ಭೀಮಾ-ಕೋರೆಗಾಂವ್ ಕದನಕ್ಕೆ 203 ವರ್ಷ; ಭಾರತದ ದಲಿತ ಕಥನದಲ್ಲಿ ಈ ಯುದ್ಧಕ್ಕೆ ಏಕಿಷ್ಟು ಪ್ರಾಮುಖ್ಯ?
1818ರ ಜನವರಿ 1ರಂದು ಕೋರೆಗಾಂವ್ ನದೀತಟದಲ್ಲಿ 2ನೇ ಪೇಶ್ವೆ ಬಾಜೀರಾವ್ ನೇತೃತ್ವದ ಮರಾಠ ಸೇನೆ ಮತ್ತು ಬ್ರಿಟಿಷ್ ಸೇನೆ ನಡುವೆ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷರ ಮಹಾರ್ ರೆಜಿಮೆಂಟ್ ಪೇಶ್ವೆಗಳ ಸೇನೆಯನ್ನು ಪರಾಭವಗೊಳಿಸಿತ್ತು.
ಮುಂಬೈ: ಪುಣೆಯ ಪೆರಣೆ ಗ್ರಾಮದಲ್ಲಿ ಜನವರಿ 1ರಂದು ಭೀಮಾ–ಕೋರೆಗಾಂವ್ ಕದನದ 203ನೇ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ಕೋವಿಡ್ ನಿರ್ಬಂಧವಿರುವ ಕಾರಣ ಕಾರ್ಯಕ್ರಮಗಳಿಗೆ ಮಿತಿ ಹೇರಲಾಗಿದೆ. ಶುಕ್ರವಾರ ಬೆಳಗ್ಗೆ ಜಯಸ್ತಂಭದಲ್ಲಿ ಬೌದ್ಧ ಬಿಕ್ಕುಗಳು ಬುದ್ಧ ವಂದನಾ ಮತ್ತು ಧಮ್ಮ ದೆಸನ ಪ್ರಾರ್ಥನೆ ಸಲ್ಲಿಸಿದ್ದು, ಸಮತಾ ಸೇನೆಯ ಸದಸ್ಯರು ಮತ್ತು ಸೇನಾಪಡೆಯ ಮಹಾರ್ ರೆಜಿಮೆಂಟ್ನ ನಿವೃತ್ತ ಯೋಧರು ಶುಕ್ರವಾರ ಬೆಳಗ್ಗೆ ಕವಾಯತು ನಡೆಸಿದ್ದಾರೆ.
ಮಹಾರಾಷ್ಟ್ರದ ಸಚಿವರಾದ ಅಜಿತ್ ಪವಾರ್, ಅನಿಲ್ ದೇಶ್ಮುಖ್ ಮತ್ತು ನಿತಿನ್ ರಾವುತ್ ಜಯಸ್ತಂಭಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಡಿಸೆಂಬರ್ 30, 2020 ರಿಂದ ಜನವರಿ 2, 2021 ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144ರ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಪುಣೆ ಜಿಲ್ಲಾಡಳಿತವು ಸಮಸ್ತ ಹಿಂದೂ ಅಘಾಡಿಯ ನಾಯಕ ಮಿಲಿಂದ್ ಎಕ್ಬೋಟೆ, ಎಲ್ಗಾರ್ ಪರಿಷದ್ ಆಯೋಜಕರು, ಕಬೀರ್ ಕಲಾಮಂಚ್ (ಕೆಕೆಎಂ) ಸದಸ್ಯರು, ದಲಿತ ಕಾರ್ಯಕರ್ತರು ಮತ್ತು ಭೀಮಾ–ಕೋರೆಗಾಂವ್ ಪ್ರದೇಶದ ಕೆಲವು ಜನರಿಗೆ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿದೆ.
ಡಿಸೆಂಬರ್ 31, 2017ರಂದು ಎಲ್ಗಾರ್ ಪರಿಷದ್ ಭೀಮಾ ಕೊರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ್ ಎಂಬ ಕಾರ್ಯಕ್ರಮವನ್ನು ಶನಿವಾರವಾಡೆಯಲ್ಲಿ ಆಯೋಜಿಸಿತ್ತು. ಮರುದಿನ, ಅಂದರೆ ಜನವರಿ 1, 2018ರಂದು ಭೀಮಾ ಕೋರೆಗಾಂವ್ ವಿಜಯೋತ್ಸವದ 200ನೇ ವಾರ್ಷಿಕೋತ್ಸವದ ವೇಳೆ ನಡೆದ ಗಲಭೆಯಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು ಹಲವಾರು ಮಂದಿಗೆ ಗಾಯಗಳಾಗಿತ್ತು. ಈ ಗಲಭೆಗೆ ಪ್ರಚೋದನಾಕಾರಿ ಭಾಷಣವೇ ಕಾರಣ ಎಂದು ಹೇಳಿದ ಪುಣೆ ಪೊಲೀಸರು ಹಲವಾರು ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿದರು.
ಎಲ್ಗಾರ್ ಪರಿಷದ್ ಪ್ರಕರಣವನ್ನು ಸದ್ಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿದೆ. ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ಜತೆ ನಂಟು ಹೊಂದಿದ್ದಾರೆ ಎಂಬ ಆರೋಪದಡಿ ಎನ್ಐಎ ಇಲ್ಲಿಯವರೆಗೆ ಸುಧೀರ್ ದವಾಲೆ, ಸುಧಾ ಭಾರಧ್ವಾಜ್, ಗೌತಮ್ ನವಲಖಾ, ವರವರ ರಾವ್ ಮತ್ತು ಸ್ಟಾನ್ ಸ್ವಾಮಿ ಅವರನ್ನು ಬಂಧಿಸಿದೆ.
ಏನಿದು ಭೀಮಾ–ಕೋರೆಗಾಂವ್ ಕದನ?
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ ಭೀಮಾ–ಕೋರೆಗಾಂವ್ ಮರಾಠಾ ಇತಿಹಾಸದಲ್ಲಿ ಪ್ರಧಾನ ಪಾತ್ರ ವಹಿಸಿದೆ. 1818ರ ಜನವರಿ 1ರಂದು ಕೋರೆಗಾಂವ್ ನದೀತಟದಲ್ಲಿ 2ನೇ ಪೇಶ್ವೆ ಬಾಜೀರಾವ್ ನೇತೃತ್ವದ ಮರಾಠ ಸೇನೆ ಮತ್ತು ಬ್ರಿಟಿಷ್ ಸೇನೆ ನಡುವೆ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷರ ಮಹಾರ್ ರೆಜಿಮೆಂಟ್ ಪೇಶ್ವೆಗಳ ಸೇನೆಯನ್ನು ಪರಾಭವಗೊಳಿಸಿತ್ತು. ಪೇಶ್ವೆಗಳ ದೌರ್ಜನ್ಯದ ವಿರುದ್ಧ ಮಹಾರ್ ಸಮುದಾಯದವರ ಗೆಲುವು ಇದು ಎಂದೇ ನಂತರದ ದಿನಗಳಲ್ಲಿ ಇದನ್ನು ವಿಶ್ಲೇಷಿಸಲಾಯಿತು. ಈ ಯುದ್ಧವನ್ನು ಭೀಮಾ–ಕೋರೆಗಾಂವ್ ಯುದ್ಧ ಎಂದೇ ಇತಿಹಾಸದಲ್ಲಿ ಬಣ್ಣಿಸಲಾಗಿದೆ.
ಗೆಲುವು ತಂದುಕೊಟ್ಟ ಯೋಧರ ನೆನಪಿಗಾಗಿ ಈಸ್ಟ್ ಇಂಡಿಯಾ ಕಂಪನಿ ವಿಜಯಸ್ತಂಭ ಸ್ಥಾಪಿಸಿತ್ತು. ಪರ್ತಿ ವರ್ಷವೂ ಜ.1ರಂದು ಸಾವಿರಾರು ದಲಿತರು ಇಲ್ಲಿ ಪುಪ್ಪಾರ್ಚನೆ ಮಾಡಿ ಗೌರವ ಸಲ್ಲಿಸುತ್ತಾರೆ.
After the battle of Koregaon Bhima, the British erected a 75 feet high victory pillar on the banks of the river Bhima in memory of the brave Mahar soldiers and engraved the names of the martyred and wounded Mahar soldiers on it..#BhimaKoregaon pic.twitter.com/BQ5mnQ8U3p
— Deepali Salve? (@deepalisalve12) December 31, 2020
ಜನವರಿ 1, 2018ರ ಭೀಮಾ–ಕೋರೆಗಾಂವ್ ಸಂಘರ್ಷ
2018ರಲ್ಲಿ ಭೀಮಾ ಕೋರೆಗಾಂವ್ ಯುದ್ಧಕ್ಕೆ 200 ವರ್ಷವಾಗಿತ್ತು. ಇದನ್ನು ಸ್ಮರಿಸಲೆಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2018ರಲ್ಲಿ ಅಲ್ಲಿ ನೆರೆದಿದ್ದ ಜನರ ಸಂಖ್ಯೆ ಜಾಸ್ತಿಯೇ ಇತ್ತು. ಕಾರ್ಯಕ್ರಮದ ವೇಳೆ ಮರಾಠಾರ ಗುಂಪು ಮತ್ತು ದಲಿತರ ಗುಂಪಿನ ನಡುವೆ ಸಂಘರ್ಷ ನಡೆದು ಓರ್ವ ವ್ಯಕ್ತಿ ಸಾವಿಗೀಡಾದರು. ಹಲವಾರು ಮಂದಿಗೆ ಗಾಯಗಳಾದವು.
ಡಿ.29, 2017ರಲ್ಲಿ ಗೋವಿಂದ್ ಗೋಪಾಲ್ ಮಹಾರ್ ಅವರ ಸಮಾಧಿ ಬಳಿ ಇದ್ದ ಫಲಕ ತೆಗೆದು ಹಾಕಿದ್ದು ಈ ಸಂಘರ್ಷಕ್ಕೆ ಕಾರಣವಾಗಿತ್ತು. ಡಿ.31ರಂದು ದಲಿತ ಮತ್ತು ಬಹುಜನ ಸಂಘಟನೆಗಳು ಸಾರ್ವಜನಿಕ ಸಭೆಯೊಂದನ್ನು ಆಯೋಜಿಸಿದ್ದವು. ಆ ಸಭೆಯಲ್ಲಿ ನಡೆದ ಪ್ರಚೋದನಾಕಾರಿ ಭಾಷಣದಿಂದಲೇ ಭೀಮಾ–ಕೋರೆಗಾಂವ್ ನಲ್ಲಿ ಸಂಘರ್ಷವೇರ್ಪಟ್ಟಿತು ಎಂದು ಪೊಲೀಸರು ಆರೋಪಿಸಿದ್ದರು.
Big Bang, Voice of the Voiceless, a musical team of youth from slums in Karnataka performed for us.. #RepealUAPA #FreeAllPoliticalPrisoners #savetheconstitution pic.twitter.com/WzIOfj8x9N
— @BhimaKoregaon (@bkoregaon_kar) January 1, 2021
Published On - 4:10 pm, Fri, 1 January 21