ಕವಿ ವರವರ ರಾವ್​ಗೆ ಷರತ್ತು ಬದ್ಧ ಜಾಮೀನು ನೀಡಿದ ಬಾಂಬೇ ಹೈಕೋರ್ಟ್; ಮುಂಬೈ ಬಿಟ್ಟು ಹೋಗಬಾರದು..

ಎನ್​ಐಎ ಕೋರ್ಟ್​ನ ವ್ಯಾಪ್ತಿ ಬಿಟ್ಟು ಇತರೆಡೆ ತೆರಳಬಾರದು. ಭೀಮಾ ಕೋರೆಂಗಾವ್ ಪ್ರಕರಣಕ್ಕೆ ಕಾರಣವಾದ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂಬ ಷರತ್ತಿನೊಂದಿಗೆ ಕವಿ ವರವರ ರಾವ್ ಅವರಿಗೆ ಜಾಮೀನು ದೊರೆತಿದೆ.

  • TV9 Web Team
  • Published On - 12:03 PM, 22 Feb 2021
ಕವಿ ವರವರ ರಾವ್​ಗೆ ಷರತ್ತು ಬದ್ಧ ಜಾಮೀನು ನೀಡಿದ ಬಾಂಬೇ ಹೈಕೋರ್ಟ್; ಮುಂಬೈ ಬಿಟ್ಟು ಹೋಗಬಾರದು..
ತೆಲಂಗಾಣ ಕವಿ ವರವರರಾವ್​ಗೆ ಜಾಮೀನು ದೊರೆತಿದೆ

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮೂರು ವರ್ಷದಿಂದ ಜೈಲುವಾಸ ಅನುಭವಿಸುತ್ತಿದ್ದ ತೆಲಂಗಾಣದ ಕವಿ ವರವರ ರಾವ್​ಗೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್​ ಆರು ತಿಂಗಳವರೆಗೆ ಷರತ್ತುಬದ್ಧ ಜಾಮೀನು ನೀಡಿದೆ. ಎನ್​ಐಎ ಕೋರ್ಟ್​ನ ವ್ಯಾಪ್ತಿ ಬಿಟ್ಟು ಇತರೆಡೆ ತೆರಳಬಾರದು. ಭೀಮಾ ಕೋರೆಂಗಾವ್ ಪ್ರಕರಣಕ್ಕೆ ಕಾರಣವಾದ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಕೋರ್ಟ್ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.

NIA ಕೋರ್ಟ್​ ವ್ಯಾಪ್ತಿ ಬಿಟ್ಟು ಎಲ್ಲಿಗೂ ಹೋಗಬಾರದು. ಅಗತ್ಯ ಬಿದ್ದಾಗ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು.ಪ್ರಕರಣ ದಾಖಲಾಗಲು ಕಾರಣವಾದ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಷರತ್ತು ವಿಧಿಸಿರುವ ಬಾಂಬೇ ಹೈಕೋರ್ಟ್ ಭೀಮಾ ಕೋರೆಂಗಾವ್ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಕವಿ ವರವರ ರಾವ್​ಗೆ 6 ತಿಂಗಳ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಅವರನ್ನು ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣ ಸೇರಿದಂತೆ ದೇಶದ ಬುದ್ಧಿಜೀವಿಗಳು ಸತತವಾಗಿ ಆಗ್ರಹಿಸಿದ್ದರು. ಬಂಧನಕ್ಕೂ ಮೊದಲು ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು.

ಮಾನವ ಹಕ್ಕುಗಳ ರಕ್ಷಣೆಯ ಸಂಕೇತವಾಗಿ ಜಾಮೀನು

81 ವರ್ಷದ ವರವರ ರಾವ್ ಅಗಸ್ಟ್, 2018ರಿಂದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದರು. ಅವರಿಗೆ ಷರತ್ತು ಬದ್ಧ ಜಾಮೀನು ನೀಡಿರುವ ಬಾಂಬೇ ಹೈಕೋರ್ಟ್ 50,000 ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಲು ಸಹ ಸೂಚಿಸಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದಷ್ಟೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ನ್ಯಾಯಾಧೀಶರಾದ ಎಸ್.ಎಸ್. ಶಿಂಧೆ ಮತ್ತು ಮನೀಷ್ ಪೀಟೇಲ್ ಅವರನ್ನು ಒಳಗೊಂಡಿದ್ದ ನ್ಯಾಯಪೀಠ ಅನಾರೋಗ್ಯದ ಹಿನ್ನೆಲೆಯಲ್ಲಿ ವರವರ ರಾವ್ ಅವರಿಗೆ ಜಾಮೀನು ನೀಡದಿದ್ದರೆ, ಮಾನವ ಹಕ್ಕುಗಳನ್ನು ರಕ್ಷಿಸಲು ವಿಫಲವಾದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ನಾಗರಿಕರ ಬದುಕುವ ಮತ್ತು ಆರೋಗ್ಯದ ಹಕ್ಕುಗಳು ಮೂಲಭೂತ ಹಕ್ಕುಗಳಾಗಿದ್ದು, ಅವುಗಳನ್ನು ಅಧರಿಸಿ ವರವರ ರಾವ್ ಅವರಿಗೆ ಜಾಮೀನು ನೀಡಲಾಗಿದೆ ಎಂದು ಕೋರ್ಟ್ ತಿಳಿಸಿದೆ.

ಏನಿದು ಭೀಮಾ- ಕೋರೆಗಾಂವ್ ಪ್ರಕರಣ ? ಏಕಿಷ್ಟು ಮಹತ್ವ?

ಡಿಸೆಂಬರ್ 31, 2017ರಂದು ಎಲ್ಗಾರ್ ಪರಿಷದ್ ಭೀಮಾ ಕೊರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ್ ಎಂಬ ಕಾರ್ಯಕ್ರಮವನ್ನು ಶನಿವಾರವಾಡೆಯಲ್ಲಿ ಆಯೋಜಿಸಿತ್ತು. ಮರುದಿನ, ಅಂದರೆ ಜನವರಿ 1, 2018ರಂದು ಭೀಮಾ ಕೋರೆಗಾಂವ್ ವಿಜಯೋತ್ಸವದ 200ನೇ ವಾರ್ಷಿಕೋತ್ಸವದ ವೇಳೆ ನಡೆದ ಗಲಭೆಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು ಹಲವಾರು ಮಂದಿಗೆ ಗಾಯಗಳಾಗಿತ್ತು. ಈ ಗಲಭೆಗೆ ಪ್ರಚೋದನಾಕಾರಿ ಭಾಷಣವೇ ಕಾರಣ ಎಂದು ಹೇಳಿದ ಪುಣೆ ಪೊಲೀಸರು ಹಲವಾರು ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿದರು.

ಎಲ್ಗಾರ್ ಪರಿಷದ್ ಪ್ರಕರಣವನ್ನು ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿದೆ. ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ಜತೆ ನಂಟು ಹೊಂದಿದ್ದಾರೆ ಎಂಬ ಆರೋಪದಡಿ ಎನ್ಐಎ ಇಲ್ಲಿಯವರೆಗೆ ಸುಧೀರ್ ದವಾಲೆ, ಸುಧಾ ಭಾರಧ್ವಾಜ್, ಗೌತಮ್ ನವಲಖಾ, ವರವರ ರಾವ್ ಮತ್ತು ಸ್ಟಾನ್ ಸ್ವಾಮಿ ಅವರನ್ನು ಬಂಧಿಸಿದೆ.

ಕೋರೆಗಾಂವ್ ಎಂಬ ನದಿತಟದಲ್ಲಿ 1818 ಜನವರಿ 1ರ ಬೆಳಗ್ಗೆ ನಡೆದದ್ದು..

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ ಭೀಮಾಕೋರೆಗಾಂವ್ ಮರಾಠಾ ಇತಿಹಾಸದಲ್ಲಿ ಪ್ರಧಾನ ಪಾತ್ರ ವಹಿಸಿದೆ. 1818ರ ಜನವರಿ 1ರಂದು ಕೋರೆಗಾಂವ್ ನದೀತಟದಲ್ಲಿ 2ನೇ ಪೇಶ್ವೆ ಬಾಜೀರಾವ್ ನೇತೃತ್ವದ ಮರಾಠ ಸೇನೆ ಮತ್ತು ಬ್ರಿಟಿಷ್ ಸೇನೆ ನಡುವೆ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷರ ಮಹಾರ್​ ರೆಜಿಮೆಂಟ್​ ಪೇಶ್ವೆಗಳ ಸೇನೆಯನ್ನು ಪರಾಭವಗೊಳಿಸಿತ್ತು. ಪೇಶ್ವೆಗಳ ದೌರ್ಜನ್ಯದ ವಿರುದ್ಧ ಮಹಾರ್ ಸಮುದಾಯದವರ ಗೆಲುವು ಇದು ಎಂದೇ ನಂತರದ ದಿನಗಳಲ್ಲಿ ಇದನ್ನು ವಿಶ್ಲೇಷಿಸಲಾಯಿತು. ಈ ಯುದ್ಧವನ್ನು ಭೀಮಾಕೋರೆಗಾಂವ್ ಯುದ್ಧ ಎಂದೇ ಇತಿಹಾಸದಲ್ಲಿ ಬಣ್ಣಿಸಲಾಗಿದೆ.

ಗೆಲುವು ತಂದುಕೊಟ್ಟ ಯೋಧರ ನೆನಪಿಗಾಗಿ ಈಸ್ಟ್ ಇಂಡಿಯಾ ಕಂಪನಿ ವಿಜಯಸ್ತಂಭ ಸ್ಥಾಪಿಸಿತ್ತು. ಪರ್ತಿ ವರ್ಷವೂ ಜ.1ರಂದು ಸಾವಿರಾರು ದಲಿತರು ಇಲ್ಲಿ ಪುಪ್ಪಾರ್ಚನೆ ಮಾಡಿ ಗೌರವ ಸಲ್ಲಿಸುತ್ತಾರೆ.

ಇದನ್ನೂ ಓದಿ: ಭೀಮಾ-ಕೋರೆಗಾಂವ್ ಕದನಕ್ಕೆ 203 ವರ್ಷ; ಭಾರತದ ದಲಿತ ಕಥನದಲ್ಲಿ ಈ ಯುದ್ಧಕ್ಕೆ ಏಕಿಷ್ಟು ಪ್ರಾಮುಖ್ಯ?