Salman Khan: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ಭದ್ರತೆ ಹೆಚ್ಚಳ
Sidhu Moose Wala Death: ಪಂಜಾಬ್‌ನ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆಯ ಬೆನ್ನಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ (Sidhu Moose Wala) ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಪ್ರಮುಖ ಆರೋಪಿಯಾಗಿರುವುದರಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಭದ್ರತೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಟೈಮ್ಸ್ನೌ ವರದಿ ಮಾಡಿದಂತೆ ಬೆದರಿಕೆಯ ಮಟ್ಟವನ್ನು ವಿಶ್ಲೇಷಿಸಿ ಬಾಲಿವುಡ್ ತಾರಾ ನಟನಿಗೆ ಭದ್ರತೆ ಹೆಚ್ಚಿಸಲಾಗಿದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿ, ‘‘ನಾವು ಸಲ್ಮಾನ್ ಖಾನ್ ಅವರ ಒಟ್ಟಾರೆ ಭದ್ರತೆಯನ್ನು ಹೆಚ್ಚಿಸಿದ್ದೇವೆ. ರಾಜಸ್ಥಾನದ ಗ್ಯಾಂಗ್‌ನಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅವರ ಅಪಾರ್ಟ್‌ಮೆಂಟ್‌ನ ಸುತ್ತಲೂ ಪೊಲೀಸರು ಕಾವಲಿರುತ್ತಾರೆ’’ ಎಂದು ತಿಳಿಸಲಾಗಿದೆ.
ಸಲ್ಮಾನ್ಗೆ ಭದ್ರತೆ ಹೆಚ್ಚಿಸಲು ಕಾರಣವೇನು?
ಕೃಷ್ಣ ಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದ. ಸಲ್ಮಾನ್ರನ್ನು ಕೊಲ್ಲುವುದಾಗಿ ಆಗ ಬೆದರಿಕೆ ಹಾಕಲಾಗಿತ್ತು. ಕೃಷ್ಣ ಮೃಗವನ್ನು ಪವಿತ್ರವೆಂದು ಬಿಷ್ಣೋಯಿಗಳು ನಂಬುತ್ತಾರೆ. ಸಲ್ಮಾನ್ ಆ ಪ್ರಾಣಿಗಳ ಹತ್ಯೆಯಲ್ಲಿ ಆರೋಪಿಯಾಗಿದ್ದ ಕಾರಣ, ಅವರಿಗೆ ಬೆದರಿಕೆ ಹಾಕಲಾಗಿತ್ತು. ಬಿಷ್ಣೋಯ್ 2018ರಲ್ಲಿ ನ್ಯಾಯಾಲಯದ ಹೊರಗೆ ಮಾತನಾಡುತ್ತಾ, ತಾವು ಸಲ್ಮಾನ್ರನ್ನು ಕೊಲ್ಲುವುದಾಗಿ ಹೇಳಿಕೆ ನೀಡಿದ್ದ.
ಪ್ರಸ್ತುತ ದೆಹಲಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ, ಅಲ್ಲಿಂದಲೇ ಸಿಧು ಹತ್ಯೆಗೆ ಸಂಚು ರೂಪಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹತ್ಯೆಯ ಹೊಣೆ ಹೊತ್ತುಕೊಂಡಿರುವ ಗೋಲ್ಡಿ ಬ್ರಾರ್ ಲಾರೆನ್ಸ್ ಆಪ್ತನಾಗಿದ್ದಾನೆ.
ಭಾನುವಾರ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಂತರ, ಬಿಷ್ಣೋಯ್ ಅವರ ಗ್ಯಾಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಗ್ಯಾಂಗ್ನ ಸದಸ್ಯನೊಬ್ಬ ಹತ್ಯೆಯ ಹೊಣೆ ಹೊತ್ತು ಫೇಸ್ಬುಕ್ನಲ್ಲಿ ಹೊತ್ತುಕೊಂಡು ಪೋಸ್ಟ್ ಮಾಡಿದ್ದ. ಸಚಿನ್ ಬಿಷ್ಣೋಯ್, ಲಾರೆನ್ಸ್ ಬಿಷ್ಣೋಯ್ ಹತ್ಯೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಂದು ಅದರಲ್ಲಿ ಬರೆಯಲಾಗಿತ್ತು.
ಪಂಜಾಬ್ ಪೊಲೀಸರು ಸಿಧು ಮೂಸೆ ವಾಲಾ ಕೊಲೆ ಪ್ರಕರಣದ ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮನ್‌ಪ್ರೀತ್ ಎಂದು ಗುರುತಿಸಲಾಗಿದ್ದು ಆತನನ್ನು ಐದು ದಿನಗಳ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ .ಇಡೀ ಸಂಗೀತ ಲೋಕವನ್ನೇ ಬೆಚ್ಚಿ ಬೀಳಿಸಿದ್ದ ಕೊಲೆ ನಡೆದ 24 ಗಂಟೆಯೊಳಗೆ ಓರ್ವ ಆರೋಪಿಯ ಬಂಧನವಾಗಿದೆ. ಆತನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇಂದು (ಮಂಗಳವಾರ) ಮಧ್ಯಾಹ್ನ ಸಿಧು ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದಲ್ಲಿರುವ ಪೂರ್ವಜರ ಕೃಷಿ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಪಂಜಾಬ್, ರಾಜಸ್ಥಾನ ಮತ್ತು ಚಂಡೀಗಢದ ಇತರ ಸ್ಥಳಗಳ ಜನರು ಗಾಯಕನ ಅಂತಿಮ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 pm, Tue, 31 May 22