ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ; ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ ಮನೆ ಮೇಲೆ ಎನ್ಐಎ ರೇಡ್
ಸಂತೋಷ್ ಸೇಲಾರ್ ಮತ್ತು ಪ್ರದೀಪ್ ಶರ್ಮಾ ಒಟ್ಟಿಗೇ ಇರುವ ಹಲವು ಫೋಟೋಗಳು ಎನ್ಐಎಗೆ ಸಿಕ್ಕಿವೆ. ಆದರೆ ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿಹಾಕಿದ್ದಾರೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮುಂಬೈನ ಮಾಜಿ ಪೊಲೀಸ್, ಎನ್ಕೌಂಟರ್ ಸ್ಪೆಶಲಿಸ್ಟ್ ಪ್ರದೀಪ್ ಶರ್ಮಾ ಮನೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ರೇಡ್ ಮಾಡಿದೆ. ಪ್ರದೀಪ್ ಶರ್ಮಾ ನಿವಾಸ ಮುಂಬೈನ ಅಂದೇರಿಯಲ್ಲಿ ಇದ್ದು, ಇಂದು ಮುಂಜಾನೆ 5ಗಂಟೆ ಹೊತ್ತಿಗೆ ಸಿಆರ್ಪಿಎಫ್ (ಕೇಂದ್ರೀಯ ಮೀಸಲು ಪಡೆ) ಮತ್ತು ಎನ್ಐಎ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದ್ದಾರೆ. ಸುಮಾರು ಆರು ತಾಸುಗಳ ಕಾಲ ಅವರ ಮನೆಯಲ್ಲಿ ದಾಖಲೆಗಳ ಹುಡುಕಾಟ ನಡೆದಿದೆ.
ಪ್ರದೀಪ್ ಶರ್ಮಾರನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಮುಕೇಶ್ ಅಂಬಾನಿ ಮನೆಯ ಬಳಿ ಕಾರಿನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟ ತನಿಖೆ ಮುಂದುವರಿದಿದ್ದು, ಜೂ.11ರಂದು ಸಂತೋಷ್ ಸೇಲಾರ್ ಮತ್ತು ಆನಂದ್ ಜಾಧವ್ ಎಂಬುವರನ್ನು ಬಂಧಿಸಲಾಗಿದೆ. ಬಂಧಿತ ಸಂತೋಷ್ ಸೇಲಾರ್ ಜತೆ ಪ್ರದೀಪ್ ಶರ್ಮಾಗೆ ಸಂಪರ್ಕವಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಇವರ ಮನೆಯ ಮೇಲೆ ಕೂಡ ತನಿಖಾ ದಳ ದಾಳಿ ನಡೆಸಿದೆ. ಸದ್ಯ ಸಂತೋಷ್ ಸೇಲಾರ್ ಮತ್ತು ಆನಂದ್ ಜಾಧವ್ ಇಬ್ಬರೂ ಜೂ.21ರವರೆಗೆ ಎನ್ಐಎ ಕಸ್ಟಡಿಯಲ್ಲಿಯೇ ಇರಲಿದ್ದಾರೆ.
ಸಂತೋಷ್ ಸೇಲಾರ್ ಮತ್ತು ಪ್ರದೀಪ್ ಶರ್ಮಾ ಒಟ್ಟಿಗೇ ಇರುವ ಹಲವು ಫೋಟೋಗಳು ಎನ್ಐಎಗೆ ಸಿಕ್ಕಿವೆ. ಆದರೆ ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿಹಾಕಿದ್ದಾರೆ. ಸಂತೋಷ್ ಸೇಲಾರ್ ಪೊಲೀಸರಿಗೆ ಮಾಹಿತಿ ನೀಡುವವನಾಗಿದ್ದ. ನನ್ನ ಫೋಟೋ ಕೇವಲ ಸಂತೋಷ್ ಜತೆ ಮಾತ್ರವಲ್ಲ..ಹೀಗೆ ಸಾವಿರಾರು ಮಂದಿಯೊಂದಿಗೆ ಸಿಗುತ್ತದೆ. ಸಂತೋಷ್ ಜತೆ ನಾನಿದ್ದೇನೆ ಎಂದ ಮಾತ್ರಕ್ಕೆ ಪ್ರಕರಣದಲ್ಲಿ ನನ್ನ ಕೈವಾಡವಿದೆ ಎಂದು ಅರ್ಥವಲ್ಲ ಎಂದೂ ಹೇಳಿದ್ದಾರೆ.
ಮುಕೇಶ್ ಅಂಬಾನಿ ಮನೆ ಸ್ಫೋಟಕಗಳು ಪತ್ತೆಯಾದ ಕೇಸ್ನಲ್ಲಿ ಅಮಾನತುಗೊಂಡು ಸದ್ಯ ಎನ್ಐಎ ಕಸ್ಟಡಿಯಲ್ಲಿರುವ ಸಚಿನ್ ವಾಝೆಗೆ ಈ ಪ್ರದೀಪ್ ಶರ್ಮಾ ಮಾರ್ಗದರ್ಶಕರಾಗಿದ್ದರು. ಥಾಣೆಯ ಖ್ಯಾತ ಉದ್ಯಮಿ ಮನ್ಸುಖ್ ಹಿರಾನ್ ಹತ್ಯೆ ಪ್ರಕರಣದಲ್ಲೂ ಶರ್ಮಾ ಕೆಲವು ಸಹಾಯ ಮಾಡಿದ್ದಾರೆ ಎಂಬುದಕ್ಕೆ ಕೆಲವು ಸಾಕ್ಷಿಗಳು ಸಿಕ್ಕಿವೆ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ. ಇನ್ನು ಹಿರಾನ್ ಹತ್ಯೆ ಪ್ರಕರಣ ಮತ್ತು ಮುಕೇಶ್ ಅಂಬಾನಿ ಕೇಸ್ ಎರಡರಲ್ಲೂ ವಾಝೆಯ ಮೇಲೆ ತನಿಖಾದಳ ಶಂಕೆ ವ್ಯಕ್ತಪಡಿಸಿದ್ದು ವಿಚಾರಣೆ ನಡೆಸುತ್ತಿದೆ.