ಭಾರತ್ ಜೋಡೋ ಯಾತ್ರೆ ಇಂದೋರ್ ತಲುಪುತ್ತಿದ್ದಂತೆ ಬಾಂಬ್ ಸ್ಫೋಟಿಸುವುದಾಗಿ ರಾಹುಲ್ ಗಾಂಧಿಗೆ ಬೆದರಿಕೆ ಪತ್ರ

| Updated By: ರಶ್ಮಿ ಕಲ್ಲಕಟ್ಟ

Updated on: Nov 18, 2022 | 3:56 PM

ನವೆಂಬರ್ 24 ರಂದು, ರಾಹುಲ್ ಗಾಂಧಿ ಇಂದೋರ್‌ನ ಖಾಲ್ಸಾ ಕ್ರೀಡಾಂಗಣದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ. ಕಿಡಿಗೇಡಿಗಳು ಈ ರೀತಿ ಮಾಡಿದ್ದಾಗಿರಬಹುದು, ಈ ಬಗ್ಗೆ ಪೊಲೀಸರು  ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ

ಭಾರತ್ ಜೋಡೋ ಯಾತ್ರೆ ಇಂದೋರ್ ತಲುಪುತ್ತಿದ್ದಂತೆ ಬಾಂಬ್ ಸ್ಫೋಟಿಸುವುದಾಗಿ ರಾಹುಲ್ ಗಾಂಧಿಗೆ ಬೆದರಿಕೆ ಪತ್ರ
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
Follow us on

ಭಾರತ್ ಜೋಡೋ ಯಾತ್ರೆ (Bharat Jodo Yatra) ಇಂದೋರ್ ತಲುಪುತ್ತಿದ್ದಂತೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿರುವ (bomb threat) ಪತ್ರವೊಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಅವರಿಗೆ ಸಿಕ್ಕಿದೆ. ಮೂಲಗಳ ಪ್ರಕಾರ ಜೂನಿಯ ಸಿಹಿ ತಿಂಡಿ ಮಾರುವ ಅಂಗಡಿಯೊಂದರಲ್ಲಿ ಬೆದರಿಕೆ ಪತ್ರ ಬಂದಿದೆ.ಇಂದೋರ್ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಸ್ವೀಟ್ ಅಂಗಡಿಯಲ್ಲಿ ಪತ್ರವನ್ನು ಬಿಟ್ಟು ಹೋದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಮೂಲಗಳ ಪ್ರಕಾರ, ಪೊಲೀಸರು ಜೂನಿ ಇಂದೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ನವೆಂಬರ್ 24 ರಂದು, ರಾಹುಲ್ ಗಾಂಧಿ ಇಂದೋರ್‌ನ ಖಾಲ್ಸಾ ಕ್ರೀಡಾಂಗಣದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ. ಕಿಡಿಗೇಡಿಗಳು ಈ ರೀತಿ ಮಾಡಿದ್ದಾಗಿರಬಹುದು, ಈ ಬಗ್ಗೆ ಪೊಲೀಸರು  ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 507 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಈ ಪ್ರಕರಣದ ಆರೋಪಿಗಳು ಎನ್ಎಸ್ಎ ಅಡಿಯಲ್ಲಿ ಆರೋಪಗಳನ್ನು ಎದುರಿಸಬೇಕಾಗಬಹುದು.

ರಾಹುಲ್ ಗಾಂಧಿ ಅವರು ವೀರ್ ಸಾವರ್ಕರ್ ಬಗ್ಗೆ ಟೀಕೆ ಮಾಡಿದ ಒಂದು ದಿನದ ನಂತರ ಈ ಬೆದರಿಕೆ ಪತ್ರ ಬಂದಿದೆ. ಸಾವರ್ಕರ್ ಬ್ರಿಟಿಷ್ ಆಡಳಿತಗಾರರಿಗೆ ಸಹಾಯ ಮಾಡಿದ್ದು ಭಯದಿಂದ ಅವರಿಗೆ ಕ್ಷಮಾದಾನ ಅರ್ಜಿಯನ್ನು ಬರೆದಿದ್ದಾರೆ ಎಂದು ರಾಹುಲ್ ಹೇಳಿದ್ದರು. ರಾಹುಲ್ ಹೇಳಿಕೆಯನ್ನು ಬಿಜೆಪಿ ಟೀಕಿಸಿ,ಪ್ರತಿಭಟನೆ ನಡೆಸಿತ್ತು.

ಸಾವರ್ಕರ್ ಕ್ಷಮಾಪಣೆ ಕೋರಿ ಬರೆದ ಪತ್ರದ ಪ್ರತಿಯನ್ನು ತೋರಿಸುತ್ತಾ, “ಸಾವರ್ಕರ್ ಜೀ ಅದರಲ್ಲಿ ಬರೆದಿದ್ದಾರೆ: ಸರ್, ನಿಮ್ಮ ಅತ್ಯಂತ ವಿಧೇಯ ಸೇವಕನಾಗಿ ನಾನು ಉಳಿಯಲು ಬೇಡಿಕೊಳ್ಳುತ್ತೇನೆ ಎಂದು. ಅವರು ಆ ಪತ್ರಕ್ಕೆ ಸಹಿ ಹಾಕಿದ್ದಕ್ಕೆ ಕಾರಣವೇನು? ಭಯ, ಅವರು ಬ್ರಿಟಿಷರಿಗೆ ಹೆದರಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸಾವರ್ಕರ್ ಅವರ ಮೊಮ್ಮಗ ಗುರುವಾರ ಮುಂಬೈನಲ್ಲಿ ರಾಹುಲ್ ಗಾಂಧಿ ವಿರುದ್ಧ ತನ್ನ ಅಜ್ಜನನ್ನು ಅವಮಾನಿಸಿದ್ದಕ್ಕಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ಶಿವಸೇನಾದ ಉದ್ಧವ್ ಠಾಕ್ರೆ , ವಿಡಿ ಸಾವರ್ಕರ್ ಬಗ್ಗೆ ತಮ್ಮ ಪಕ್ಷಕ್ಕೆ ಅಪಾರ ಗೌರವವಿದೆ ಮತ್ತು ಸಾವರ್ಕರ್ ಬಗ್ಗೆ ರಾಹುಲ್ ಗಾಂಧಿಯವರ ಟೀಕೆಗಳನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಶೇಗಾಂವ್‌ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರ ಮರಿ ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ತುಷಾರ್ ಗಾಂಧಿಯನ್ನು ಪಕ್ಷವು ಇಬ್ಬರು ನಾಯಕರ ಪರಂಪರೆಯ ವಾಹಕಗಳು ಎಂದು ಬಣ್ಣಿಸಿದೆ.

“ಇಬ್ಬರು ಒಟ್ಟಿಗೆ ನಡೆಯುವುದು ಆಡಳಿತಗಾರರಿಗೆ ಸಂದೇಶವಾಗಿದೆ, ಅವರು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಬಹುದು ಆದರೆ ಅದನ್ನು ಮುಗಿಸಲು ಬಿಡುವುದಿಲ್ಲಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.

ತುಷಾರ್ ಗಾಂಧಿ ಅವರಲ್ಲದೆ, ಹಿರಿಯ ಕಾಂಗ್ರೆಸ್ ನಾಯಕರಾದ ಮುಕುಲ್ ವಾಸ್ನಿಕ್, ದೀಪೇಂದರ್ ಹೂಡಾ, ಮಿಲಿಂದ್ ದಿಯೋರಾ, ಮಾಣಿಕ್ರಾವ್ ಠಾಕ್ರೆ, ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯಿ ಜಗತಾಪ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

ರಾಹುಲ್ ಗಾಂಧಿ ಇಂದು ಸಂಜೆ ಶೇಗಾಂವ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದಲ್ಲಿ ಕೊನೆಯ ಹಂತದಲ್ಲಿದ್ದು, ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ