ವಯನಾಡ್‌ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಅಣ್ಣನ ಜಾಗಕ್ಕೆ ತಂಗಿ ಸ್ಪರ್ಧೆ

|

Updated on: Oct 15, 2024 | 10:03 PM

ಕೇರಳದ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅಣ್ಣ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಂಗಿ ಕಣಕ್ಕಿಳಿಯಲಿದ್ದಾರೆ.

ವಯನಾಡ್‌ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಅಣ್ಣನ ಜಾಗಕ್ಕೆ ತಂಗಿ ಸ್ಪರ್ಧೆ
ಪ್ರಿಯಾಂಕಾ ಗಾಂಧಿ ವಾದ್ರಾ
Follow us on

ನವದೆಹಲಿ, (ಅಕ್ಟೋಬರ್ 15):   ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ಆಯೋಗ ದಿನಾಂಕ ಪ್ರಕಟಿಸಿದೆ. ಇದರ ಬೆನ್ನಲ್ಲೇ ಎಐಸಿಸಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಇಂದು (ಅಕ್ಟೋಬರ್ 15) ಎಐಸಿಸಿ ಅಧಿಕೃತವಾಗಿ ಘೋಷಿಸಿದೆ. ಇದು ಪ್ರಿಯಾಂಕಾ ಗಾಂಧಿ ಅವರ ಮೊದಲ ಚುನಾವಣೆಯಾಗಿದೆ.

ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಣ್ಣಕ್ಕಿಳಿದರೆ, ಇನ್ನುಳಿದಂತೆ ಪಾಲಕ್ಕಾಡ್​ ವಿಧಾನಸಭಾ ಕ್ಷೇತ್ರದಿಂದ ರಾಹುಲ್ ಮಾಂಕೂಟತ್ತಿಲ್ ಹಾಗೂ ಚೆಲ್ಲಕ್ಕಾರ ಮೀಸಲು ಕ್ಷೇತ್ರಕ್ಕೆ ರಮ್ಯಾ ಹರಿದಾಸ ಅವರನ್ನು ಕಣಕ್ಕಿಳಿಸಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡ್‌ ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಎರಡೂ ಕ್ಷೇತ್ರದಲ್ಲಿ ಗೆದ್ದಿದ್ದರು. ಆದ್ರೆ, ತಮ್ಮ ಕುಟುಂಬದ ಪ್ರತಿಷ್ಠೆಯ ಕ್ಷೇತ್ರವಾಗಿದ್ದ ರಾಯ್‌ಬರೇಲಿಯನ್ನು ಉಳಿಸಿಕೊಳ್ಳಲು ರಾಹುಲ್ ಗಾಂಧೀ ಅವರು ವಯನಾಡು ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು, ಈಗ ಅಣ್ಣನ ಜಾಗಕ್ಕೆ ತಂಗಿ ಸ್ಪರ್ಧೆ ಮಾಡಲಿದ್ದಾರೆ.

52 ವರ್ಷದ ಪ್ರಿಯಾಂಕಾ ಗಾಂಧಿ 1999ರಿಂದಲೂ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದು, ಆರಂಭದಲ್ಲಿ ಅಮೇಠಿಯಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿಯವರ ಪರ ಪ್ರಚಾರ ಮಾಡಿದ್ದರು. ಈ ಮೂಲಕ ರಾಜಕೀಯದಲ್ಲಿ ತನ್ನ ಸುದೀರ್ಘ ಉಪಸ್ಥಿತಿಯ ಹೊರತಾಗಿಯೂ ಪ್ರಿಯಾಂಕಾ ಎಂದೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಈಗ ತಮ್ಮ ಚೊಚ್ಚಲ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಒಂದು ವೇಳೆ ವಯನಾಡ್​ನಲ್ಲಿ ಪ್ರಿಯಾಂಕ ಗೆಲುವು ಸಾಧಿಸಿದರೆ, ಗಾಂಧಿ ಕುಟುಂಬದ ಮೂವರು ಸಂಸತ್ತಿಗೆ ಪ್ರವೇಶಿಸಿದಂತಾಗುತ್ತದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ವಯನಾಡ್​ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಶೇಕಡ 64ರಷ್ಟು ಮತ ಪಡೆದಿದ್ದರು. ಸಮೀಪದ ಸ್ಪರ್ಧಿ ಸಿಪಿಐನ ಅನ್ನಿ ರಾಜಾ ವಿರುದ್ಧ 3.64 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಇನ್ನು ಬಿಜೆಪಿಯಿಂದ ಕಣಕ್ಕಿಳಿದಿದ್ದ ರಾಜ್ಯಾಧ್ಯಕ್ಷ ಸುರೇಂದ್ರನ್​ 1.3 ಲಕ್ಷ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ರಾಯ್​ಬರೆಯಲ್ಲೂ ಸಹ ರಾಹುಲ್ ಗಾಂಧಿ 3.9 ಲಕ್ಷ ಮತಗಳ ಅಂತರರಿಂದ ಗೆದ್ದಿದ್ದರು.

ಇನ್ನು 2019ರಲ್ಲಿ ಅಮೇಠಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲುಕಂಡಿದ್ದ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದ್ದರು. ಈಗ ಅಣ್ಣ ಬಿಟ್ಟುಕೊಟ್ಟಿರುವ ವಯನಾಡ್​ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ.

ನವೆಂಬರ್ 13ರಂದು ವಯನಾಡ್​ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:28 pm, Tue, 15 October 24