ಪಂಜಾಬ್ ದಿವಾಳಿತನದ ಅಂಚಿನಲ್ಲಿದೆ, ಇಲ್ಲಿನ ಜನರ ನಂಬಿಕೆಗೆ ದ್ರೋಹವಾಗಿದೆ: ಕಾಂಗ್ರೆಸ್ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು

| Updated By: Lakshmi Hegde

Updated on: Jan 03, 2022 | 8:41 PM

ಚರಣಜಿತ್​ ಸಿಂಗ್​ ಛನ್ನಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಧು, ಅವರ ಸರ್ಕಾರಕ್ಕೆ ನಾನು ಅಂಕ ಕೊಡಲು ಸಾಧ್ಯವಿಲ್ಲ. ಅದನ್ನೇನಿದ್ದರೂ ಜನರೇ ನಿರ್ಧಾರ ಮಾಡಬೇಕು ಎಂದಿದ್ದಾರೆ. ಹಾಗೇ, ನಾನು ಯಾರೊಂದಿಗೂ ಸ್ಪರ್ಧೆಗೆ ಇಳಿದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್ ದಿವಾಳಿತನದ ಅಂಚಿನಲ್ಲಿದೆ, ಇಲ್ಲಿನ ಜನರ ನಂಬಿಕೆಗೆ ದ್ರೋಹವಾಗಿದೆ: ಕಾಂಗ್ರೆಸ್ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು
ನವಜೋತ್ ಸಿಂಗ್ ಸಿಧು
Follow us on

ಪಂಜಾಬ್​ ದಿವಾಳಿತನದ ಅಂಚಿನಲ್ಲಿದೆ ಮತ್ತು ಇಲ್ಲಿನ ಜನರ ನಂಬಿಕೆ ಸಂಪೂರ್ಣವಾಗಿ ಮುರಿದಿದೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್​ ಸಿಂಗ್ ಸಿಧು(Congress chief Navjot Singh Sidhu) ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.  ವಿಧಾನಸಭೆ ಚುನಾವಣೆ (Punjab Assembly Election 2022) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಂಜಾಬ್​ನ ಹಣವನ್ನೆಲ್ಲ ಇಲ್ಲಿನ ಪ್ರಭಾವಿಗಳು ಬಳಸಿಕೊಂಡಿದ್ದಾರೆ. ಈ ರಾಜ್ಯವೀಗ ದಿವಾಳಿತನದ ಅಂಚಿನಲ್ಲಿ ನಿಂತಿದೆ ಎಂದು ಹೇಳಿದ್ದಾರೆ.  ಜನಸಾಮಾನ್ಯರ ಅಭಿವೃದ್ಧಿ ನನ್ನ ಆಸೆ. ಆದರೆ ಈ ರಾಜ್ಯದಲ್ಲಿ ಅಭಿವೃದ್ಧಿ ಮಾಡುವುದಾದರೂ ಹೇಗೆ? ಆದರೆ  ಇಲ್ಲಿನ ಬೊಕ್ಕಸವನ್ನು ಕದಿಯುವುದನ್ನು ನಿಲ್ಲಿಸಬಹುದು ಎಂದು ಹೇಳಿದ್ದಾರೆ.

ಹಿಂದೆ ಕ್ರಿಕೆಟ್​ ಆಟಗಾರರಾಗಿದ್ದ ನವಜೋತ್​ ಸಿಂಗ್ ಸಿಧು ನಂತರ ರಾಜಕಾರಣಕ್ಕೆ ಸೇರಿದ್ದಾರೆ. ಪಂಜಾಬ್​ನ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಅವರು ಹಲವು ವಿವಾದಗಳನ್ನೂ ಸೃಷ್ಟಿಸಿಕೊಂಡವರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್​ ರಾಜೀನಾಮೆ ನೀಡಲು ಸಿಧುನೇ ಕಾರಣ ಎಂಬುದು ಜಗಜ್ಜಾಹೀರಾಗಿದೆ. ಅಲ್ಲಿ ಮುಖ್ಯಮಂತ್ರಿ ಹುದ್ದೆಗೆ ಚರಣಜಿತ್​ ಸಿಂಗ್​ ಛನ್ನಿ ಏರಿದ ಮೇಲೆಯೂ ಸಿಧು ಮುನಿಸು ತಣಿಯಲಿಲ್ಲ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಕ್ಕಿಂತ ಹೆಚ್ಚಾಗಿ ಪಾಕಿಸ್ತಾನ ಪ್ರಧಾನಿಯನ್ನು ಹೊಗಳಿ, ಅಲ್ಲಿನ ಸೇನಾ ಮುಖ್ಯಸ್ಥರನ್ನು ತಬ್ಬಿ ಸುದ್ದಿಯಾದವರು.  ಇದೀಗ ಚುನಾವಣೆ ಸಮೀಪಿಸುತ್ತಿರುವಾಗ, ಹಿಂದಿನ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​, ಈಗಿನ ಸಿಎಂ ಚರಣಜಿತ್​ ಸಿಂಗ್​ ಛನ್ನಿ ಬಗ್ಗೆಯೂ ಮಾತನಾಡಿದ್ದಾರೆ.

ಚರಣಜಿತ್​ ಸಿಂಗ್​ ಛನ್ನಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಧು, ಅವರ ಸರ್ಕಾರಕ್ಕೆ ನಾನು ಅಂಕ ಕೊಡಲು ಸಾಧ್ಯವಿಲ್ಲ. ಅದನ್ನೇನಿದ್ದರೂ ಜನರೇ ನಿರ್ಧಾರ ಮಾಡಬೇಕು ಎಂದಿದ್ದಾರೆ. ಹಾಗೇ, ನಾನು ಯಾರೊಂದಿಗೂ ಸ್ಪರ್ಧೆಗೆ ಇಳಿದಿಲ್ಲ. ನನ್ನೊಂದಿಗೆ ನಾನು ಸ್ಪರ್ಧಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.  ಹಾಗೇ, ಹಿಂದಿನ ಸಿಎಂ ಅಮರಿಂದರ್ ಸಿಂಗ್​, ಅವರು ಬೇರೆ ಪಕ್ಷವನ್ನು ಕಟ್ಟಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ  ಬಗ್ಗೆ ಮಾತನಾಡಿದ ಸಿಧು, ಕ್ಯಾಪ್ಟನ್​ ಅಮರಿಂದರ್​ ಅವರು ಬಿಜೆಪಿಯ ಪರವಾಗಿಯೇ ಇದ್ದರು. ಇದು ಬಿಜೆಪಿಯ ತಂತ್ರ. ಪಶ್ಚಿಮ ಬಂಗಾಳ, ಬಿಹಾರದಂಥ ರಾಜ್ಯಗಳಲ್ಲೂ ಬಿಜೆಪಿ ಇದನ್ನೆಲ್ಲ ಮಾಡುತ್ತದೆ ಎಂದು ಹೇಳಿದರು.  ಹಾಗೇ, ಅಮರಿಂದರ್ ಸಿಂಗ್ ಆಡಳಿತದಲ್ಲಿಯೇ ಜನರ ನಂಬಿಕೆಗೆ ದ್ರೋಹವಾಗಿದ್ದು, ಪಂಜಾಬ್​ ಹಣ ಕೊಳ್ಳೆ ಹೊಡೆಯಲ್ಪಟ್ಟಿದ್ದು ಎಂದು ಅವರು ಒತ್ತಿ ಹೇಳಿದರು.  ತಾವು ಸೃಷ್ಟಿಸಿಕೊಂಡ ವಿವಾದಗಳ ಬಗ್ಗೆ ಮಾತನಾಡಿದ ನವಜೋತ್​ ಸಿಂಗ್ ಸಿಧು, ನನ್ನ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಜನರು ಯಾವಾಗಲೂ ಮಾವಿನ ಹಣ್ಣಿರುವ ಮರಕ್ಕೆ ಕಲ್ಲು ಹೊಡೆಯುತ್ತಾರೆ ಹೊರತು, ಯಾರೂ ಸತ್ತ ನಾಯಿಗೆ ಒದೆಯುವುದಿಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಇಸ್ಲಮಾಬಾದ್​ಗೆ ಬರಲು ಇಷ್ಟವಿಲ್ಲದೆ ಇದ್ದರೆ, ವರ್ಚ್ಯುವಲ್ ಆಗಿ ಪಾಲ್ಗೊಳ್ಳಿ; ಸಾರ್ಕ್​ ಶೃಂಗಸಭೆಗೆ ಪಾಕಿಸ್ತಾನದಿಂದ ಭಾರತಕ್ಕೆ ಆಹ್ವಾನ !