ಟರ್ಕಿ ವಿರುದ್ಧ ಮೋದಿ ಸರ್ಕಾರ ದಿಟ್ಟ ಕ್ರಮ: ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್‌ಗೆ ಭದ್ರತಾ ಅನುಮತಿ ರದ್ದು
ಪಹಲ್ಗಾಮ್ ನರಮೇಧದ ಬಳಿಕ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ನೀರು, ರಫ್ತು ಹಾಗೂ ಆಮದಾಗುವ ವಸ್ತುಗಳ ಮೇಲೆ ನಿಷೇಧ ಹೇರಿ ನರೇಂದ್ರ ಮೋದಿ ಸರ್ಕಾರ ಪಾಠ ಕಲಿಸಿತ್ತು. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನದ ದೋಸ್ತಿ ಬೆಳೆಸಿರುವ ಟರ್ಕಿ ವಿರುದ್ಧವೂ ಸಹ ಭಾರತ ಸರ್ಕಾರ ಒಂದೊಂದೆ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್‌ಗೆ ಭದ್ರತಾ ಅನುಮತಿ ರದ್ದುಗೊಳಿಸಿದೆ.

ನವದೆಹಲಿ, (ಮೇ 15): ಭಾರತ (India) ನಡೆಸಿದ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ಬಳಿಕ ಮಿತ್ರರಾಷ್ಟ್ರವೆಂದು ಹೇಳುತ್ತಿದ್ದ ಟರ್ಕಿಯ ದ್ರೋಹ ಬಯಲಾಗಿದೆ. ಅಗತ್ಯ ಹಾಗೂ ಸಂಕಷ್ಟದ ಸಂದರ್ಭಗಳಲ್ಲಿ ಭಾರತದಿಂದ ಸಹಾಯ ಪಡೆದುಕೊಂಡಿದ್ದ ಟರ್ಕಿ (Turkey) ದೇಶವು ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಆಪರೇಷನ್ ಸಿಂಧೂರ್ ವೇಳೆ ಟರ್ಕಿ ಪಾಕಿಸ್ತಾನಕ್ಕೆ (Pakistan) ಬೆಂಬಲಿಸಿದೆ. ಸಾಲದಕ್ಕೆ ಭಾರತದ ಮೇಲೆ ದಾಳಿ ಮಾಡಲು ಪಾಕ್ಗೆ ಡ್ರೋನ್ ಕೊಟ್ಟಿದೆ ಎನ್ನುವ ಅಂಶ ಬಯಲಿಗೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ಭಾರತ, ಸಹ ಟರ್ಕಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ಇದೀಗ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್‌ಗೆ (Celebi Airport Services) ಭದ್ರತಾ ಅನುಮತಿಯನ್ನು ರದ್ದುಗೊಳಿಸಲಾಗಿದೆ. ಈ ಸಂಬಂಧ ಭಾರೀಯ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಅಧಿಕೃತ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾಗಿದ್ದ ಭದ್ರತಾ ಅನುಮತಿಯನ್ನು ರದ್ದುಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಇಂದು (ಮೇ 15) ಆದೇಶ ಹೊರಡಿಸಿದೆ. ಈ ಮೂಲಕ ಟರ್ಕಿಗೆ ನರೇಂದ್ರ ಮೋದಿ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ.
ಇದನ್ನೂ ಓದಿ: Turkey: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?
ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 1 ಮತ್ತು 2ನೇ ಟರ್ಮಿನಲ್‌ಗಳಲ್ಲಿ ಟರ್ಕಿ ಮೂಲದ ಕಂಪನಿಯಾದ ಸೆಲೆಬಿ, ಬ್ರಿಡ್ಜ್ ಮೌಂಟೆಡ್ ಸಲಕರಣೆಗಳ ಸ್ಥಾಪಿನೆ ಮತ್ತು ನಿರ್ವಹಣೆಯ ಸೇವೆಯನ್ನು 2022ರಿಂದ ಒದಗಿಸುತ್ತಿದೆ. ಟರ್ಕಿಯ ಗ್ರೌಂಡ್ ಹ್ಯಾಂಡ್ಲಿಂಗ್ ಸಂಸ್ಥೆ ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಬೆಂಗಳೂರು ಮಾತ್ರವಲ್ಲದೇ ದೆಹಲಿ ಮತ್ತು ಮುಂಬೈ ಸೇರಿದಂತೆ ಭಾರತ ಇತರೆ ವಿಮಾನ ನಿಲ್ದಾಣಗಳಿಗೂ ಸೇವೆಯನ್ನು ನೀಡುತ್ತಿದೆ. ಆದ್ರೆ, ಇದೀಗ ಇದಕ್ಕೆ ಭಾರತ ಬ್ರೇಕ್ ಹಾಕಿದೆ.
ಟರ್ಕಿ ವಿವಿ ಜತೆಗಿನ ಜೆಎನ್‌ಯು ಎಂಒಯು ರದ್ದು
ಪಾಕ್ ಪರವಾಗಿ ನಿಂತು ಎಲ್ಲಾ ಕ್ಷೇತ್ರಗಳಲ್ಲಿ ಭಾರತದಿಂದ ಪೆಟ್ಟು ತಿನ್ನುತ್ತಿರುವ ಟರ್ಕಿಯ ವಿಶ್ವವಿದ್ಯಾಲಯದ ಜತೆಗಿನ ಶೈಕ್ಷಣಿಕ ತಿಳುವಳಿಕೆ ಪತ್ರ(ಎಂಒಯು)ವನ್ನು ಜವಾಹರಲಾಲ್ ವಿವಿ, ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ರದ್ದುಪಡಿಸಿದೆ. ಅಂತರ್ ಸಾಂಸ್ಕೃತಿಕ ಸಂಶೋಧನೆ ಮತ್ತು ಸಹಯೋಗವನ್ನು ಹೆಚ್ಚಿಸುವ ಸಲುವಾಗಿ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ವಿನಿಮಯ ಸೇರಿದಂತೆ ಇನೋನು ವಿವಿ ಜತೆ ಜೆಎನ್‌ಯು 3 ವರ್ಷದ ಹಿಂದೆ ಎಂಒಯುಗೆ ಸಹಿ ಹಾಕಿತ್ತು.
2023ರ ಫೆಬ್ರವರಿಯಲ್ಲಿ ಭೂಕಂಪದಿಂದ ತತ್ತರಿಸಿದ್ದ ಟರ್ಕಿಗೆ ಭಾರತ ‘ಆಪರೇಷನ್ ದೋಸ್ತ್’ ಹೆಸರಿನಲ್ಲಿ ನೆರವಾಗಿತ್ತು. ಆದರೆ ಅದನ್ನೆಲ್ಲ ಮರೆತು ಇದೀಗ ಉಗ್ರರ ಸ್ವರ್ಗ ಪಾಕಿಸ್ತಾನದ ಬೆನ್ನಿಗೆ ನಿಲ್ಲುವ ಮೂಲಕ ಟರ್ಕಿ ಭಾರತಕ್ಕೆ ಮಿತ್ರದ್ರೋಹವೆಸಗಿದೆ. ಸಾಲದ್ದಕ್ಕೆ, ಭಾರತದ ವಿರುದ್ಧ ಬಳಸಲು ತನ್ನ ಡ್ರೋನ್‌ಗಳನ್ನೂ ಪಾಕಿಸ್ತಾನಕ್ಕೆ ನೀಡಿದೆ. ಪಹಲ್ಗಾಂ ದಾಳಿಗೆ ಪ್ರತ್ಯುತ್ತರವಾಗಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರನೆಲೆಗಳ ಮೇಲೆ ಭಾರತ ನಡೆಸಿದ ಪ್ರಹಾರವನ್ನು ಟರ್ಕಿ ಮತ್ತು ಅಜರ್ಬೈಜಾನ್ ರಾಷ್ಟ್ರಗಳು ಖಂಡಿಸಿದ್ದವು. ಈ ಹಿನ್ನೆಲೆಯಲ್ಲಿ ಮಿತ್ರದ್ರೋಹಿ ಟರ್ಕಿಗೆ ಭಾರತ ಇದೀಗ ಒಂದೊಂದೇ ಪಾಠ ಕಲಿಸುತ್ತಿದೆ.
Published On - 7:18 pm, Thu, 15 May 25








