ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಎನ್ಡಿಎ ಮೈತ್ರಿ ಕೂಟ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕುತ್ತಿದೆ. ಒಟ್ಟು 30 ಕ್ಷೇತ್ರಗಳಿದ್ದು ಅದರಲ್ಲಿ 17ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿ ಮುನ್ನಡೆಯಲಿದ್ದು, 11ರಲ್ಲಿ ಯುಪಿಎ ಮುನ್ನಡೆ ಸಾಧಿಸಿದೆ.ಪುದುಚೇರಿಯಲ್ಲಿ ಇಂದು ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಶುರುವಾಗಿದೆ. ಈ ಹಿಂದಿನ ವಿ.ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಮಾಡಲಾಗದೆ ಇಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯಾಗಿತ್ತು. ಏಪ್ರಿಲ್ 6ರಂದು ಚುನಾವಣೆ ನಡೆದಿತ್ತು.
ಒಟ್ಟು 30 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಯಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದರೆ, ಡಿಎಂಕೆ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಾಗೇ ಬಿಜೆಪಿ+ ಎಐಎನ್ಆರ್ಸಿ + ಎಐಎಡಿಎಂಕೆ ಮೈತ್ರಿಯಲ್ಲಿ ಬಿಜೆಪಿ 9, ಎಐಎನ್ಆರ್ಸಿ 16 ಮತ್ತು ಎಐಎಡಿಎಂಕೆ 5 ಸೀಟುಗಳನ್ನು ಹಂಚಿಕೊಂಡಿದ್ದವು. 2016ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 16 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿದಿತ್ತು.
ಈ ಬಾರಿ ಇಲ್ಲಿ ಎನ್ಡಿಎ ಮುನ್ನಡೆಯಲಿದೆ. ಎನ್ಡಿಒ ಒಕ್ಕೂಟದ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್ ಮುಖ್ಯಸ್ಥ (AINRC), ಮಾಜಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ಅವರು ಯಾನಮ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಗಿಂತ ಮುನ್ನಡೆ ಸಾಧಿಸಿದ್ದರು. ಆದರೆ ಈಗ ಅವರು ಹಿನ್ನಡೆಯಲ್ಲಿದ್ದಾರೆ.
ಹಾಗೇ ಕದಿರ್ಗಾಮಮ್ ಕ್ಷೇತ್ರದಲ್ಲಿ ಎಐಎನ್ಆರ್ಸಿಯ ಎಸ್.ರಮೇಶ್ ಅವರು ಕಾಂಗ್ರೆಸ್ನ ಪಿ.ಸೆಲ್ವನಡಾನೆ ವಿರುದ್ಧ 12 ಸಾವಿರ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.
ಹಾಗೇ ಕಾಮರಾಜ್ ನಗರದ ಬಿಜೆಪಿ ಅಭ್ಯರ್ಥಿ ಜಾನ್ ಕುಮಾರ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ಮೊಹಮ್ಮದ್ ಶಹಜಾನ್ ವಿರುದ್ಧ 7229 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಸಹ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಮಾಹೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪರಂಬಾಥ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಸಿಪಿಐ (ಎಂ) ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಹರಿದಾಸ್ ವಿರುದ್ಧ 301 ಮತಗಳ ಅಂತರದಿಂದ ಗೆದ್ದಿದ್ದಾರೆ.