ಇಂದಿನಿಂದ ಜಾರಿಗೆ ಬರಲಿವೆ ಕೆಲ ಹೊಸ ನಿಯಮಗಳು? ಮಹತ್ವದ ಆ ಬದಲಾವಣೆಗಳು ಏನು? ವಿವರ ಇಲ್ಲಿದೆ..
ಚೆಕ್ ವಂಚನೆಗೆ ಕಡಿವಾಣ ಹಾಕಲು ಚೆಕ್ ಗಳಿಗೆ ಪಾಸಿಟಿವ್ ಪೇ ಸಿಸ್ಟಂ , ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಸೇರಿದಂತೆ ಹಲವಾರು ನಿಯಮ, ಬದಲಾವಣೆಗಳು ಜನವರಿ 1ರಿಂದಲೇ ಜಾರಿಗೆ ಬರಲಿವೆ. ಏನೆಲ್ಲಾ ಬದಲಾವಣೆಗಳು ಬರಲಿವೆ ಎಂಬುದರ ಬಗ್ಗೆ ಇಲ್ಲಿದೆ ವಿವರ

ಇಂದಿನಿಂದ ಅಂದ್ರೆ 2021 ಜನವರಿ 1ರಿಂದ ಕೆಲ ನಿಯಮಗಳು ಬದಲಾಗಲಿವೆ. ಚೆಕ್ ವಂಚನೆಗೆ ಕಡಿವಾಣ ಹಾಕಲು ಚೆಕ್ ಗಳಿಗೆ ಪಾಸಿಟಿವ್ ಪೇ ಸಿಸ್ಟಂ, ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ, ಎಲ್ ಪಿಜಿ ಬೆಲೆ ಪರಿಷ್ಕರಣೆ ಮೊದಲಾದ ಬದಲಾವಣೆಗಳು ಜನವರಿ ತಿಂಗಳಲ್ಲಿಯೇ ಜಾರಿಗೆ ಬರಲಿವೆ. ಈ ವರ್ಷದಿಂದ ಜಾರಿಯಾಗಲಿರುವ 10 ಬದಲಾವಣೆಗಳ ಪಟ್ಟಿ ಇಲ್ಲಿದೆ.
1. ಚೆಕ್ ಗಳಿಗೆ ಪಾಸಿಟಿವ್ ಪೇ ಸಿಸ್ಟಂ
ಚೆಕ್ ಮೂಲಕ ಹಣ ಪಾವತಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಾಸಿಟಿವ್ ಪೇ ಸಿಸ್ಟಂ ಪರಿಚಯಿಸಿದ್ದು, ಈ ಹೊಸ ನಿಯಮ ಜನವರಿ 1ರಿಂದ ಜಾರಿಗೆ ಬರಲಿದೆ. ಇದರನ್ವಯ ಚೆಕ್ ಮೂಲಕ ₹ 50,000ಕ್ಕೂ ಅಧಿಕ ಪ್ರಮಾಣದ ಹಣ ಪಾವತಿ ಮಾಡುವವರು ಕೆಲವು ಪ್ರಮುಖ ಮಾಹಿತಿಗಳನ್ನು ಸಂಬಂಧಪಟ್ಟ ಬ್ಯಾಂಕಿಗೆ ಸಲ್ಲಿಸಿ ಮರು ಧೃಡೀಕರಿಸಬೇಕಿದೆ.
ಪಾಸಿಟಿವ್ ಪೇ ಸಿಸ್ಟಂ ಹೇಗಿರುತ್ತದೆ? ಈ ವ್ಯವಸ್ಥೆಯಲ್ಲಿ ಸಂಬಂಧಪಟ್ಟ ಬ್ಯಾಂಕ್, ಹಣ ಪಾವತಿಗೆ ಸಲ್ಲಿಸಿದ ಚೆಕ್‌ನ ದಿನಾಂಕ, ಸಂಖ್ಯೆ, ಚೆಕ್ ಪಡೆದವರ ಹೆಸರು, ಖಾತೆ ಸಂಖ್ಯೆ, ಚೆಕ್‌ನ ಮೊತ್ತ ಇತರೆ ಮಾಹಿತಿಗಳನ್ನ ಮರು ದೃಢೀಕರಣದ ಮೂಲಕ ಖಚಿತಪಡಿಸಿಕೊಳ್ಳುತ್ತದೆ.
ಅಂದರೆ ಚೆಕ್ ನೀಡಿದವರು, ಚೆಕ್ ಪಡೆದವರ ಹೆಸರು, ಮೊತ್ತದ ಮಾಹಿತಿಯನ್ನ ಎಸ್ಎಂಎಸ್, ಮೊಬೈಲ್ ಆಪ್, ಇಂಟರ್ನೆಟ್ ಬ್ಯಾಂಕ್ ಅಥವಾ ಎಟಿಎಂ ಮೂಲಕ ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ. ಚೆಕ್ ಪಡೆದವರು ಹಣ ಪಡೆಯಲು ಬಂದಾಗ ಚೆಕ್ ನೀಡಿದವರು ಸಲ್ಲಿಸಿದ ಮಾಹಿತಿಯನ್ನು ತಾಳೆ ಹಾಕಲಾಗುತ್ತದೆ. ಹೀಗೆ ಮಾಡುವಾಗ ಬ್ಯಾಂಕಿಗೆ ಸಲ್ಲಿಸಿದ ಮಾಹಿತಿ ತಾಳೆ ಆಗದಿದ್ದರೆ ಹಣ ಪಾವತಿಯಾಗುವುದಿಲ್ಲ. 50,000ಕ್ಕಿಂತ ಹೆಚ್ಚು ಮೊತ್ತದ ಪಾವತಿಗಳಿಗೆ ಈ ರೀತಿ ಮರು ದೃಢೀಕರಣ ಅತ್ಯಗತ್ಯ.
2. ಕಾಂಟಾಕ್ಟ್ ಲೆಸ್ ಕಾರ್ಡ್ ವಹಿವಾಟು ಮಿತಿ ಹೆಚ್ಚಳ ಕಾಂಟಾಕ್ಟ್ ಲೆಸ್ ಕಾರ್ಡ್ ವಹಿವಾಟು ಮಿತಿ ₹2,000ದಿಂದ ₹5,000ಕ್ಕೆ ಹೆಚ್ಚಳವಾಗಲಿದೆ. 2021 ಜನವರಿ 1ರಿಂದ ಇದು ಜಾರಿಗೆ ಬರಲಿದ್ದು ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಆರ್ಬಿಐ ಈ ನಡೆ ಸ್ವೀಕರಿಸಿದೆ.
3. ಸಣ್ಣ ಉದ್ಯಮಗಳ ಜಿಎಸ್ಟಿ ₹5 ಕೋಟಿಯವರೆಗೆ ವಹಿವಾಟು ನಡೆಸುವ ಉದ್ಯಮಗಳು 12 ಜಿಎಸ್ ಟಿ ಸೇಲ್ಸ್ ರಿಟರ್ನ್ಸ್ ಸಲ್ಲಿಸುವ ಬದಲು ಇನ್ನುಮುಂದೆ 4 ಜಿಎಸ್ಟಿ ಸೇಲ್ಸ್ ರಿಟರ್ಸ್ ಮಾತ್ರ ಸಲ್ಲಿಸಿದರೆ ಸಾಕು.
4. ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಜನವರಿ 1ರಿಂದ ದೇಶದಾದ್ಯಂತ ನಾಲ್ಕು ಚಕ್ರದ ವಾಹನಗಳಿಗೆ, 2017 ಡಿಸೆಂಬರ್ 1ಕ್ಕಿಂತ ಮುನ್ನ ಮಾರಾಟವಾಗಿರುವ ಎಂ ಆ್ಯಂಡ್ ಎನ್ ಕೆಟಗರಿಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಲಿದೆ. ಸಾಕಷ್ಟು ಮಂದಿಗೆ ಫಾಸ್ಟ್ ಟ್ಯಾಗ್ ಬಗ್ಗೆ ಅರಿವು ಇಲ್ಲದೇ ಇರುವ ಕಾರಣ ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಫೆಬ್ರುವರಿ 15ರ ವರೆಗೆ ಇಲ್ಲಿ ಹಣ ಪಾವತಿ ಮಾಡಿ ಸಂಚರಿಸಬಹುದು. ಆದರೆ ಫೆಬ್ರುವರಿ 15ರೊಳಗೆ ಫಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ.
@MORTHIndia has mandated fitment of FASTag with effect from 1st January, 2021, in M and N categories of motor vehicles sold before 1st December, 2017. pic.twitter.com/rbOlpm4xhj
— MORTHINDIA (@MORTHIndia) December 31, 2020
5. ಸರಳ್ ಜೀವನ್ ಭೀಮಾ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಅಕ್ಟೋಬರ್‌ನಲ್ಲಿ ಎಲ್ಲಾ ಜೀವ ವಿಮಾ ಕಂಪನಿಗಳಿಗೆ ಜನವರಿ 1 ರಿಂದ ‘ಸರಳ್ ಜೀವನ್ ಭೀಮಾ’ ಎಂಬ ಪ್ರಮಾಣಿತ, ವೈಯಕ್ತಿಕ ಅವಧಿಯ ಜೀವ ವಿಮಾ ಪಾಲಿಸಿಯನ್ನು ಕಡ್ಡಾಯವಾಗಿ ಪರಿಚಯಿಸಲು ನಿರ್ದೇಶಿಸಿತ್ತು. ಈ ಪ್ರಮಾಣೀಕೃತ ನೀತಿಯು ಏಕರೂಪದ ವೈಶಿಷ್ಟ್ಯಗಳೊಂದಿಗೆ ಖಾತರಿಪಡಿಸಿದ ಮೊತ್ತವನ್ನು ನೀಡಲಿದ್ದು, ಮೊದಲ ಬಾರಿ ಖರೀದಿದಾರರಿಗಿರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ . ಇದು ಕನಿಷ್ಠ ₹ 5 ಲಕ್ಷ ಮತ್ತು ಗರಿಷ್ಠ ಮೊತ್ತ ₹25 ಲಕ್ಷವನ್ನು ಹೊಂದಿರುತ್ತದೆ.
6. ಲ್ಯಾಂಡ್ ಲೈನ್ನಿಂದ ಮೊಬೈಲ್ ಫೋನ್ ಗೆ ಕರೆ ಲ್ಯಾಂಡ್ ಲೈನ್ ನಿಂದ ಮೊಬೈಲ್ ಫೋನ್ ಗೆ ಕರೆ ಮಾಡುವಾಗ ಮೊಬೈಲ್ ಸಂಖ್ಯೆಯ ಮುಂದೆ ‘0’ (ಸೊನ್ನೆ) ಸೇರಿಸಬೇಕು. ಈ ವ್ಯವಸ್ಥೆ ಜನವರಿ 15ರಿಂದ ಜಾರಿಗೆ ಬರಲಿದೆ.
7. ಎಲ್ಪಿಜಿ ದರ ಏರಿಕೆ ಪ್ರತಿ ತಿಂಗಳ ಮೊದಲ ದಿನ ಇಂಧನ ಮಾರಾಟಗಾರರು ಎಲ್ಪಿಜಿ ಸಿಲಿಂಡರ್ ನ ದರವನ್ನು ಪರಿಷ್ಕರಿಸಲಿದ್ದು ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಪಿಜಿ ದರ, ಅಮೆರಿಕನ್ ಡಾಲರ್ ಮತ್ತು ರೂಪಾಯಿ ಮೌಲ್ಯವನ್ನು ಆಧರಿಸಿರುತ್ತದೆ.
8 . ಕಾರು ಬೆಲೆ ಏರಿಕೆ ಮಾರುತಿ ಸುಜುಕಿ ಇಂಡಿಯಾ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಜನವರಿ 1ರಿಂದ ವಾಹನ ಬೆಲೆ ಏರಿಕೆ ಮಾಡಲಿದೆ. ಎಂಜಿ ಮೋಟರ್ ಮತ್ತು ರೀನಲ್ಟ್ ಇಂಡಿಯಾ ಕೂಡಾ ದೇಶದಲ್ಲಿ ತಮ್ಮ ಕಾರು ಬೆಲೆ ಹೆಚ್ಚಳ ಮಾಡಲಿದೆ.
9. ಎಲೆಕ್ಟ್ರಾನಿಕ್ ಉಪಕರಣಗಳು ತುಟ್ಟಿ ಎಲ್ಇಡಿ ಟಿವಿ , ರೆಫ್ರಿಜಿರೇಟರ್, ವಾಷಿಂಗ್ ಮೆಷೀನ್ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಜನವರಿ ತಿಂಗಳಲ್ಲಿ ಶೇ. 10 ರಷ್ಟು ಬೆಲೆ ಏರಿಕೆಯಾಗಲಿವೆ. ತಾಮ್ರ, ಅಲ್ಯೂಮಿನಿಯಂ ಮತ್ತು ಉಕ್ಕು ಬೆಲೆ ಏರಿಕೆಯಾಗಿರುವ ಕಾರಣ ಇವುಗಳ ಬೆಲೆ ಏರಿಕೆಯಾಗಲಿದೆ.
10. ಕೆಲವು ಫೋನ್ ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ ಅಂಡ್ರಾಯ್ಡ್ ಒಎಸ್ 4.0.3 ಮತ್ತು ಮುಂದಿನ ಆವೃತ್ತಿ , ಐಫೋನ್ ಐಒಎಸ್ 9 ಮತ್ತು ಮುಂದಿನ ಆವೃತ್ತಿ , Ka iOS 2.5.1 ಮತ್ತು ಮುಂದಿನ ಆವೃತ್ತಿ, ಜಿಯೊ ಫೋನ್ ಮತ್ತು ಜಿಯೊ ಫೋನ್ 2- ಇವುಗಳಲ್ಲಿ ಜನವರಿ 1ರಿಂದ ವಾಟ್ಸ್ ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ.
ಚೆಕ್ ಸುರಕ್ಷತೆಗಾಗಿ ಹೊಸ ವರ್ಷಕ್ಕೆ RBIನಿಂದ ಹೊಸ ನಿಯಮ ಜಾರಿ; ಇಲ್ಲಿದೆ Positive Pay system ಸಂಪೂರ್ಣ ಮಾಹಿತಿ