
ನವದೆಹಲಿ, ನವೆಂಬರ್ 05: ಪ್ರತಿಷ್ಠಿತ ಕ್ವಾಕ್‌ಕ್ವರೇಲಿ ಸೈಮಂಡ್ಸ್ (ಕ್ಯೂಎಸ್) ವಿಶ್ವ ವಿಶ್ವವಿದ್ಯಾಲಯದ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತವು ಅಗ್ರ ಸ್ಥಾನವನ್ನು ಕಳೆದುಕೊಂಡಿದೆ. ಭಾರತದ ಒಂದೇ ಒಂದು ವಿಶ್ವವಿದ್ಯಾಲಯವೂ ಟಾಪ್ 50 ರಲ್ಲಿ ಸ್ಥಾನ ಪಡೆದಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಪಾಕಿಸ್ತಾನದ 82 ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಹಾಂಗ್ ಕಾಂಗ್ ವಿಶ್ವವಿದ್ಯಾಲಯವು ಈ ವರ್ಷ ಪೀಕಿಂಗ್ ವಿಶ್ವವಿದ್ಯಾಲಯವನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಈ ವರ್ಷ 1,500 ಕ್ಕೂ ಹೆಚ್ಚು ಸಂಸ್ಥೆಗಳನ್ನು ಮೌಲ್ಯಮಾಪನ ಮಾಡಲಾಯಿತು, ಇದರಲ್ಲಿ 550ಕ್ಕೂ ಹೆಚ್ಚಿನ ಹೊಸ ವಿಶ್ವವಿದ್ಯಾಲಯಗಳು ಸೇರಿವೆ. ಈ ಪಟ್ಟಿಯಲ್ಲಿ ಅತಿ ಹೆಚ್ಚು ವಿಶ್ವವಿದ್ಯಾಲಯಗಳು ಚೀನಾ (395), ನಂತರ ಭಾರತ (294), ಜಪಾನ್ (146) ಮತ್ತು ದಕ್ಷಿಣ ಕೊರಿಯಾ (103) ಇವೆ. ಈ ವರ್ಷ ಹಾಂಗ್ ಕಾಂಗ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅದರ ಐದು ವಿಶ್ವವಿದ್ಯಾಲಯಗಳು ಟಾಪ್ 10 ರಲ್ಲಿ ಸ್ಥಾನ ಪಡೆದಿವೆ.
ಭಾರತದ ಒಂದೇ ಒಂದು ವಿಶ್ವವಿದ್ಯಾಲಯವೂ ಟಾಪ್ 50 ರಲ್ಲಿ ಇಲ್ಲ
ಏಷ್ಯಾದ ಟಾಪ್ 50 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯವೂ ಸ್ಥಾನ ಪಡೆದಿಲ್ಲ. ಐಐಟಿ ದೆಹಲಿ 59 ನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನ ಐಐಎಸ್ಸಿ 64 ನೇ ಸ್ಥಾನದಲ್ಲಿದೆ. ನೆರೆಯ ಪಾಕಿಸ್ತಾನವು ಈ ಪಟ್ಟಿಯಲ್ಲಿ 82 ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಪಟ್ಟಿಯಲ್ಲಿರುವ ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ ಪಾಕಿಸ್ತಾನ ಆರನೇ ಸ್ಥಾನದಲ್ಲಿದೆ. ಫಿಲಿಪೈನ್ಸ್ ಈ ಪಟ್ಟಿಯಲ್ಲಿ 35 ವಿಶ್ವವಿದ್ಯಾಲಯಗಳನ್ನು ಹೊಂದಿದ್ದು, ಕಳೆದ ವರ್ಷಕ್ಕಿಂತ 11 ಹೆಚ್ಚು.
ಮತ್ತಷ್ಟು ಓದಿ: World University Rankings 2024: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಐಐಎಸ್ಸಿಗೆ ಮತ್ತೊಮ್ಮೆ ಭಾರತೀಯ ಸಂಸ್ಥೆಗಳಲ್ಲಿ ಅಗ್ರ ಸ್ಥಾನ
ಈ ವರ್ಷ, ಏಳು ಭಾರತೀಯ ವಿಶ್ವವಿದ್ಯಾಲಯಗಳು ಏಷ್ಯಾದ ಅಗ್ರ 100 ಸಂಸ್ಥೆಗಳ ಪಟ್ಟಿಯಲ್ಲಿ ಸೇರಿವೆ. ದೇಶದ ಐದು ಉನ್ನತ IITಗಳು (IIT ದೆಹಲಿ, IIT ಮದ್ರಾಸ್, IIT ಬಾಂಬೆ, IIT ಕಾನ್ಪುರ ಮತ್ತು IIT ಖರಗ್‌ಪುರ) ಅಗ್ರ 100 ರಲ್ಲಿ ಸ್ಥಾನ ಪಡೆದಿವೆ.
ಈ ವರ್ಷ ಭಾರತದಿಂದ ಅತ್ಯುನ್ನತ ಶ್ರೇಯಾಂಕವನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ (ಐಐಟಿ ದೆಹಲಿ) ಗಳಿಸಿದೆ. ಒಟ್ಟಾರೆ 78.6 ಅಂಕಗಳೊಂದಿಗೆ ಏಷ್ಯಾದಲ್ಲಿ 59 ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, ಸಂಶೋಧನೆ, ನಾವೀನ್ಯತೆ, ಕಲಿಕಾ ಅನುಭವ ಮತ್ತು ಉದ್ಯೋಗಾವಕಾಶದಂತಹ ನಿಯತಾಂಕಗಳಲ್ಲಿ ಐಐಟಿ ದೆಹಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ.
ಐಐಎಸ್ಸಿ ಬೆಂಗಳೂರು 64 ನೇ ಸ್ಥಾನ ಪಡೆದಿದೆ
ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) 76.5 ಅಂಕಗಳೊಂದಿಗೆ 64 ನೇ ಸ್ಥಾನದಲ್ಲಿದೆ. ಸಂಶೋಧನಾ ಉಲ್ಲೇಖಗಳು ಮತ್ತು ಶೈಕ್ಷಣಿಕ ಮಟ್ಟದಲ್ಲಿ ಐಐಎಸ್‌ಸಿ ವಿಶೇಷವಾಗಿ ಉತ್ತಮ ಪ್ರದರ್ಶನ ನೀಡಿದೆ. ಐಐಟಿ ರೂರ್ಕಿ ಮತ್ತು ಐಐಟಿ ಗುವಾಹಟಿ ಕೂಡ ಅಗ್ರ 150 ರಲ್ಲಿ ಸ್ಥಾನ ಪಡೆದಿವೆ.
ಕ್ಯೂಎಸ್ ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕಗಳು 2026: ಭಾರತೀಯ ಸಂಸ್ಥೆಗಳ ಶ್ರೇಯಾಂಕ
59 ನೇ ಸ್ಥಾನ – ಐಐಟಿ ದೆಹಲಿ (ಅಂಕ 78.6)
64 ನೇ ಸ್ಥಾನ – ಐಐಎಸ್ಸಿ ಬೆಂಗಳೂರು (ಅಂಕ 76.5)
70 ನೇ ಸ್ಥಾನ – ಐಐಟಿ ಮದ್ರಾಸ್ (ಅಂಕ 75.1)
71ನೇ ಸ್ಥಾನ – ಐಐಟಿ ಬಾಂಬೆ (ಅಂಕ 75.0)
77ನೇ ಸ್ಥಾನ – ಐಐಟಿ ಕಾನ್ಪುರ (ಅಂಕ 73.4)
77ನೇ ಸ್ಥಾನ – ಐಐಟಿ ಖರಗ್‌ಪುರ (ಅಂಕ 73.4)
95 ನೇ ಸ್ಥಾನ – ದೆಹಲಿ ವಿಶ್ವವಿದ್ಯಾಲಯ (ಅಂಕ 68.5)
114ನೇ ಸ್ಥಾನ – ಐಐಟಿ ರೂರ್ಕಿ (ಅಂಕ 66.2)
115 ನೇ ಸ್ಥಾನ – ಐಐಟಿ ಗುವಾಹಟಿ (ಅಂಕ 66.1)
156 ನೇ ಸ್ಥಾನ – ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿಐಟಿ), ವೆಲ್ಲೂರು, ಭಾರತ (ಅಂಕ 57.7)
206 ನೇ ಸ್ಥಾನ – ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ, ಕರ್ನಾಟಕ (ಅಂಕ 50.7) ಪಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ