ಸೀರೆ ಉಟ್ಕೊಂಡೇ ಜಿಮ್​​ನಲ್ಲಿ ಎಲ್ಲ ವ್ಯಾಯಾಮ ಮಾಡ್ತಾರೆ ಪುಣೆಯ ಈ ವೈದ್ಯೆ; ವಿಡಿಯೋ ನೋಡಿ

ಬಹುತೇಕ ಮಹಿಳೆಯರು ಯೋಗ, ಎರೊಬಿಕ್ಸ್​ನಂತ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ನನ್ನ ಅಭಿಪ್ರಾಯವೆಂದರೆ ವೇಟ್​ ಲಿಫ್ಟಿಂಗ್​ ಕೂಡ ಮಾಡಬೇಕು. ಇದರಿಂದ ಯಾವುದೇ ಹಾನಿಯೂ ಇಲ್ಲ ಎನ್ನುತ್ತಾರೆ ಶರ್ವಾಣಿ.

ಸೀರೆ ಉಟ್ಕೊಂಡೇ ಜಿಮ್​​ನಲ್ಲಿ ಎಲ್ಲ ವ್ಯಾಯಾಮ ಮಾಡ್ತಾರೆ ಪುಣೆಯ ಈ ವೈದ್ಯೆ; ವಿಡಿಯೋ ನೋಡಿ
ಸೀರೆ ಉಟ್ಕೊಂಡೇ ವ್ಯಾಯಾಮ ಮಾಡುತ್ತಿರುವ ವೈದ್ಯೆ ಶರ್ವಾಣಿ
Edited By:

Updated on: Jun 17, 2021 | 7:05 PM

ಕಾಲೇಜಿಗೆ ಹೋಗೋ ಯುವತಿಯರು..ಮದುವೆಯಾದ ಮಹಿಳೆಯರು ಈಗ ಜಿಮ್​ಗೆ ಹೋಗೋದು ತುಂಬ ಕಾಮನ್. ಜಿಮ್​ ಅಂತಲ್ಲ, ಫಿಟ್​​ನೆಸ್​ಗಾಗಿ ಯೋಗ, ವ್ಯಾಯಾಮ, ವೇಟ್​ಲಿಫ್ಟಿಂಗ್​​ನಂತಹ ದೇಹದಂಡನೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಹೀಗೆ ವ್ಯಾಯಾಮ ಮಾಡೋವಾಗ ಆರಾಮದಾಯಕವಾಗಿರಲಿ ಎಂದು ಪ್ಯಾಂಟ್-ಶರ್ಟ್​, ಶಾರ್ಟ್ಸ್​-ಶರ್ಟ್​ಗಳನ್ನೇ ಧರಿಸುತ್ತಾರೆ. ಆದರೆ ನಾವೀಗ ಪರಿಚಯಿಸುತ್ತಿರುವ ಮಹಿಳೆ ಹಾಗಲ್ಲ. ಲಕ್ಷಣವಾಗಿ ಸೀರೆ ಉಟ್ಟುಕೊಂಡೇ ಫಿಟ್​ನೆಸ್​ ವ್ಯಾಯಾಮ ಮಾಡುತ್ತಾರೆ. ಜಿಮ್​ನಲ್ಲಿ ತರಬೇತಿ ನೀಡುತ್ತಾರೆ..ವೇಟ್​ ಲಿಫ್ಟ್​ ಟ್ರೇನಿಂಗ್​ ನೀಡುತ್ತಾರೆ. ಡಂಬಲ್ಸ್ ವ್ಯಾಯಾಮ ಮಾಡುತ್ತಾರೆ. ಇವರ ಹೆಸರು ಡಾ. ಶರ್ವಾಣಿ ಇಮಾಂದಾರ್​.

ಡಾ. ಶರ್ವಾಣಿ ಇಮಾಂದಾರ್​ ಪುಣೆಯ ನಿವಾಸಿ. ಸದ್ಯಕ್ಕಂತೂ ಇವರು ಇಂಟರ್​​ನೆಟ್​​ ಸೆನ್ಸೇಶನ್​. ಅದಕ್ಕೆ ಕಾರಣ ಸೀರೆ ಉಟ್ಕೊಂಡು ಇವರು ಮಾಡೋ ಫಿಟ್​ನೆಸ್​ ವ್ಯಾಯಾಮಗಳು. ಜಿಮ್​​ನಲ್ಲಿ ತರಬೇತಿದಾರರಾಗಿರುವ ಶರ್ವಾಣಿ ಪ್ರತಿಯೊಂದು ಪುಶ್​ಅಪ್​​ನಿಂದ ಹಿಡಿದು ಪ್ರತಿ ವ್ಯಾಯಾಮವನ್ನೂ ಸೀರೆಉಟ್ಟುಕೊಂಡೇ ಮಾಡೋದು ನೋಡಿ ನೆಟ್ಟಿಗರು ಫುಲ್​ ಖುಷಿಯಾಗಿದ್ದಾರೆ. ಕಳೆದ 5ವರ್ಷಗಳಿಂದಲೂ ಕಠಿಣ ಫಿಟ್​ನೆಸ್​ ವ್ಯಾಯಾಮದಲ್ಲಿ ತೊಡಗಿಕೊಂಡಿರುವ ಇವರು, ಸೀರೆಯಲ್ಲೂ ಅತ್ಯಂತ ಆರಾಮಾಗಿ ಮಾಡುವುದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶರ್ವಾಣಿ, ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಸೀರೆ ಉಡುವುದನ್ನು ಕಡಿಮೆ ಮಾಡಿದ್ದಾರೆ. ಕಾರಣ ಪ್ರತಿದಿನದ ಕೆಲಸ ಕಾರ್ಯಗಳಲ್ಲಿ ಸೀರೆ ಅಷ್ಟೊಂದು ಆರಾಮದಾಯಕವಲ್ಲ. ಆದರೆ ನಾವು ಭಾರತೀಯ ಮಹಿಳೆಯರಾಗಿ ಸೀರೆಯನ್ನು ಸಂಭ್ರಮಿಸಬೇಕು. ನನ್ನ ಸ್ತ್ರೀತ್ವವನ್ನು ಸಂಭ್ರಮಿಸಲು ಸೀರೆಯೇ ಬೇಕೆನಿಸಿತು ಎಂದು ಹೇಳಿದ್ದಾರೆ. ಹಾಗೇ ಇವರು ಮಹಿಳೆಯರಿಗೆ ಫಿಟ್​​ನೆಸ್​ ಬಗ್ಗೆಯೂ ಟಿಪ್ಸ್ ನೀಡಿದ್ದಾರೆ. ತೂಕವನ್ನು ಎತ್ತುವ ವ್ಯಾಯಾಮವನ್ನು ಮಹಿಳೆಯರು ಹೆಚ್ಚೆಚ್ಚು ಅಭ್ಯಸಿಸಬೇಕು. ಇದು ಎಲುಬು, ಮಾಂಸಖಂಡದ ಆರೋಗ್ಯಕ್ಕೆ ಒಳ್ಳೆಯದು. ಪೌಷ್ಟಿಕಾಂಶಗಳನ್ನು ಸೇವಿಸಬೇಕು. ಅದಕ್ಕೆ ತಕ್ಕಂತೆ ವ್ಯಾಯಾಮ ರೂಢಿಸಿಕೊಳ್ಳಬೇಕು ಎಂದೂ ಸಲಹೆ ನೀಡಿದ್ದಾರೆ.

ಬಹುತೇಕ ಮಹಿಳೆಯರು ಯೋಗ, ಎರೊಬಿಕ್ಸ್​ನಂತ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ನನ್ನ ಅಭಿಪ್ರಾಯವೆಂದರೆ ವೇಟ್​ ಲಿಫ್ಟಿಂಗ್​ ಕೂಡ ಮಾಡಬೇಕು. ಇದರಿಂದ ಯಾವುದೇ ಹಾನಿಯೂ ಇಲ್ಲ. ತೂಕ ಎತ್ತುವ ವ್ಯಾಯಾಮ ಮಾಡುವುದರಿಂದ ಮಹಿಳೆಯರ ಮಾಂಸಖಂಡಗಳೆಲ್ಲ ದೊಡ್ಡದಾಗಿ ಬೆಳೆಯುತ್ತವೆ ಎಂಬ ತಪ್ಪು ಕಲ್ಪನೆಯಿದೆ. ಹಾಗೆಲ್ಲ ಆಗೋದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಇನ್ನು ನಾನು ಫಿಟ್​ನೆಸ್​​ ವ್ಯಾಯಾಮ ತರಬೇತಿಯಲ್ಲಿ ತೊಡಗಿಕೊಳ್ಳುವಲ್ಲಿ ನನ್ನ ಕುಟುಂಬ ನನಗೆ ತುಂಬ ಸಹಕಾರ ನೀಡಿದೆ. ನನ್ನ ಪತಿ ಸದಾ ನನ್ನಲ್ಲಿ ಸ್ಫೂರ್ತಿ ತುಂಬುತ್ತಾರೆ. ನನಗೆ ನನ್ನ ಮಕ್ಕಳೂ ಸಹ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಕುಟುಂಬದ ಸಪೋರ್ಟ್​ ಇದ್ದರೆ, ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂದು ಶರ್ವಾಣಿ ಹೇಳಿದ್ದಾರೆ.

Published On - 2:48 pm, Thu, 17 June 21