ದೆಹಲಿ: ಪ್ರಸಕ್ತ ವರ್ಷ ಗಣರಾಜ್ಯೋತ್ಸವದ ದಿನದಂದು ರೈತರ ಟ್ರ್ಯಾಕ್ಟರ್ ರ್ಯಾಲಿ (Tractor Rally) ಸಂದರ್ಭದಲ್ಲಿ ನಡೆದ ಹಿಂಸಾಚಾರದಿಂದ ಬಹುದೊಡ್ಡ ಮಟ್ಟದ ಹಾನಿಯಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ನಂತರ ದೆಹಲಿ ಪೊಲೀಸರು ಹಲವರು ರೈತರನ್ನು ಬಂಧಿಸಿದ್ದರು. ಇದೀಗ ಪಂಜಾಬ್ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ 83 ರೈತರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು 2021ರ ಜನವರಿ 26ರಂದು ಟ್ರ್ಯಾಕ್ಟರ್ ಮಾರ್ಚ್ ಹಮ್ಮಿಕೊಂಡಿದ್ದರು. ಆದರೆ ಅದು ನಂತರ ದೆಹಲಿಯಲ್ಲಿ ಹಿಂಸಾಚಾರವಾಗಿ ಬದಲಾಗಿತ್ತು. ಕೆಂಪುಕೋಟೆ ಮೇಲೆ ಭಾರತ ಧ್ವಜದೊಂದಿಗೆ ಸಿಖ್ ಧ್ವಜವೂ ಹಾರಾಡಿ, ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು.
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬಹುತೇಕ ಪಂಜಾಬ್, ಹರ್ಯಾಣದವರೇ ಇದ್ದಾರೆ. ಹಾಗೇ, ಮೊದಲಿನಿಂದಲೂ ಇವರ ಪ್ರತಿಭಟನೆಗೆ ಪಂಜಾಬ್ ಸರ್ಕಾರ ಬೆಂಬಲ ನೀಡುತ್ತಲೇ ಬಂದಿದೆ. ಪಂಜಾಬ್ನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಹುದ್ದೆಗೆ ಏರಿರುವ ಚರಣಜಿತ್ ಸಿಂಗ್ ಛನ್ನಿ ಕೆಲವೇ ದಿನಗಳ ಹಿಂದೆ ಒಂದು ನಿರ್ಧಾರ ತೆಗೆದುಕೊಂಡಿದ್ದರು. ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ರೈತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವಂತೆ ಆದೇಶ ನೀಡಿದ್ದರು. ಇದೀಗ ತಮ್ಮ ಟ್ವಿಟರ್ ಮೂಲಕ 83 ರೈತರಿಗೆ ಹಣಕಾಸಿನ ನೆರವು ನೀಡುವ ನಿರ್ಧಾರ ಪ್ರಕಟಿಸಿದ್ದಾರೆ.
ಟ್ವೀಟ್ ಮಾಡಿರುವ ಚರಣಜಿತ್ ಸಿಂಗ್ ಛನ್ನಿ, ಮೂರು ಕೃಷಿ ಕಾಯ್ದೆಗಳು ರೈತರ ಪಾಲಿಗೆ ಕರಾಳವಾದವುಗಳೇ ಆಗಿವೆ. ಆ ಮೂರು ಕಾಯ್ದೆಗಳ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನಮ್ಮ ಪಂಜಾಬ್ ಸರ್ಕಾರದ ಬೆಂಬಲ ಸದಾ ಇರುತ್ತದೆ. ಜನವರಿ 26ರಂದು ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದರು. ಅದಾದ ಬಳಿಕ 83 ರೈತರನ್ನು ದೆಹಲಿ ಪೊಲೀಸರು ಬಂಧಿಸಿದರು. ಆ 83 ಜನರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
Reiterating My Govt’s stand to support the ongoing #FarmersProtest against three black farm laws, We have decided to give Rs 2 lakh compensation to 83 people arrested by Delhi Police for carrying out a tractor rally in the national capital on 26th January, 2021.
— Charanjit S Channi (@CHARANJITCHANNI) November 12, 2021
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಲು ಪ್ರಾರಂಭಿಸಿ 1 ವರ್ಷವಾಯಿತು. ಈ ಹಿನ್ನೆಲೆಯಲ್ಲಿ ರೈತರು ಮತ್ತೊಮ್ಮೆ ಟ್ರ್ಯಾಕ್ಟರ್ ಮಾರ್ಚ್ ನಡೆಸಲು ಮುಂದಾಗಿದ್ದಾರೆ. ಅದರಲ್ಲೂ ಈ ಸಲ ವಿಭಿನ್ನತೆ ಇರಲಿದೆ. ನವೆಂಬರ್ 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಲಿದ್ದು, ಅಂದಿನಿಂದಲೂ ಪ್ರತಿದಿನ 500 ರೈತರು ಶಾಂತಿಯುತವಾಗಿ ಸಂಸತ್ತಿನೆಡೆಗೆ ಟ್ರ್ಯಾಕ್ಟರ್ ರ್ಯಾಲಿ ನಡೆಸಲಿದ್ದಾರೆ. ಇದೇ ಹೊತ್ತಲ್ಲಿ ಪಂಜಾಬ್ ಮುಖ್ಯಮಂತ್ರಿ ಹೀಗಿದ್ದೊಂದು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಎಪಿಎಂಸಿಯಲ್ಲಿ ಹೂವಿನ ಮಾರುಕಟ್ಟೆ ಮಾಡುವಂತೆ ಆಗ್ರಹ; ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಬಿಗಿಭದ್ರತೆ
Published On - 11:07 am, Sat, 13 November 21