ನವದೆಹಲಿ: ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಕೆಯಾಗಿದೆ. ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಪೀಠ ಮಾಡಿರುವ ಪ್ರತಿಕೂಲ ಅಭಿಪ್ರಾಯವನ್ನು ಹಿಂಪಡೆಯುವಂತೆ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.
ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ನೂಪುರ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅಗ್ಗದ ಪ್ರಚಾರ, ರಾಜಕೀಯ ಅಜೆಂಡಾ ಅಥವಾ ಕೆಲವು ಕೆಟ್ಟ ಚಟುವಟಿಕೆಗಳಿಗಾಗಿ ಈ ರೀತಿ ಹೇಳಿಕೆ ನೀಡಲಾಗಿದೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ದೆಹಲಿ ಮೂಲದ ಅಜಯ್ ಗೌತಮ್ ಅವರು ಪತ್ರದ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, “ನೂಪುರ್ ಶರ್ಮಾ ಅವರಿಗೆ ನ್ಯಾಯಯುತ ವಿಚಾರಣೆಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಅವರ ವಿರುದ್ಧದ ಅಭಿಪ್ರಾಯವನ್ನು ತೆಗೆದುಹಾಕಲು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠಕ್ಕೆ ಸೂಕ್ತ ಆದೇಶ ಅಥವಾ ನಿರ್ದೇಶನಗಳನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಅವರ ಪೀಠ ಶುಕ್ರವಾರ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಯನ್ನು ದೂಷಿಸಿತ್ತು. ಎಲುಬಿಲ್ಲದ ನಾಲಿಗೆಯು ಇಡೀ ದೇಶಕ್ಕೇ ಬೆಂಕಿ ಹಚ್ಚಿದೆ. ದೇಶದಲ್ಲಿ ಏನೇ ನಡೆದರು ಅದಕ್ಕೆ ಅವರೇ ಜವಾಬ್ದಾರರು ಎಂದು ಹೇಳಿತ್ತು.
ಮೊಹಮ್ಮದ್ ಅವರ ವಿರುದ್ಧ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯಲು ನೂಪುರ್ ಮಾಡಿದ ಮನವಿಯನ್ನು ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿತು.
ದೆಹಲಿಯ ನಿವಾಸಿ ಅಜಯ್ ಗೌತಮ್ ಎಂಬುವವರು ಸುಪ್ರೀಂ ಕೋರ್ಟ್‌ನಿಂದ ಅಭಿಪ್ರಾಯವನ್ನು ಹಿಂಪಡೆಯುವಂತೆ ಅರ್ಜಿ ಸಲ್ಲಿಸಿದ್ದಾರೆ. ಅಜಯ್ ಗೌತಮ್ ತಾನೊಬ್ಬ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ.
ನ್ಯಾಯಯುತ ವಿಚಾರಣೆಗೆ ಅವಕಾಶ ಸಿಗುವಂತೆ ನೂಪುರ್ ಶರ್ಮಾ ಅವರ ಪ್ರಕರಣದಲ್ಲಿನ ಆರೋಪಗಳನ್ನು ಹಿಂಪಡೆಯಲು ಸೂಕ್ತ ಆದೇಶ ಅಥವಾ ನಿರ್ದೇಶನವನ್ನು ಹೊರಡಿಸಿ ಎಂದು ಅರ್ಜಿಯಲ್ಲಿ ನ್ಯಾಯಮೂರ್ತಿ ರಮಣ ಅವರನ್ನು ಒತ್ತಾಯಿಸಲಾಗಿದೆ.
ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ ಬಳಿಕ ರಾಷ್ಟ್ರದಲ್ಲಿ ಪ್ರತಿಭಟನೆಗಳು ಆರಂಭವಾಗುತ್ತಿದ್ದಂತೆ ಬಿಜೆಪಿಯು ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿತ್ತು.
Published On - 10:08 am, Sun, 3 July 22