಟೇಲುಗಳಲ್ಲಿ ಡಾಲರ್ ರೂಪದಲ್ಲಿ ಹಣ ನೀಡಿದ್ದಾರೆ? ಟಿಆರ್‌ಪಿ ಹೆಚ್ಚಿಸುವುದಕ್ಕಾಗಿ ಅವರಿಬ್ಬರೂ ಕನಿಷ್ಠ 3 ಬಾರಿ ಮುಂಬೈನ ಬೇರೆ ಬೇರೆ ಹೊಟೇಲುಗಳಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ದಾಸ್‌ಗುಪ್ತಾ ಅವರಿಗೆ ಅರ್ನಬ್ ದೊಡ್ಡ ಮೊತ್ತದ ನಗದನ್ನು ನೀಡಿದ್ದಾರೆ ಮತ್ತು ಒಂದು ಬಾರಿ ಯುಎಸ್ ಡಾಲರ್ನಲ್ಲಿ ಅವರಿಗೆ ಹಣ ಸಂದಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ವಿಶ್ಲೇಷಣೆ | ಅರ್ನಬ್ ವಾಟ್ಸ್ಆ್ಯಪ್ ಚಾಟ್ ಲೀಕ್; ಏನು ಉದ್ದೇಶ? ಯಾರಿಗೆ ಲಾಭ?
TRP ಹಗರಣದಲ್ಲಿ ಅರ್ನಬ್ ಗೋಸ್ವಾಮಿ ಶಾಮೀಲು.. ಮೊಟ್ಟಮೊದಲ ಬಾರಿಗೆ ಅರ್ನಬ್ ಹೆಸರು ಪ್ರಸ್ತಾಪಿಸಿದ ಮುಂಬೈ ಪೊಲೀಸರು
Published On - 12:27 pm, Tue, 2 March 21