ಕಾಂಗ್ರೆಸ್ ಆಡಳಿತವಿರುವ ಪಂಜಾಬ್ನಲ್ಲಿ ನಿನ್ನೆ ಪ್ರಧಾನಿ (Prime Minister Security Breach) ಭದ್ರತೆಗೆ ಬಹುದೊಡ್ಡ ಮಟ್ಟದಲ್ಲಿ ಲೋಪವಾಗಿದೆ. ಇದರ ವಿರುದ್ಧ ಬಿಜೆಪಿ, ದೇಶದ ಅನೇಕ ನಾಗರಿಕರು, ಅಷ್ಟೇ ಅಲ್ಲ ಕಾಂಗ್ರೆಸ್, ಶಿವಸೇನೆ ಇನ್ನಿತರ ಪ್ರತಿಪಕ್ಷಗಳ ಮುಖಂಡರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹವಾಮಾನ ಕೆಟ್ಟದಾಗಿದ್ದರಿಂದ ಅವರು ರಸ್ತೆ ಮಾರ್ಗದ ಮೂಲಕ ಫಿರೋಜ್ಪುರಕ್ಕೆ ಹೊರಟಿದ್ದರು. ಅಲ್ಲಿ, ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಅಷ್ಟೇ ಅಲ್ಲ, ರ್ಯಾಲಿಯೂ ಇತ್ತು. ಆದರೆ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಅವರು ಫ್ಲೈಓವರ್ ಮೇಲೆ 20 ನಿಮಿಷ ಕಾಯುವಂತಾಯ್ತು. ಅಷ್ಟಾದರೂ ಮುಂದೆ ಹೋಗಲು ಸಾಧ್ಯವಾಗದೆ ದೆಹಲಿಗೆ ವಾಪಸ್ ಆಗಿದ್ದಾರೆ. ಇಷ್ಟಾದರೂ ಪಂಜಾಬ್ ಸರ್ಕಾರ ಮಾತ್ರ, ಪ್ರಧಾನಿ ಮೋದಿ ಭದ್ರತೆಯಲ್ಲಿ ಯಾವುದೇ ಲೋಪವಾಗಲಿಲ್ಲ ಎಂದೇ ಹೇಳುತ್ತಿದೆ. ಇದೆಲ್ಲದರ ಮಧ್ಯೆ ವಿಡಿಯೋವೊಂದು ವೈರಲ್ ಆಗಿದ್ದು, ಹುಬ್ಬೇರುವಂತೆ ಮಾಡಿದೆ. ಅತ್ತ ಫ್ಲೈಓವರ್ ಮೇಲೆ ಪ್ರಧಾನಿ ಮೋದಿ ವಾಹನ ಮತ್ತು ಬೆಂಗಾವಲು ಪಡೆಗಳೆಲ್ಲ ಕಾಯುತ್ತ ನಿಂತಿದ್ದರೆ, ಇತ್ತ ಪಂಜಾಬ್ ಪೊಲೀಸರು ಪ್ರತಿಭಟನಾಕಾರರೊಟ್ಟಿಗೆ ಚಹಾ ಕುಡಿಯುತ್ತಿರುವ ವಿಡಿಯೋ ಇದು. ಇದೀಗ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಸ್ಥಳದಲ್ಲಿ ನಿನ್ನೆ ನಡೆದ ಘಟನೆಯನ್ನು ಸ್ಥಳೀಯರು ಹಲವರು ವಿಡಿಯೋ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಹಾಗೇ, ಪಂಜಾಬ್ ಪೊಲೀಸರು ಚಹಾ ಕುಡಿಯುತ್ತಿರುವ ವಿಡಿಯೋಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಟಿಂಡಾ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿಯಾಗಲೀ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಲಿ ಅಥವಾ ಪಂಜಾಬ್ ಡಿಜಿಪಿಯಾಗಲೀ ಅಲ್ಲಿಗೆ ಹೋಗಿಲ್ಲ. ಈ ಬಗ್ಗೆಯೂ ಪ್ರಶ್ನೆ ಎತ್ತಲಾಗಿದೆ. ಆದರೆ ಛನ್ನಿ, ತಮ್ಮ ಕಾರ್ಯದರ್ಶಿಗೆ ಕೊರೊನಾ ಸೋಂಕು ತಗುಲಿದೆ. ಈ ಕಾರಣಕ್ಕೆ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಹೋಗಲಿಲ್ಲ ಎಂದಿದ್ದಾರೆ.
ಇದೊಂದು ಪಿತೂರಿ?
ಹೀಗೊಂದು ಅನುಮಾನ ವ್ಯಕ್ತವಾಗುತ್ತಿದೆ. ಬಿಜೆಪಿಯಂತೂ ಇದೊಂದು ಪಕ್ಕಾ ಪೂರ್ವನಿರ್ಧರಿತ ಪಿತೂರಿ ಎಂದೇ ಪ್ರತಿಪಾದಿಸುತ್ತಿದೆ. ನಿನ್ನೆ ಮುಂಜಾನೆ 7.40ರ ಹೊತ್ತಿಗೆ ಅಂದರೆ ಪಂಜಾಬ್ಗೆ ಪ್ರಧಾನಿ ಮೋದಿ ತಲುಪುವುದಕ್ಕೂ ಮೊದಲು, ಕಾಂಗ್ರೆಸ್ ತನ್ನ ಟ್ವಿಟರ್ ಅಕೌಂಟ್ನಲ್ಲಿ ಒಂದು ಪೋಸ್ಟ್ ಹಾಕಿತ್ತು. ಅದು ಐಎನ್ಸಿಯ ಟೆಲಿವಿಷನ್ನ ಟ್ವಿಟರ್ ಅಕೌಂಟ್. ಅದರಲ್ಲಿ, ಪಂಜಾಬ್ನಲ್ಲಿ ಪ್ರಧಾನಿ ಮೋದಿ ಭೇಟಿಗೆ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಅಭಿಯಾನ ಶುರುವಾಗಿದೆ ಎಂದು ಹೇಳಿತ್ತು. ಹಾಗೇ, ಗೋ ಬ್ಯಾಕ್ ಮೋದಿ (ಮೋದಿ ಹಿಂತಿರುಗಿ) ಎಂಬ ಫೋಟೋಗಳನ್ನು ಹಂಚಿಕೊಂಡಿದ್ದ ರೈತ ಸಂಘಟನೆಗಳ ಫೋಟೋವನ್ನೂ ಹಂಚಿಕೊಂಡಿತ್ತು. ಅದಕ್ಕೆ ತಕ್ಕಂತೆ ಪ್ರಧಾನಿ ಮೋದಿ ಅರ್ಧಧಾರಿಗೆ ಬಂದು ಹಿಂದಿರುಗಿದರು. ಹಾಗಾಗಿ ಇದೊಂದು ಪಕ್ಕಾ ಪ್ಲ್ಯಾನ್ ಎಂದು ಬಿಜೆಪಿ ಪ್ರತಿಪಾದಿಸಿದೆ. ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಪಂಜಾಬ್ ಸರ್ಕಾರದಿಂದ ವರದಿಯನ್ನೂ ಕೇಳಿದೆ.
ಇದನ್ನೂ ಓದಿ: ಭಾರತದಲ್ಲಿ 24ಗಂಟೆಯಲ್ಲಿ 90,928 ಕೊರೊನಾ ಕೇಸ್ಗಳು ದಾಖಲು, ನಿನ್ನೆಗಿಂತಲೂ ಶೇ.56ರಷ್ಟು ಹೆಚ್ಚು; 325 ಮಂದಿ ಸಾವು
Published On - 9:09 am, Thu, 6 January 22