ಕಾಂಗ್ರೆಸ್ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಅರನ್ನು (Rahul Gandhi) ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ಹಿನ್ನೆಲೆಯಲ್ಲಿ ಸಂಸದನ ಸ್ಥಾನದಿಂದ (Disqualification) ಅನರ್ಹಗೊಳಿಸಲಾಗಿದೆ. ಮೋದಿ ಉಪನಾಮ ಬಳಸಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ನ ನ್ಯಾಯಾಲಯ ಅವರಿಗೆ 2 ವರ್ಷ ಜೈಲುಶಿಕ್ಷೆ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿತ್ತು. ಜತೆಗೆ, 30 ದಿನಗಳ ಜಾಮೀನು ಕೂಡ ಮಂಜೂರು ಮಾಡಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಲೋಕಸಭೆಯ ಕಾರ್ಯದರ್ಶಿ ಶುಕ್ರವಾರ ರಾಹುಲ್ ಗಾಂಧಿ ಅನರ್ಹತೆಯ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. ಪರಿಣಾಮವಾಗಿ ಅವರು ವಯನಾಡು ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ಈ ಹಿಂದೆ ಕೂಡ ಇಂಥ ಪ್ರಕರಣಗಳಲ್ಲಿ ಕೆಲವು ಪ್ರಮುಖ ರಾಜಕಾರಣಿಗಳು ಅನರ್ಹಗೊಂಡಿದ್ದರು.
ಕೋರ್ಟ್ ಶಿಕ್ಷೆ ವಿಧಿಸಿದ ಕಾರಣಕ್ಕಾಗಿ ಸಂಸದ ಸ್ಥಾನದಿಂದ ಅಥವಾ ಶಾಸಕ ಸ್ಥಾನದಿಂದ ಅನರ್ಹಗೊಂಡ ಪ್ರಮುಖ ರಾಜಕಾರಣಿಗಳು ಯಾರು? ಯಾಕಾಗಿ ಅನರ್ಹಗೊಂಡಿದ್ದರು ಎಂಬ ಮಾಹಿತಿ ಇಲ್ಲಿದೆ.
ಲಕ್ಷದ್ವೀಪದ ಸಂಸದರಾಗಿದ್ದ ಮೊಹಮ್ಮದ್ ಫೈಜಲ್ ಅವರನ್ನು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ 2003ರ ಜನವರಿ 13ರಂದು ಸೆಷನ್ಸ್ ನ್ಯಾಯಾಲಯ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಪರಿಣಾಮವಾಗಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು.
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ, ಶಾಸಕ ಆಜಂ ಖಾನ್ ಅವರನ್ನು 2019ರಲ್ಲಿ ದ್ವೇಷಭಾಷಣ ಪ್ರಕರಣವೊಂದಕ್ಕೆ ಸಂಬಂಧಿಸಿ ರಾಮಪುರ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ನಂತರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿ. ಜಯಲಲಿತಾ ಅವರನ್ನು ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿ 2014ರಲ್ಲಿ ಬೆಂಗಳೂರಿನ ನ್ಯಾಯಾಲಯ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿತ್ತು. ಪರಿಣಾಮವಾಗಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ; ಮೋದಿ ಉಪನಾಮ ಹೇಳಿಕೆ ಸಂಬಂಧಿಸಿ ಶಿಕ್ಷೆ
ಕಾಂಗ್ರೆಸ್ನಿಂದ ಸ್ಪರ್ಧಿಸಿ ಸಂಸದರಾಗಿದ್ದ ರಶೀದ್ ಮಸೂದ್ ಅವರನ್ನು ‘ಎಂಬಿಬಿಎಸ್ ಸೀಟು ಹಂಚಿಕೆ ಹಗರಣ’ದ ಆರೋಪದಲ್ಲಿ ದೋಷಿ ಎಂದು ಸುಪ್ರೀಂ ಕೋರ್ಟ್ 2013ರಲ್ಲಿ ತೀರ್ಪು ನೀಡಿತ್ತು. ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು. ಪರಿಣಾಮವಾಗಿ ಸಂಸದರ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲಾಗಿತ್ತು.
ಮೇವು ಹಗರಣದಲ್ಲಿ ಐದು ವರ್ಷ ಶಿಕ್ಷೆಗೆ ಗುರಿಯಾಗಿರುವ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರನ್ನೂ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ಯಾವುದೇ ಅಪರಾಧ ಸಾಬೀತಾಗಿ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾದ ಸಂಸದ ಅಥವಾ ಶಾಸಕರನ್ನು ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಬಹುದು ಎಂದು ಪ್ರಜಾಪ್ರತಿನಿಧಿ ಕಾಯ್ದೆ, 1951ರ ಸೆಕ್ಷನ್ 8 (3) ರಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ ಈಗ, ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಅವರನ್ನೂ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Fri, 24 March 23