ದೆಹಲಿ: ಪಂಜಾಬಿ ಗಾಯಕ (Punjabi Singer) ಸಿಧು ಮೂಸೆ ವಾಲಾ (Sidhu Moose Wala) ಅವರ ಅಂತ್ಯಕ್ರಿಯೆಯ ಒಂದು ದಿನದ ನಂತರ ಹತ್ಯೆ ನಡೆಯುವಾಗ ಅವರ ಕಾರಿನಲ್ಲಿ ಅವರೊಂದಿಗಿದ್ದ ಸ್ನೇಹಿತರೊಬ್ಬರು ದಾಳಿಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಭಾನುವಾರ ಸಿಧು ಮೂಸೆ ವಾಲ ಮಹೀಂದ್ರ ಥಾರ್ ಎಸ್‌ಯುವಿಯಲ್ಲಿ(Mahindra Thar SUV) ಬರ್ನಾಲಾದಲ್ಲಿರುವ ತನ್ನ ಚಿಕ್ಕಮ್ಮನನ್ನು ಭೇಟಿ ಮಾಡಲು ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೂಸೆ ವಾಲಾ ಜತೆಗೆ ಆತನ ಕಾರಿನಲ್ಲಿ ಸ್ನೇಹಿತ ಗುರವಿಂದರ್ ಸಿಂಗ್ ಮತ್ತು ಗುರುಪ್ರೀತ್ ಸಿಂಗ್ ಇದ್ದರು.ಹಿಂದಿನ ಸೀಟಿನಲ್ಲಿ ಕುಳಿತಿದ್ದ ಗುರುವಿಂದರ್ ಸಿಂಗ್ ಹಲ್ಲೆ ಯಾವ ರೀತಿ ನಡೆದಿತ್ತು ಎಂಬುದನ್ನು ವಿವರಿಸಿದ್ದಾರೆ. ಜೀಪ್‌ನಲ್ಲಿ ಐದು ಜನರಿಗೆ ಸ್ಥಳಾವಕಾಶವಿಲ್ಲದ ಕಾರಣ ಸಿಧು ಮೂಸ್ ವಾಲಾ ಅಂದು ತಮ್ಮ ಭದ್ರತಾ ಸಿಬ್ಬಂದಿಯನ್ನು ಜತೆಗೆ ಕರೆದುಕೊಂಡು ಹೋಗಲಿಲ್ಲ ಎಂದಿದ್ದಾರೆ ಸ್ನೇಹಿತ. ಇಬ್ಬರು ಭದ್ರತಾ ಸಿಬ್ಬಂದಿ ಮತ್ತೊಂದು ಕಾರಿನಲ್ಲಿ ಸಿಧು ಮೂಸೆ ವಾಲಾ ಅವರನ್ನು ಹಿಂಬಾಲಿಸುತ್ತಿದ್ದರು ಎಂದು ಆತನ ತಂದೆ ಬಲ್ಕೌರ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. ಸಿಧು ಮೂಸೆ ವಾಲಾ ತನ್ನ ಚಿಕ್ಕಮ್ಮನ ಹಳ್ಳಿಯನ್ನು ತಲುಪಿದ ಕ್ಷಣ, ವಾಹನದ ಹಿಂದಿನಿಂದ ಗುಂಡು ಹಾರಿಸಲಾಯಿತು.ಇನ್ನೊಂದು ಕಾರು ಮುಂದಿನಿಂದ ಬಂದು ಮೂಸೆ ವಾಲಾ ಇದ್ದ ಜೀಪ್ಗೆ ಅಡ್ಡವಾಗಿ ನಿಂತಿತು. ಆಟೋಮ್ಯಾಟಿಕ್ ರೈಫಲ್ ಹೊತ್ತಿದ್ದ ವ್ಯಕ್ತಿಯೊಬ್ಬ ಜೀಪಿನ ಮುಂದೆ ಕಾಣಿಸಿಕೊಂಡು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ ಎಂದು ಗುರುವಿಂದರ್ ಸಿಂಗ್ ಹೇಳಿದ್ದಾರೆ. ಆಗ ಮೂಸೆ ವಾಲಾ ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಅದರೆ ರೈಫಲ್ ಮುಂದೆ ಸೆಣಸಾಡಲು ಸಾಧ್ಯವಾಗಲಿಲ್ಲ. ಈ ಪಿಸ್ತೂಲ್ನ್ನು ನಂತರ ಮೂಸೆ ವಾಲಾ ಜೀಪಿನಿಂದ ವಶಪಡಿಸಿಕೊಳ್ಳಲಾಗಿದೆ.
ಮೂರೂ ಕಡೆಗಳಿಂದ ಶೂಟರ್‌ಗಳು ಸೇರಿಕೊಂಡು ಗುಂಡಿನ ದಾಳಿ ನಡೆಸಿದರು ಎಂದು ಗುರುವಿಂದರ್ ಸಿಂಗ್ ಹೇಳಿದ್ದಾರೆ. ಸಿಧು ಮೂಸೆ ವಾಲಾ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಸಾಧ್ಯವಾಗಲಿಲ್ಲ.
ಸುಮಾರು ಎಂಟರಿಂದ 10 ಮಂದಿ ದಾಳಿಕೋರರು ಸಿಧು ಮೂಸೆ ವಾಲಾ ಮೇಲೆ 30 ಬಾರಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಈ ಹಿಂದೆ ತಿಳಿಸಿದ್ದವು. ಇಷ್ಟು ಗುಂಡು ಹಾರಿಸಿದ ನಂತರವೂ ದಾಳಿಕೋರರು ಆತ ಬದುಕಿದ್ದಾನಾ ಎಂದು ಪರಿಶೀಲಿಸಿದರು ಎಂದು ಸ್ನೇಹಿತರು ಹೇಳಿದ್ದಾರೆ.
ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಹತ್ಯೆಯಾದ ಸ್ಥಳದಲ್ಲಿ ಪತ್ತೆಯಾದ ಬುಲೆಟ್‌ಗಳು ದಾಳಿಯಲ್ಲಿ ಎಎನ್ 94 ರಷ್ಯಾದ ಅಸಾಲ್ಟ್ ರೈಫಲ್ ಅನ್ನು ಸಹ ಬಳಸಲಾಗಿದೆ ಎಂದು ಸೂಚಿಸುತ್ತದೆ.
ಮೂಸೆ ವಾಲಾ ಅವರ ಅಪ್ಪನೇ ಮೂಸೆ ವಾಲಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದರು.
ಒಂದು ಎಸ್ಯುವಿ ಮತ್ತು ಸೆಡಾನ್ ರಸ್ತೆಯಲ್ಲಿ ಕಾಯುತ್ತಿತ್ತು. ಪ್ರತಿಯೊಂದು ವಾಹನದಲ್ಲಿಯೂ ನಾಲ್ಕು ಶಸ್ತ್ರಸಜ್ಜಿತ ವ್ಯಕ್ತಿಗಳಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಮೂಸೆ ವಾಲಾ ಇದ್ದ ಕಾರಿನ ಮೇಲೆ ಇವರು ಗುಂಡಿನ ಸುರಿಮಳೆ ಸುರಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಇದಾದ ನಿಮಿಷಗಳಲ್ಲೇ ಆ ಕಾರುಗಳು ಅಲ್ಲಿಂದ ವೇಗವಾಗಿ ಓಡಿದವು. ನಾನು ಕೂಗಿ ಕರೆದಾಗ ಜನರು ಜಮಾಯಿಸಿದರು. ನಾನು ನನ್ನ ಮಗ ಮತ್ತು ಅವನ ಸ್ನೇಹಿತರನ್ನು ಆಸ್ಪತ್ರೆಗೆ ಸೇರಿಸಿದೆ, ಅಲ್ಲಿ ಅವನು ಕೊನೆಯುಸಿರೆಳೆದ ಎಂದು ಮೂಸೆ ವಾಲಾರ ಅಪ್ಪ ನೀಡಿದ ಎಂದು ದೂರಿನಲ್ಲಿ ಹೇಳಲಾಗಿದೆ.
ಹಲವಾರು ಗ್ಯಾಂಗ್ಸ್ಟರ್ಗಳು ಫೋನ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಗಾಯಕನ ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉತ್ತರಾಖಂಡದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಶಂಕಿತನನ್ನು ಮಂಗಳವಾರ ಬಂಧಿಸಲಾಯಿತು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಜನಪ್ರಿಯ ರಾಪರ್ನ ಭದ್ರತೆಯನ್ನು ಏಕೆ ಕಡಿಮೆಗೊಳಿಸಲಾಗಿದೆ ಎಂಬುದರ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಕೆಲವು ದಿನಗಳ ಹಿಂದೆ ಪಂಜಾಬ್ ಪೊಲೀಸರು ಭದ್ರತೆಯನ್ನು ಹಿಂತೆಗೆದುಕೊಂಡ 424 ಜನರ ಪಟ್ಟಿಯಲ್ಲಿ ಮೂಸೆ ವಾಲಾ ಕೂಡಾ ಇದ್ದರು.
ಕೆನಡಾ ಮೂಲದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಫೇಸ್‌ಬುಕ್‌ನಲ್ಲಿ ಸಿಧು ಮೂಸೆ ವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಗೋಲ್ಡಿ ಬ್ರಾರ್ ಗ್ಯಾಂಗ್ ಲೀಡರ್ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕನಾಗಿದ್ದು ಈತನನ್ನು ವಿಚಾರಣೆಗಾಗಿ ತಿಹಾರ್ ಜೈಲಿನಿಂದ ಹೊರಗೆ ಕರೆದೊಯ್ಯಲಾಯಿತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 3:52 pm, Wed, 1 June 22