ಸರ್ಜಿಕಲ್​ ಸ್ಟ್ರೈಕ್​​ಗೂ ಪುರಾವೆ ಕೇಳುವ ಕಾಂಗ್ರೆಸ್​​ ಕೈಯಲ್ಲಿ ಪಂಜಾಬ್​ ಸುರಕ್ಷಿತವಲ್ಲ: ಪ್ರಧಾನಿ ನರೇಂದ್ರ ಮೋದಿ

| Updated By: Lakshmi Hegde

Updated on: Feb 16, 2022 | 4:10 PM

ಪಂಜಾಬಿಯತ್​ ಎಂಬುದು ನಮ್ಮ ಪಾಲಿಗೆ ಅತ್ಯಂತ ಮುಖ್ಯ. ಆದರೆ ಪ್ರತಿಪಕ್ಷ ಪಂಜಾಬ್​​ನ್ನು ಸಿಯಾಸತ್​ (ರಾಜಕೀಯ) ಎಂಬ ಮಸೂರದ ಮೂಲಕ ನೋಡುತ್ತಿದೆ. ಕ್ಯಾಪ್ಟನ್​ ಅಮರಿಂದರ್ ಸಿಂಗ್​ ಅವರು ಇಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ತಪ್ಪು ದಿಕ್ಕಿನಲ್ಲಿ ಮುಂದುವರಿಯುವುದನ್ನು ತಡೆಯುತ್ತಿದ್ದರು ಎಂದು ಪಿಎಂ ಮೋದಿ ಹೇಳಿದ್ದಾರೆ.

ಸರ್ಜಿಕಲ್​ ಸ್ಟ್ರೈಕ್​​ಗೂ ಪುರಾವೆ ಕೇಳುವ ಕಾಂಗ್ರೆಸ್​​ ಕೈಯಲ್ಲಿ ಪಂಜಾಬ್​ ಸುರಕ್ಷಿತವಲ್ಲ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ಪಂಜಾಬ್​ನಲ್ಲಿ ಫೆ.20ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಪಠಾಣ್​ಕೋಟ್​ನಲ್ಲಿ ಚುನಾವಣಾ ರ್ಯಾಲಿ (Election Rally)ನಡೆಸಿದರು. ಇಂದು ಗುರು ರವಿದಾಸ್​ ಜೀ ಜಯಂತಿ ನಿಮಿತ್ತ ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಪಂಜಾಬ್​ಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು. ಇದೇ ವೇಳೆ ಪ್ರತಿಪಕ್ಷ, ಪಂಜಾಬ್​ನಲ್ಲಿರುವ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅದು ಕರ್ತಾರ್​ಪುರ ಸಾಹೀಬ್​​ನ್ನು ಭಾರತದ ಭೂಪ್ರದೇಶದಲ್ಲಿಯೇ ಉಳಿಸಿಕೊಳ್ಳಲು ವಿಫಲವಾಯಿತು ಎಂದು ಹೇಳಿದರು.

ನಮ್ಮ ಸೇನೆಯ ಕಾರ್ಯದ ಬಗ್ಗೆಯೇ ಪ್ರಶ್ನೆ ಎತ್ತುವ ಕಾಂಗ್ರೆಸ್​ ಕೈಯಲ್ಲಿ ಎಂದಿಗೂ ಪಂಜಾಬ್​ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಎಲ್ಲೆಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೋ, ಅಲ್ಲೆಲ್ಲ ಕುಟುಂಬ ರಾಜಕಾರಣ, ರಿಮೋಟ್​ ಕಂಟ್ರೋಲ್​ ಪೊಲಿಟಿಕ್ಸ್​ಗಳೆಲ್ಲ ಇಲ್ಲವಾಗುತ್ತಿವೆ. ಪಾಕಿಸ್ತಾನ ಪಠಾಣ್​ಕೋಟ್​ ಮೇಲೆ ದಾಳಿ ನಡೆಸಿತು. ಆದರೆ ಈ ಕಾಂಗ್ರೆಸ್ ನಮ್ಮ ಸೇನಾ ಸಾಮರ್ಥ್ಯವನ್ನೇ ಪ್ರಶ್ನಿಸಿತು. ಪಾಕ್​ ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ಈ ಮೂಲಕ ಅವಮಾನ ಮಾಡಿತು. ಪುಲ್ವಾಮಾ ದಾಳಿಗೆ ಪ್ರತಿಯಾಗಿ ನಮ್ಮ ಸೇನೆ ನಡೆಸಿದ ಪ್ರತಿದಾಳಿಯನ್ನೂ ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಹೀಗಿರುವ ಕಾಂಗ್ರೆಸ್​ ಕೈಯಲ್ಲಿ ಪಂಜಾಬ್​ ಸುರಕ್ಷಿತವಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪಂಜಾಬಿಯತ್​ ಎಂಬುದು ನಮ್ಮ ಪಾಲಿಗೆ ಅತ್ಯಂತ ಮುಖ್ಯ. ಆದರೆ ಪ್ರತಿಪಕ್ಷ ಪಂಜಾಬ್​​ನ್ನು ಸಿಯಾಸತ್​ (ರಾಜಕೀಯ) ಎಂಬ ಮಸೂರದ ಮೂಲಕ ನೋಡುತ್ತಿದೆ. ಕ್ಯಾಪ್ಟನ್​ ಅಮರಿಂದರ್ ಸಿಂಗ್​ ಅವರು ಇಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ತಪ್ಪು ದಿಕ್ಕಿನಲ್ಲಿ ಮುಂದುವರಿಯುವುದನ್ನು ತಡೆಯುತ್ತಿದ್ದರು. ಆದರೆ ಈಗ ಅವರೂ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಆಮ್​ ಆದ್ಮಿ ಪಾರ್ಟಿ ವಿರುದ್ಧವೂ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಮತ್ತು ಆಪ್​ ಎರಡೂ ಪಕ್ಷಗಳೂ ಕೂಡ ನೂರಾ ಕುಸ್ತಿಯಾಡುತ್ತಿವೆ. ಅದೇನಿದ್ದಕೂ ನೋಡುಗರ ಕಣ್ಣಿಗೆ ಮಣ್ಣೆರುಚುವ ಫೈಟಿಂಗ್​ ಅಷ್ಟೇ ಎಂದು ಟೀಕಿಸಿದರು. ಪಂಜಾಬಿಗರ ಭದ್ರತೆ, ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಪಂಜಾಬ್​ ಬಾರ್ಡರ್​ ಬೆಲ್ಟ್​​ನ್ನು ನವೀಕರಿಸಲಿದೆ ಎಂದೂ ತಿಳಿಸಿದರು.

ಫೆ.14ರಂದು ಪಂಜಾಬ್​​ನ ಜಲಂಧರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಿ, ಅಂದೂ ಕೂಡ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್​ನ ಸ್ಥಿತಿ ಹದಗೆಟ್ಟಿದೆ. ಆ ಪಕ್ಷವೇ ಛಿದ್ರವಾಗುತ್ತಿರುವಾಗ, ಕಾಂಗ್ರೆಸ್​ ನಾಯಕರು ಒಬ್ಬರಿಗೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ. ಆಂತರಿಕ ಕಚ್ಚಾಟವೇ ತುಂಬಿ ಹೋಗಿದೆ. ಹೀಗಿರುವಾ ಕಾಂಗ್ರೆಸ್​ ಪಂಜಾಬ್​ಗೆ ಸ್ಥಿರ ಆಡಳಿತ ನೀಡಬಹುದೇ ಎಂದು ಪ್ರಶ್ನಿಸಿದ್ದರು. ಪಂಜಾಬ್​​ನಲ್ಲಿ ಫೆ.20ರಂದು ಚುನಾವಣೆ ನಡೆಯಲಿದೆ. ಆದರೆ ಕೃಷಿ ಕಾಯ್ದೆಗಳ ವಿಚಾರದಲ್ಲಿ  ಪಂಜಾಬ್​ ರೈತರು ಜಾಸ್ತಿ ಎನ್ನಿಸುವಷ್ಟು ಬಿಜೆಪಿ ವಿರುದ್ಧ ತೊಡೆತಟ್ಟಿದ್ದಾರೆ. ಹೀಗಾಗಿ ಅಲ್ಲಿ ಕಮಲ ಪಕ್ಷಕ್ಕೆ ಗೆಲುವು ತುಸು ಸವಾಲು ಎಂದೇ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಈಶ್ವರಪ್ಪ ನೀಡಿದ ಕೇಸರಿ ಧ್ವಜದ ಹೇಳಿಕೆ: ಬಿಜೆಪಿ ಕಾಂಗ್ರೆಸ್ ಶಾಸಕರ ವಾಗ್ವಾದ

Published On - 3:25 pm, Wed, 16 February 22