ಎಲ್ಲಾ ಬೇಡಿಕೆ ಈಡೇರುವವರೆಗೂ ಹೊಸ ವರ್ಷ ಆಚರಿಸುವುದಿಲ್ಲ: ರೈತ ನಾಯಕರ ಹೇಳಿಕೆ
ತಮ್ಮ ಎಲ್ಲಾ ಬೇಡಿಕೆಗಳು ಈಡೇರುವವರೆಗೂ ಹೊಸ ವರ್ಷಾಚರಣೆ ನಡೆಸುವುದಿಲ್ಲ ಎಂದು ಸಿಂಘು ಗಡಿಯಲ್ಲಿ ಚಳುವಳಿ ನಿರತ ರೈತರು ತಿಳಿಸಿದ್ದಾರೆ.
ದೆಹಲಿ: ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೊಸ ವರ್ಷ ಆಚರಿಸುವುದಿಲ್ಲ ಎಂದು ಸಿಂಘು ಗಡಿಯಲ್ಲಿ ಚಳುವಳಿ ನಿರತ ರೈತರು ಘೋಷಿಸಿದ್ದಾರೆ.
ಜನವರಿ 4ರಂದು ಕೇಂದ್ರ ಸರ್ಕಾರ ಇನ್ನೊಂದು ಸುತ್ತಿನ ಸಭೆ ಕರೆದು ಚರ್ಚಿಸುವ ಪ್ರಸ್ತಾಪವಿತ್ತಿದೆ. ಈಗಾಗಲೇ ರೈತರ 4 ಬೇಡಿಕೆಗಳಲ್ಲಿ 2 ಬೇಡಿಕೆಗಳನ್ನು ಈಡೇರಿಸುವ ಕುರಿತು ಒಪ್ಪಂದಕ್ಕೆ ಬರಲಾಗಿದೆ. ಉಳಿದ 2 ಬೇಡಿಕೆಗಳನ್ನು ರೈತರು ಪಟ್ಟು ಹಿಡಿದು ಕುಳಿತಿದ್ದು, ಅವುಗಳು ಈಡೇರದೇ ಯಾವ ಕಾರಣಕ್ಕೂ ಚಳುವಳಿಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಚಳುವಳಿ ಇಂದು 37ನೇ ದಿನ ಪ್ರವೇಶಿಸಿದ್ದು, ರಾಷ್ಟ್ರ ರಾಜಧಾನಿಯ ಕೊರೆಯುವ ಚಳಿಯ ನಡುವೆಯೂ ರೈತರು ಚಳುವಳಿ ಮುಂದುವರೆಸಿದ್ದಾರೆ.
ಪಂಜಾಬ್ ಮತ್ತು ಹರ್ಯಾಣದ 1000 ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯರ್ತೆಯರು, ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತೆಯರು ಸಿಂಘು ಗಡಿ ತಲುಪಿದ್ದಾರೆ. ಇಂದು 11.30ರಿಂದ ಗಡಿಯಲ್ಲಿ ತಮ್ಮ ಸಮವಸ್ತ್ರದಲ್ಲೇ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಹರಿಯಾಣ ಕಾಂಗ್ರೆಸ್ ಸಂಸದರು ಸಕುಟುಂಬ ಸಮೇತರಾಗಿ 25 ದಿನಗಳಿಂದ ದೆಹಲಿ ಚಲೋ ಚಳುವಳಿಯಲ್ಲಿ ಭಾಗವಹಿಸಿದ್ದಾರೆ.