AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Turkey: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?

Can India cut off trade relationship with Turkey and Azerbaijan: ಭಾರತದ ವಿರುದ್ಧ ಸ್ಪಷ್ಟವಾಗಿ ನಿಲುವು ತಳೆದಿರುವ ಕೆಲ ದೇಶಗಳಲ್ಲಿ ಟರ್ಕಿ ಮತ್ತು ಅಜರ್​​ಬೈಜಾನ್ ಸೇರುತ್ತವೆ. ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನಕ್ಕೆ ಟರ್ಕಿ ನೇರವಾಗಿ ನೆರವು ನೀಡಿತ್ತು. ಡ್ರೋನ್​ಗಳ ಜೊತೆಗೆ ತನ್ನ ಜನರನ್ನೂ ಟರ್ಕಿ ಕಳುಹಿಸಿಕೊಟ್ಟಿತ್ತು. ಈ ಎರಡು ದೇಶಗಳ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ...

Turkey: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?
ಟರ್ಕಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2025 | 3:09 PM

Share

ನವದೆಹಲಿ, ಮೇ 14: ಭಾರತದ ಆಪರೇಷನ್ ಸಿಂದೂರ್ (Operation Sindoor) ವೇಳೆ ಪಾಕಿಸ್ತಾನಕ್ಕೆ ನೆರವು ನೀಡಿದ ಕೆಲ ದೇಶಗಳಿವೆ. ಚೀನಾದಿಂದ ಪರೋಕ್ಷ ನೆರವು ಸಿಕ್ಕಿತಾದರೂ ನೇರ ಬೆಂಬಲ ನೀಡಿದ್ದು ಪ್ರಮುಖವಾಗಿ ಟರ್ಕಿ ಮತ್ತು ಅಜರ್​ಬೈಜಾನ್. ಭಾರತದ ಆಪರೇಷನ್ ಸಿಂದೂರವನ್ನು ಖಂಡಿಸಿತ್ತು ಅಜರ್​​ಬೈಜಾನ್. ಆದರೆ, ಸಕ್ರಿಯವಾಗಿ ಭಾಗವಹಿಸಿದ್ದು ಟರ್ಕಿ. ಅರಬ್ ನಾಡಿನ ಭಾಗವಾಗಿರುವ, ಆದರೆ ಯೂರೋಪ್ ಖಂಡದ ಗಡಿಯಲ್ಲಿರುವ ಟರ್ಕಿ ಜೊತೆ ಪಾಕಿಸ್ತಾನದ ಸ್ನೇಹ ಇತ್ತೀಚಿನ ವರ್ಷಗಳಲ್ಲಿ ಬಹಳ ಅನ್ಯೋನ್ಯವಾಗಿದೆ. ಭಾರತದ ಮೇಲೆ ಆಕ್ರಮಣ ಮಾಡಲು ಪಾಕಿಸ್ತಾನಕ್ಕೆ ಡ್ರೋನ್​ಗಳನ್ನು, ಜೊತೆಗೆ ಮಿಲಿಟರಿ ಆಪರೇಟಿವ್​​ಗಳನ್ನೂ ಟರ್ಕಿ ಕಳುಹಿಸಿಕೊಟ್ಟಿತ್ತು.

ಪಹಲ್ಗಾಂ ದಾಳಿಯಾದಾಗ ಭಾರತದಿಂದ ಯಾವಾಗ ಬೇಕಾದರೂ ಪ್ರತಿದಾಳಿಯಾಗುವ ಸಾಧ್ಯತೆ ಇದ್ದರಿಂದ, ಆಗಲೇ ಟರ್ಕಿಯಿಂದ ಪಾಕಿಸ್ತಾನಕ್ಕೆ ಸಹಾಯಹಸ್ತ ಸಿಕ್ಕಿತ್ತು. ಭಾರತವು ಮೇ 6-7ರಂದು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ ನಂತರದ ನಾಲ್ಕು ದಿನಗಳ ಸಂಘರ್ಷದ ವೇಳೆ ಟರ್ಕಿ 350ಕ್ಕೂ ಹೆಚ್ಚು ಡ್ರೋನ್​​ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿತ್ತು. ಆ ಸಂದರ್ಭದಲ್ಲಿ ಟರ್ಕಿ ವಿಮಾನವೊಂದು ಪಾಕಿಸ್ತಾನದ ಕರಾಚಿ ಏರ್​​ಪೋರ್ಟ್​​ಗೆ ಬಂದಿಳಿದಿದೆ ಎನ್ನುವಂತಹ ಸುದ್ದಿ ಇತ್ತು. ಆ ವಿಮಾನದಲ್ಲಿ ಟರ್ಕಿಯ ಪ್ರಬಲ ಡ್ರೋನ್​​ಗಳಿದ್ದುವು ಎಂದು ಹೇಳಲಾಗುತ್ತಿದೆ.

ಮಿಲಿಟರಿ ಆಪರೇಟಿವ್​​ಗಳನ್ನೂ ಕಳುಹಿಸಿಕೊಟ್ಟಿದ್ದ ಟರ್ಕಿ

ಬರೀ ಡ್ರೋನ್ ಅಷ್ಟೇ ಅಲ್ಲ, ಆ ಡ್ರೋನ್​​ಗಳನ್ನು ಆಪರೇಟ್ ಮಾಡಬಲ್ಲ ಇಬ್ಬರು ನಿಪುಣರನ್ನೂ ಟರ್ಕಿ ಕಳುಹಿಸಿಕೊಟ್ಟಿತ್ತು. ಭಾರತದ ಮೇಲೆ ತಂತ್ರಾತ್ಮಕವಾಗಿ ಡ್ರೋನ್​​ಗಳ ದಾಳಿ ಹೇಗೆ ಸಂಯೋಜಿಸುವುದು ಎಂಬುದನ್ನು ಇವರು ಪಾಕಿಸ್ತಾನೀಯರಿಗೆ ಸಲಹೆ ನೀಡಿದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಇದು ಟಾಪ್ ಸೀಕ್ರೆಟ್… ಆಪರೇಷನ್ ಸಿಂದೂರದಿಂದ ಹಲವರ ಬಣ್ಣ ಬಯಲು; ಅಮೆರಿಕ ನಡುಗಲು ನಿಜ ಕಾರಣ ಏನು ಗೊತ್ತಾ?

ಭಾರತದಲ್ಲಿ ಪತನವಾದ ಪಾಕಿಸ್ತಾನೀ ಡ್ರೋನ್​​​ಗಳು ಟರ್ಕಿ ನಿರ್ಮಿತವಾದುವು ಎಂಬುದು ಸಾಬೀತಾಗಿದೆ. ಟರ್ಕಿಯ ಬಯ್ರಾಕ್ತರ್ ಟಿಬಿ2 ಮತ್ತು ಯಿಹಾ ಡ್ರೋನ್​​ಗಳನ್ನು ಪಾಕಿಸ್ತಾನ ಬಳಸಿತ್ತು. ಭಾರತದ ಡಿಫೆನ್ಸ್ ಸಿಸ್ಟಂ ಅನ್ನು ನಿಷ್ಕ್ರಿಯಗೊಳಿಸುವ, ಅಥವಾ ರಕ್ಷಣಾ ವ್ಯವಸ್ಥೆಯ ತಾಂತ್ರಿಕ ಅಂಶಗಳನ್ನು ಗುರುತಿಸುವ ಉದ್ದೇಶದಿಂದ ಈ ಡ್ರೋನ್​​​ಗಳನ್ನು ಪ್ರವಾಹೋಪಾದಿಯಲ್ಲಿ ಪಾಕಿಸ್ತಾನ ಹಾರಿಬಿಟ್ಟಿತ್ತು.

ಎರ್ಡೋಗನ್ ಅಧಿಕಾರಕ್ಕೆ ಬಂದಾಗಿನಿಂದ ಯಡವಟ್ಟು

ಈ ಮೊದಲೇ ಹೇಳಿದಂತೆ, ಪಾಕಿಸ್ತಾನದ ಜೊತೆ ಟರ್ಕಿ ಸಂಬಂಧ ಇತ್ತೀಚಿನ ಕೆಲ ದಶಕಗಳಿಂದ ಗಾಢವಾಗುತ್ತಿದೆ. ಎರ್ಡೋಗನ್ ಅವರು ಟರ್ಕಿ ಅಧ್ಯಕ್ಷರಾದ ಬಳಿಕ ಅದರ ನೀತಿಯು ಸ್ಪಷ್ಟ ಪಾಕ್ ಪರ ನಿಲುವಾಗಿದೆ. ಚೀನಾದಂತೆ ಟರ್ಕಿ ಕೂಡ ಪಾಕಿಸ್ತಾನಕ್ಕೆ ಸರ್ವಋತು ಸ್ನೇಹಿತನಾಗಿದೆ. ಪಾಕಿಸ್ತಾನಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲ, ತರಬೇತಿಯನ್ನೂ ನೀಡುತ್ತಿದೆ ಟರ್ಕಿ.

ಇನ್ನು, ಅಜರ್​ಬೈಜಾನ್ ಕೂಡ ಭಾರತ ವಿರೋಧಿ ದೇಶಗಳಲ್ಲಿ ಒಂದು. ಅಜರ್​ಬೈಜಾನ್ ಮತ್ತು ಆರ್ಮೇನಿಯಾ ನಡುವಿನ ಸಂಘರ್ಷದಲ್ಲಿ ಪಾಕಿಸ್ತಾನದಿಂದ ಅಜರ್​ಬೈಜಾನ್​​ಗೆ ಮಿಲಿಟರಿ ನೆರವು ಪೂರೈಕೆ ಆಗುತ್ತದೆ. ಆರ್ಮೇನಿಯಾ ದೇಶಕ್ಕೆ ಭಾರತವು ಶಸ್ತ್ರಾಸ್ತ್ರ ಸರಬರಾಜು ಮಾಡುತ್ತದೆ.

ಟರ್ಕಿ ಮತ್ತು ಅಜರ್​​ಬೈಜಾನ್ ಜೊತೆ ಭಾರತದ ವ್ಯಾಪಾರ ಸಂಬಂಧ ಹೇಗಿದೆ?

ಟರ್ಕಿ ಮತ್ತು ಅಜರ್​ಬೈಜಾನ್ ಸ್ಪಷ್ಟ ಪಾಕ್ ಪರ ನಿಲುವು ಹೊಂದಿದರೂ, ಆ ದೇಶಗಳ ಜೊತೆ ಭಾರತದ ವ್ಯಾಪಾರ ಸಂಬಂಧ ಇದೆ. ಹೀಗಾಗಿ, ಈ ಎರಡು ದೇಶಗಳ ಜೊತೆ ಭಾರತ ಸಂಪೂರ್ಣ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಟರ್ಕಿ ಮತ್ತು ಅಜರ್​​ಬೈಜಾನ್ ಜೊತೆ ಭಾರತದ ವ್ಯಾಪಾರ ತೀರಾ ಹೆಚ್ಚಿಲ್ಲ. ಆ ದೇಶಗಳಿಂದ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚು ರಫ್ತು ಮಾಡುತ್ತದೆ ಭಾರತ.

ಇದನ್ನೂ ಓದಿ: ಭಾರತೀಯ ಸೇನೆ, ಮೇಕ್​ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಶ್ಲಾಘಿಸಿದ ಅಮೆರಿಕ ರಕ್ಷಣಾ ತಜ್ಞ ಜಾನ್ ಸ್ಪೆನ್ಸರ್

2023-24ರಲ್ಲಿ ಟರ್ಕಿಗೆ ಭಾರತದ ರಫ್ತು 6.64 ಬಿಲಿಯನ್ ಡಾಲರ್ ಇತ್ತು. ಇದು 2024-25ರಲ್ಲಿ (ಏಪ್ರಿಲ್-ಫೆಬ್ರುವರಿ 11 ತಿಂಗಳು) 5.2 ಬಿಲಿಯನ್ ಡಾಲರ್​​ಗೆ ಇಳಿದಿದೆ. ಭಾರತದ ಒಟ್ಟಾರೆ ರಫ್ತಿನಲ್ಲಿ ಟರ್ಕಿ ಪಾಲು ಶೇ. 1.5ರಷ್ಟು ಮಾತ್ರ. 2024-25ರಲ್ಲಿ ಟರ್ಕಿಯಿಂದ ಭಾರತ 2.84 ಬಿಲಿಯನ್ ಡಾಲರ್​​ನಷ್ಟು ಆಮದು ಮಾಡಿಕೊಂಡಿತು. ಇದೂ ಕೂಡ ಭಾರತದ ಒಟ್ಟಾರೆ ಆಮದಿನಲ್ಲಿ ಶೇ. 0.5 ಮಾತ್ರ.

ಅಜರ್​​ಬೈಜಾನ್ ಜೊತೆ ಇನ್ನೂ ಕಡಿಮೆ ವ್ಯಾಪಾರ

ಇದೇ ವೇಳೆ, ಅಜರ್​ಬೈಜಾನ್​​ಗೆ ಭಾರತ ಒಂದು ವರ್ಷದಲ್ಲಿ 86.07 ಮಿಲಿಯನ್ ಡಾಲರ್​​ನಷ್ಟು ರಫ್ತು ಆಗಿತ್ತು. 1.93 ಮಿಲಿಯನ್ ಡಾಲರ್ ಆಮದು ಮಾತ್ರವೇ ಇದ್ದದ್ದು. ಇದೂ ಕೂಡ ಭಾರತದ ಒಟ್ಟಾರೆ ಆಮದು ಮತ್ತು ರಫ್ತಿನಲ್ಲಿ ಶೇ. 0.1 ಕೂಡ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ