ರಾಹುಲ್ ಗಾಂಧಿ ಜತೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ
ನವೆಂಬರ್ 7 ರಿಂದ ಮಹಾರಾಷ್ಟ್ರದ ಮೂಲಕ ಹಾದುಹೋಗುವ ಯಾತ್ರೆಯು ಅಕೋಲಾ ಜಿಲ್ಲೆಯ ಬಾಲಾಪುರದಿಂದ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಪ್ರಯಾಣವನ್ನು ಪುನರಾರಂಭಿಸಿತು.
ಶೇಗಾಂವ್, ಮಹಾರಾಷ್ಟ್ರ: ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ (Tushar Gandhi) ಇಂದು (ಶುಕ್ರವಾರ) ಬೆಳಗ್ಗೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಶೇಗಾಂವ್‌ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ರಾಹುಲ್ ಗಾಂಧಿ (Rahul Gandhi) ಜತೆ ಹೆಜ್ಜೆ ಹಾಕಿದ್ದಾರೆ. ತುಷಾರ್ ಗಾಂಧಿ ಅವರ ಭಾಗವಹಿಸುವಿಕೆಯನ್ನು ಐತಿಹಾಸಿಕ ಎಂದು ಕಾಂಗ್ರೆಸ್ ಶ್ಲಾಘಿಸಿದೆ. ನವೆಂಬರ್ 7 ರಿಂದ ಮಹಾರಾಷ್ಟ್ರದ ಮೂಲಕ ಹಾದುಹೋಗುವ ಯಾತ್ರೆಯು ಅಕೋಲಾ ಜಿಲ್ಲೆಯ ಬಾಲಾಪುರದಿಂದ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಪ್ರಯಾಣವನ್ನು ಪುನರಾರಂಭಿಸಿತು. ಕೆಲವು ಗಂಟೆಗಳ ನಂತರ ಅದು ಶೇಗಾಂವ್ ತಲುಪಿತು. ಇಲ್ಲಿ ಲೇಖಕ ಮತ್ತು ಕಾರ್ಯಕರ್ತ ತುಷಾರ್ ಗಾಂಧಿ ಯಾತ್ರೆಗೆ ಸೇರಿಕೊಂಡರು. ನಾನು ನಾಳೆ ಶೇಗಾಂವ್‌ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ತುಷಾರ್ ಗಾಂಧಿ ಗುರುವಾರ ಟ್ವೀಟ್ ಮಾಡಿದ್ದರು. ನವೆಂಬರ್18 ರಂದು ಶೇಗಾಂವ್‌ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ. ಶೇಗಾಂವ್ ನನ್ನ ಜನ್ಮಸ್ಥಳವೂ ಹೌದು. ನನ್ನ ತಾಯಿ ಪ್ರಯಾಣಿಸುತ್ತಿದ್ದ ರೈಲು ನಾಗಪುರ ಮೂಲಕ ಹೋಗುವ ಹೌರಾ ಮೇಲ್ ನಾನು ಜನಿಸಿದ ದಿನ 1960 ರ ಜನವರಿ 17 ರಂದು ಶೇಗಾಂವ್ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು ಎಂದು ಟ್ವೀಟಿನಲ್ಲಿ ಬರೆದಿದ್ದಾರೆ.
ತುಷಾರ್ ಗಾಂಧಿ ಯಾತ್ರೆಯಲ್ಲಿ ಭಾಗವಹಿಸಿದ್ದು ಐತಿಹಾಸಿಕ ಎಂದು ಕಾಂಗ್ರೆಸ್ ಬಣ್ಣಿಸಿದೆ.
Great grandson of Mahatma Gandhi and author Tushar Gandhi joined Rahul Gandhi in Bharat Jodo Yatra today.
(Source: AICC) pic.twitter.com/Z0DjGPLa71
— ANI (@ANI) November 18, 2022
ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರ ಮರಿ ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ತುಷಾರ್ ಗಾಂಧಿಯನ್ನು ಪಕ್ಷವು ಇಬ್ಬರು ನಾಯಕರ ಪರಂಪರೆಯ ವಾಹಕಗಳು ಎಂದು ಬಣ್ಣಿಸಿದೆ.
“ಇಬ್ಬರು ಒಟ್ಟಿಗೆ ನಡೆಯುವುದು ಆಡಳಿತಗಾರರಿಗೆ ಸಂದೇಶವಾಗಿದೆ, ಅವರು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಬಹುದು ಆದರೆ ಅದನ್ನು ಮುಗಿಸಲು ಬಿಡುವುದಿಲ್ಲಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.
ತುಷಾರ್ ಗಾಂಧಿ ಅವರಲ್ಲದೆ, ಹಿರಿಯ ಕಾಂಗ್ರೆಸ್ ನಾಯಕರಾದ ಮುಕುಲ್ ವಾಸ್ನಿಕ್, ದೀಪೇಂದರ್ ಹೂಡಾ, ಮಿಲಿಂದ್ ದಿಯೋರಾ, ಮಾಣಿಕ್ರಾವ್ ಠಾಕ್ರೆ, ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯಿ ಜಗತಾಪ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.
ರಾಹುಲ್ ಗಾಂಧಿ ಇಂದು ಸಂಜೆ ಶೇಗಾಂವ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದಲ್ಲಿ ಕೊನೆಯ ಹಂತದಲ್ಲಿದ್ದು, ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ