Rahul Gandhi: ಪ್ರಧಾನಿ ಮೋದಿ 2 ಭಾರತ ಸೃಷ್ಟಿಸುತ್ತಿದ್ದಾರೆ; ಪೋರ್ಷೆ ಅಪಘಾತದ ಬಗ್ಗೆ ರಾಹುಲ್ ಗಾಂಧಿ ವಾಗ್ದಾಳಿ

|

Updated on: May 21, 2024 | 9:18 PM

ಪುಣೆ ಪೋರ್ಷೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ರಸ್ತೆ ಅಪಘಾತ ಪ್ರಕರಣದ ಆರೋಪಿಗಳಿಗೆ ಕೂಡಲೇ ಜಾಮೀನು ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಉನ್ನತ ಪೊಲೀಸರಿಗೆ ಸೂಚಿಸಿದ್ದಾರೆ.

Rahul Gandhi: ಪ್ರಧಾನಿ ಮೋದಿ 2 ಭಾರತ ಸೃಷ್ಟಿಸುತ್ತಿದ್ದಾರೆ; ಪೋರ್ಷೆ ಅಪಘಾತದ ಬಗ್ಗೆ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ
Follow us on

ಪುಣೆ: ಮಹಾರಾಷ್ಟ್ರದ ಪುಣೆ ಪೋರ್ಷೆ ಅಪಘಾತ (Pune Porsche accident) ಪ್ರಕರಣದ ಬಗ್ಗೆ ಜುವೆನೈಲ್ ಜಸ್ಟೀಸ್ ಬೋರ್ಡ್ ಇತ್ತೀಚೆಗೆ ನೀಡಿರುವ ಆದೇಶದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಟೀಕಾಪ್ರಹಾರ ನಡೆಸಿದ್ದಾರೆ. ‘ನರೇಂದ್ರ ಮೋದಿ (Narendra Modi) ಎರಡು ಭಾರತಗಳನ್ನು ಸೃಷ್ಟಿಸುತ್ತಿದ್ದಾರೆ. ಅಲ್ಲಿ ನ್ಯಾಯವೂ ಸಂಪತ್ತಿನ ಮೇಲೆ ಅವಲಂಬಿತವಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿ ಎಕ್ಸ್​ನಲ್ಲಿ ವೀಡಿಯೊ ಹೇಳಿಕೆಯನ್ನು ಪ್ರಕಟಿಸಿದ್ದಾರೆ.

“ಬಸ್, ಟ್ರಕ್ ಅಥವಾ ಓಲಾ-ಉಬರ್ ಚಾಲಕರು ತಪ್ಪಾಗಿ ಯಾರನ್ನಾದರೂ ರಸ್ತೆ ಅಪಘಾತದಲ್ಲಿ ಕೊಂದರೆ, ಅವರನ್ನು 10 ವರ್ಷಗಳ ಕಾಲ ಜೈಲಿಗೆ ಕಳುಹಿಸಲಾಗುತ್ತದೆ, ವಾಹನದ ಕೀಯನ್ನು ಕಸಿದುಕೊಳ್ಳಲಾಗುತ್ತದೆ. ಆದರೆ, 16 ವರ್ಷ ವಯಸ್ಸಿನವನು ಪೋರ್ಷೆ ಕಾರನ್ನು ಅಮಲೇರಿದ ಸ್ಥಿತಿಯಲ್ಲಿ ಓಡಿಸಿ ಇಬ್ಬರು ವ್ಯಕ್ತಿಗಳನ್ನು ಕೊಂದಿದ್ದಾನೆ. ಆದರೂ ಅವನಿಗೆ ಸೂಕ್ತ ಶಿಕ್ಷೆಯಾಗಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಚಾಲಕನಿಂದ ಪ್ರಮಾದ, ಕಾರು ಅಪಘಾತ, ಇಬ್ಬರು ಸಾವು, ಬಾಲಕನ ತಂದೆಯ ಬಂಧನ

ಈ ಹಿಂದೆ ಪುಣೆಯ ಜುವೆನೈಲ್ ಜಸ್ಟಿಸ್ ಬೋರ್ಡ್ ಇಬ್ಬರು ಜನರನ್ನು ಕೊಂದ ಕಾರು ಅಪಘಾತದಲ್ಲಿ ಭಾಗಿಯಾಗಿದ್ದ ಅಪ್ರಾಪ್ತನಿಗೆ ಜಾಮೀನು ನೀಡಿತ್ತು. ಆದರೆ, ಆತನನ್ನು ವಯಸ್ಕ ಆರೋಪಿ ಎಂದು ಪರಿಗಣಿಸಿ ವಿಚಾರಣೆ ನಡೆಸಲು ಉನ್ನತ ನ್ಯಾಯಾಲಯದ ಅನುಮತಿ ಪಡೆಯುವುದಾಗಿ ಪೊಲೀಸರು ತಿಳಿಸಿದ್ದರು. ಯುವಕನನ್ನು ಬಾಲಾಪರಾಧ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು, ಅದು ಕೆಲವೇ ಗಂಟೆಗಳ ನಂತರ ಅವನಿಗೆ ಜಾಮೀನು ನೀಡಿದೆ. ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿ ಸಂಚಾರ ನಿಯಮಗಳ ಬಗ್ಗೆ ಅಧ್ಯಯನ ನಡೆಸಿ 15 ದಿನಗಳೊಳಗೆ ಮಂಡಳಿಗೆ ಪ್ರಸ್ತುತಿ ಸಲ್ಲಿಸುವಂತೆಯೂ ಸೂಚಿಸಿದೆ.

ಇದನ್ನೂ ಓದಿ: ಪೋರ್ಷೆ ಕಾರು ಅಪಘಾತ ಪ್ರಕರಣ: ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ ಆರೋಪಿಗೆ ಪೊಲೀಸ್ ಕಸ್ಟಡಿಯಲ್ಲಿ ಪಿಜ್ಜಾ ನೀಡಲಾಗಿತ್ತು; ಕಾಂಗ್ರೆಸ್ ಆರೋಪ

ಪಾನಮತ್ತನಾಗಿದ್ದ ಹುಡುಗ ಚಲಾಯಿಸುತ್ತಿದ್ದ ಪೋರ್ಷೆ ಕಾರು ಭಾನುವಾರ ಮುಂಜಾನೆ ಪುಣೆ ನಗರದ ಕಲ್ಯಾಣಿ ನಗರ ಪ್ರದೇಶದಲ್ಲಿ ಇಬ್ಬರು ಮೋಟಾರ್ ಬೈಕ್ ಸವಾರರನ್ನು ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟ ಎಂದು ಗುರುತಿಸಲಾಗಿದ್ದು, ಇಬ್ಬರೂ ಮಧ್ಯಪ್ರದೇಶದ 24 ವರ್ಷದ ಐಟಿ ಉದ್ಯೋಗಿಗಳಾಗಿದ್ದಾರೆ. ಆರೋಪಿ ಬಾಲಾಪರಾಧಿ ತನ್ನ ಸ್ನೇಹಿತರೊಂದಿಗೆ ರಾತ್ರಿ 9.30ರಿಂದ 1 ಗಂಟೆಯ ನಡುವೆ ಬಾರ್​ಗೆ ಹೋಗಿ ಮದ್ಯ ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ