Jagannath Rath Yatra 2021: ಈ ಬಾರಿಯೂ ಭಕ್ತರಿಲ್ಲದೆ ನಡೆಯುತ್ತಿದೆ ಪುರಿ ಜಗನ್ನಾಥ ರಥಯಾತ್ರೆ; ನಿನ್ನೆಯಿಂದಲೇ ಜಾರಿಯಾಗಿದೆ ಕರ್ಫ್ಯೂ

| Updated By: Lakshmi Hegde

Updated on: Jul 12, 2021 | 9:44 AM

ಪುರಿ ಜಗನ್ನಾಥ ಯಾತ್ರೆಯನ್ನು ಅದ್ದೂರಿಯಾಗಿ ಮಾಡಬೇಕು, ಕೇವಲ ಪುರಿ ಜಗನ್ನಾಥ ದೇವಾಲಯದಲ್ಲಷ್ಟೇ ಅಲ್ಲದೆ, ಓಡಿಶಾದಾದ್ಯಂತ ರಥಯಾತ್ರೆ ಸಂಭ್ರಮ ಆಚರಿಸಲು ಅವಕಾಶ ಕೊಡಬೇಕು ಎಂದು ಅನೇಕರು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು.

Jagannath Rath Yatra 2021: ಈ ಬಾರಿಯೂ ಭಕ್ತರಿಲ್ಲದೆ ನಡೆಯುತ್ತಿದೆ ಪುರಿ ಜಗನ್ನಾಥ ರಥಯಾತ್ರೆ; ನಿನ್ನೆಯಿಂದಲೇ ಜಾರಿಯಾಗಿದೆ ಕರ್ಫ್ಯೂ
ಪುರಿ ಜಗನ್ನಾಥ ದೇಗುಲ
Follow us on

ಸುಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರಥೋತ್ಸವದಲ್ಲಿ ಈ ಬಾರಿಯೂ ಭಕ್ತರಿಗೆ ಅವಕಾಶ ಇಲ್ಲ. ಇಂದು ಜಗನ್ನಾಥ ರಥಯಾತ್ರೆ ನಡೆಯಲಿದ್ದು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರು ಪಾಲ್ಗೊಳ್ಳುವಂತಿಲ್ಲ ಎಂದು ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಕೊರೊನಾ ಸಾಂಕ್ರಾಮಿಕ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಕೊವಿಡ್​ 19 ನೆಗೆಟಿವ್​ ರಿಪೋರ್ಟ್​ ಹೊಂದಿರುವ ಕೆಲವೇ ಮಂದಿಗೆ ರಥ ಎಳೆಯಲು ಅವಕಾಶ ನೀಡಲಾಗುವುದು ಎಂದು ಆಡಳಿತಾಧಿಕಾರಿ ಅಜಯ್​ ಜೇನಾ ತಿಳಿಸಿದ್ದಾರೆ.

ಕಳೆದ ವರ್ಷದಂತೆ ಈ ಬಾರಿಯೂ ಜು.12ರಂದು ಜಗನ್ನಾಥ ರಥಯಾತ್ರೆ ಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೆ ನಡೆಯಲಿದೆ. ಸುಪ್ರೀಂಕೋರ್ಟ್​ ಆದೇಶ ಮತ್ತು ಒಡಿಶಾ ರಾಜ್ಯ ಸರ್ಕಾರದ ಎಸ್​ಒಪಿ ಅನ್ವಯ ರಥಯಾತ್ರೆಯಲ್ಲಿ ಭಕ್ತರಿಗೆ ಅವಕಾಶ ನೀಡುತ್ತಿಲ್ಲ. ಇನ್ನು ಎರಡೂ ಡೋಸ್​ ಲಸಿಕೆ ಪಡೆದು, ಆರ್​-ಪಿಸಿಆರ್​ ನೆಗೆಟಿವ್​ ರಿಪೋರ್ಟ್ ಹೊಂದಿರುವವರಿಗೆ ರಥ ಎಳೆಯಲು ಅವಕಾಶ ನೀಡಲಾಗುವುದು ಎಂದು ಅಜಯ್ ಜೇನಾ ಮಾಹಿತಿ ನೀಡಿದ್ದಾರೆ.

ರಥಯಾತ್ರೆಯಲ್ಲಿ ಸುಮಾರು 3000 ಪರಿಚಾರಕರು ಪಾಲ್ಗೊಳ್ಳಬಹುದು. ಆದರೆ ಆರ್​ಟಿ-ಪಿಸಿಆರ್​ ಟೆಸ್ಟ್ ನೆಗೆಟಿವ್​ ರಿಪೋರ್ಟ್​ ಹೊಂದಿರಬೇಕು ಮತ್ತು ಎರಡೂ ಡೋಸ್​ ಲಸಿಕೆ ಪಡೆದಿರಬೇಕು. ಇವರೇ ರಥವನ್ನೂ ಎಳೆಯುತ್ತಾರೆ. ಹಾಗೇ, ದೇಗುಲ ಮಂಡಳಿಗೆ ಸಂಬಂಧಪಟ್ಟಂತ 1000 ಅಧಿಕಾರಿಗಳು, ವಿವಿಧ ಸ್ಥಾನದಲ್ಲಿ ಇರುವವರು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಜುಲೈ 8ರಿಂದ ಪುರಿಯ ನಾಲ್ಕು ವಿವಿಧ ಭಾಗಗಳಲ್ಲಿ ಕೊವಿಡ್​ 19 ತಪಾಸಣೆ ಮಾಡಲಾಗುತ್ತಿತ್ತು ಎಂದೂ ಅವರು ತಿಳಿಸಿದ್ದಾರೆ.

ಪುರಿ ಜಗನ್ನಾಥ ಯಾತ್ರೆಯನ್ನು ಅದ್ದೂರಿಯಾಗಿ ಮಾಡಬೇಕು, ಕೇವಲ ಪುರಿ ಜಗನ್ನಾಥ ದೇವಾಲಯದಲ್ಲಷ್ಟೇ ಅಲ್ಲದೆ, ಓಡಿಶಾದಾದ್ಯಂತ ರಥಯಾತ್ರೆ ಸಂಭ್ರಮ ಆಚರಿಸಲು ಅವಕಾಶ ಕೊಡಬೇಕು ಎಂದು ಅನೇಕರು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಆದರೆ ಅದೆಲ್ಲ ಅರ್ಜಿಗಳನ್ನೂ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ. ಪುರಿಯಲ್ಲಿ ಸದ್ಯ 48 ಗಂಟೆಗಳ ಕರ್ಫ್ಯೂ ಹೇರಲಾಗಿದೆ. ಭಾನುವಾರದಿಂದಲೇ ಈ ಕರ್ಫ್ಯೂ ಜಾರಿಯಾಗಿದೆ. ನಾಳೆ (ಜು.13) ಸಂಜೆ 8ಗಂಟೆಯವರೆಗೂ ಕರ್ಫ್ಯೂ ಮುಂದುವರಿಯಲಿದೆ. ರಥಯಾತ್ರೆ ಸಂದರ್ಭದಲ್ಲಿ ಹೆಚ್ಚಿನ ಜನರು ಸೇರಬಾರದು ಎಂಬ ಕಾರಣಕ್ಕೆ ಈ ಕಠಿಣ ನಿಯಮಗಳನ್ನು ತೆಗೆದುಕೊಂಡಿದ್ದಾಗಿ ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ: Petrol Price Today: ಇಂದು ಇಳಿಕೆ ಕಂಡ ಡೀಸೆಲ್​ ದರ, ಪೆಟ್ರೋಲ್​ ಬೆಲೆಯಲ್ಲಿ ಹೆಚ್ಚಳ! ದರ ವಿವರ ಮಾಹಿತಿ ಇಲ್ಲಿದೆ 

Puri to hold devotee less Jagannath Rath Yatra today