ರಾಜೀವ್-ಸೋನಿಯಾ ಮೊದಲು ಭೇಟಿಯಾಗಿದ್ದ ಜಾಗಕ್ಕೆ ಗೆಳತಿಯನ್ನು ಕರೆದುಕೊಂಡು ಹೋಗಿದ್ರಂತೆ ರಾಹುಲ್
ರಾಹುಲ್ ಗಾಂಧಿ ತಮ್ಮ ಪೋಷಕರಾದ ರಾಜೀವ್-ಸೋನಿಯಾ ಗಾಂಧಿ ಮೊದಲ ಬಾರಿ ಭೇಟಿಯಾಗಿದ್ದ ಕೇಂಬ್ರಿಡ್ಜ್ ರೆಸ್ಟೋರೆಂಟ್‌ಗೆ ಗೆಳತಿಯನ್ನು ಕರೆದೊಯ್ದ ಅಪರೂಪದ ನೆನಪನ್ನು ಹಂಚಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆ ಸಂದರ್ಭದಲ್ಲಿ, ಪೋಷಕರ ಪ್ರೇಮಕಥೆ ಶುರುವಾದ ಸ್ಥಳವನ್ನು ವಿವರಿಸಿದರು. ತಮ್ಮ ಕುಟುಂಬದ ಪ್ರೀತಿ, ಸಂಬಂಧಗಳು ಮತ್ತು ವೈಯಕ್ತಿಕ ಅನುಭವಗಳನ್ನು ಈ ಘಟನೆಯ ಮೂಲಕ ಹೊರಹಾಕಿದರು.

ನವದೆಹಲಿ, ನವೆಂಬರ್ 17: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಜೀವನದ ಅಪರೂಪದ ವೈಯಕ್ತಿಕ ನೆನಪೊಂದನ್ನು ಹಂಚಿಕೊಂಡಿದ್ದಾರೆ. ಕೇಂಬ್ರಿಡ್ಜ್ನಲ್ಲಿ ಓದುತ್ತಿದ್ದ ಸಮಯದಲ್ಲಿ ತಮ್ಮ ಗೆಳತಿಯನ್ನು ತಂದೆ ರಾಜೀವ್ ಹಾಗೂ ತಾಯಿ ಸೋನಿಯಾ ಮೊದಲ ಬಾರಿ ಭೇಟಿಯಾಗಿದ್ದ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿದ್ದ ಸಂಗತಿಯನ್ನು ಅವರು ನೆನಪಿಸಿಕೊಂಡಿದ್ದಾರೆ.
ತಮ್ಮ ಪೋಷಕರ ಪ್ರೇಮಕಥೆ ಆರಂಭವಾದ ಸ್ಥಳವನ್ನು ಗೆಳತಿಗೆ ತೋರಿಸಬೇಕು ಎಂಬ ಆಸೆ ರಾಹುಲ್ ಅವರಿತ್ತಂತೆ, ಹೀಗಾಗಿ ಕೇಂಬ್ರಿಡ್ಜ್ನಲ್ಲಿದ್ದಾಗ ಆಕೆಯನ್ನು ಅದೇ ರೆಸ್ಟೋರೆಂಟ್‌ಗೆ ಕರೆದೊಯ್ದಿದ್ದರು. ಅಲ್ಲಿ ತಮ್ಮ ತಂದೆ-ತಾಯಿ ಹೇಗೆ ಭೇಟಿಯಾದರು ಮತ್ತು ಅವರ ಪ್ರೇಮಕಥೆ ಹೇಗೆ ಆರಂಭವಾಯಿತು ಎಂಬುದನ್ನು ವಿವರಿಸಲು ಬಯಸಿದ್ದಾಗಿ ರಾಹುಲ್ ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಲಾಂಗಿಂಗ್, ಎ ಜರ್ನಿ ಆಫ್ ಲವ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಈ ನೆನಪು ಮತ್ತಷ್ಟು ಗಮನ ಸೆಳೆದಿದೆ. ಈ ಪುಸ್ತಕದಲ್ಲಿ ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿ ಭೇಟಿಯಾದ ಸಂದರ್ಭ, ಅವರ ಸ್ನೇಹ, ಪ್ರೀತಿ ಮತ್ತು ಮದುವೆಯವರೆಗಿನ ಪಯಣವನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಫೋನ್ ಟ್ಯಾಪಿಂಗ್ ಆರೋಪ: ಪ್ರಧಾನಿ ಮೋದಿ ಹಾಗೆ ಮಾಡುವುದಿಲ್ಲ ಎಂದ ಸ್ಯಾಮ್ ಪಿತ್ರೋಡಾ
ರಾಜೀವ್-ಸೋನಿಯಾ ಮೊದಲ ಭೇಟಿ ನಡೆದಿದ್ದು ಎಲ್ಲಿ? ಸೋನಿಯಾ ಗಾಂಧಿ ಅವರ ಪುಸ್ತಕದ ಪ್ರಕಾರ, 1965ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿರುವ ‘ವಾರ್ಸಿಟಿ ರೆಸ್ಟೋರೆಂಟ್’ನಲ್ಲಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮೊದಲ ಬಾರಿ ಭೇಟಿಯಾಗಿದ್ದರು. ಇದು ಚಿಕ್ಕ ಗ್ರೀಕ್ ರೆಸ್ಟೋರೆಂಟ್ ಆಗಿದ್ದು, ಆ ಸಮಯದಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು.
ಇಟಲಿಯಿಂದ ಬಂದಿದ್ದ ಸೋನಿಯಾ ಗಾಂಧಿ ಅವರಿಗೆ ತಮ್ಮ ದೇಶದ ಆಹಾರದ ರುಚಿಯನ್ನು ನೆನಪಿಸುವಂತಹ ಊಟ ಸಿಗುವ ಸ್ಥಳದ ಹುಡುಕಾಟವಿತ್ತು. ಹೀಗೆ ಅವರು ಈ ರೆಸ್ಟೋರೆಂಟ್‌ಗೆ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಪರಸ್ಪರ ಪರಿಚಯವಿದ್ದ ಸ್ನೇಹಿತರೊಬ್ಬರು ರಾಜೀವ್ ಗಾಂಧಿ ಅವರನ್ನು ಸೋನಿಯಾಗೆ ಪರಿಚಯಿಸಿದರು.
ಮೊದಲ ಭೇಟಿಯಲ್ಲೇ ರಾಜೀವ್ ಅವರ ವ್ಯಕ್ತಿತ್ವ ಸೋನಿಯಾ ಅವರಿಗೆ ಇಷ್ಟವಾಗಿತ್ತು. ಅವರು ರಾಜೀವ್ ಅವರನ್ನು ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಆರಂಭದಲ್ಲಿ ಸ್ನೇಹಿತರಾಗಿದ್ದ ಇಬ್ಬರೂ ಬಳಿಕ ಒಟ್ಟಿಗೆ ಸಮಯ ಕಳೆಯಲು, ಪಾರ್ಟಿಗಳಿಗೆ ಹೋಗಲು ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಆರಂಭಿಸಿದರು.
ಕ್ರಮೇಣ ಸ್ನೇಹ ಪ್ರೀತಿಯಾಗಿ ಬದಲಾಯಿತು. ಹಲವು ವರ್ಷಗಳ ಪ್ರೀತಿಯ ಬಳಿಕ 1968ರ ಫೆಬ್ರವರಿ 25ರಂದು ಇಬ್ಬರೂ ವಿವಾಹವಾದರು. ಆ ಮೂಲಕ ಸೋನಿಯಾ ಗಾಂಧಿ ಭಾರತೀಯ ಗಾಂಧಿ ಕುಟುಂಬದ ಸೊಸೆಯಾದರು.
ರೆಸ್ಟೋರೆಂಟ್‌ನಲ್ಲಿ ನಡೆದಿದ್ದೇನು? ರಾಹುಲ್ ಹೇಳಿದ ತಮಾಷೆಯ ಸಂಗತಿ! ರಾಹುಲ್ ಗಾಂಧಿ ಈ ಭೇಟಿಯ ಮತ್ತೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್‌ಗೆ ಹೋದಾಗ ಅಲ್ಲಿನ ಸಿಬ್ಬಂದಿಯೊಬ್ಬರು ಎಷ್ಟು ಜನ ಎಂದು ಕೇಳಿದ್ದರಂತೆ. ಆಗ ರಾಹುಲ್ ಇಬ್ಬರು ಎಂದು ಹೇಳಿ ಒಳಗೆ ಕುಳಿತಿದ್ದಾರೆ.
ನಂತರ ತಮ್ಮ ತಂದೆ-ತಾಯಿ ಇದೇ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದರು ಎಂದು ಸಿಬ್ಬಂದಿಗೆ ತಿಳಿಸಿದ್ದಾರೆ. ಇದನ್ನು ಕೇಳಿದ ವ್ಯಕ್ತಿ ತಕ್ಷಣವೇ, ‘ಓಹ್, ಅವರಾ! ನನಗೆ ಅವರ ಪರಿಚಯವಿದೆ’ ಎಂದು ಪ್ರತಿಕ್ರಿಯಿಸಿದ್ದರಂತೆ. ಇದರಿಂದ ರಾಹುಲ್ ಅಚ್ಚರಿಗೊಂಡಿದ್ದರು. ಬಳಿಕ ಯಾವ ಆಹಾರ ಚೆನ್ನಾಗಿದೆ ಎಂದು ಕೇಳಿದಾಗ ಸಿಬ್ಬಂದಿ ‘ಚಿಕನ್ ಚಸ್ಸರ್’ ಎಂಬ ಖಾದ್ಯವನ್ನು ಸೂಚಿಸಿದ್ದಾರೆ. ಅದರಂತೆ ರಾಹುಲ್ ಮತ್ತು ಅವರ ಗೆಳತಿ ಅದನ್ನೇ ಆರ್ಡರ್ ಮಾಡಿದ್ದಾರೆ. ಆದರೆ ಆಹಾರದ ರುಚಿ ಮಾತ್ರ ಅವರಿಗೆ ಇಷ್ಟವಾಗಲಿಲ್ಲ.
ಇದನ್ನು ಸಭೆಯಲ್ಲಿ ತಮಾಷೆಯಾಗಿ ಹೇಳಿದ ರಾಹುಲ್, “ಪ್ರೀತಿಯಲ್ಲಿ ಬೀಳಬೇಕೆಂದಿದ್ದರೆ ಯೂನಿವರ್ಸಿಟಿ ರೆಸ್ಟೋರೆಂಟ್‌ಗೆ ಹೋಗಿ. ಆದರೆ ಅಲ್ಲಿನ ಚಿಕನ್ ಮಾತ್ರ ತಿನ್ನಬೇಡಿ. ಪ್ರೀತಿ ಮಾಡಲು ಒಳ್ಳೆಯ ಸ್ಥಳ, ಆದರೆ ಊಟ ಮಾತ್ರ ಚೆನ್ನಾಗಿಲ್ಲ” ಎಂದು ನಗುತ್ತಾ ಹೇಳಿದ್ದಾರೆ. ಈ ಮಾತು ಕೇಳಿ ಎಲ್ಲರೂ ನಗೆಗಡಲಲ್ಲಿ ತೇಲಿದ್ದಾರೆ. ಈ ಘಟನೆಯನ್ನು ಹೇಳುವ ಮೂಲಕ ತಮ್ಮ ಪೋಷಕರ ಪ್ರೇಮಕಥೆಯ ಜೊತೆಗೆ ತಮ್ಮದೇ ಒಂದು ಸಿಹಿ ನೆನಪನ್ನೂ ಹಂಚಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಅವರ ಈ ಪುಸ್ತಕ ಕೇವಲ ಪ್ರೇಮಕಥೆಯಲ್ಲ. ಇಟಲಿಯಲ್ಲಿ ಕಳೆದ ಬಾಲ್ಯ, ರಾಜೀವ್ ಗಾಂಧಿ ಅವರೊಂದಿಗಿನ ಪರಿಚಯ, ಪ್ರೀತಿ ಮತ್ತು ಮದುವೆ, ಭಾರತದ ಸಂಸ್ಕೃತಿಗೆ ಹೊಂದಿಕೊಂಡ ರೀತಿ ಸೇರಿದಂತೆ ಅವರ ಜೀವನದ ಹಲವು ಪ್ರಮುಖ ಘಟನೆಗಳನ್ನು ಒಳಗೊಂಡಿದೆ. ಇದಲ್ಲದೆ, 1984ರಲ್ಲಿ ಅತ್ತೆ ಇಂದಿರಾ ಗಾಂಧಿ ಅವರ ಹತ್ಯೆ, 1991ರಲ್ಲಿ ಪತಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಎದುರಿಸಿದ ನೋವು ಮತ್ತು ಸವಾಲುಗಳ ಬಗ್ಗೆಯೂ ಬರೆದಿದ್ದಾರೆ.
ರಾಜಕೀಯ ಜೀವನಕ್ಕೆ ಪ್ರವೇಶಿಸಿದ ಸಂದರ್ಭ, ಕಾಂಗ್ರೆಸ್ ಅಧ್ಯಕ್ಷೆಯಾಗಿ ನಿರ್ವಹಿಸಿದ ಜವಾಬ್ದಾರಿ ಹಾಗೂ 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಗೆಲುವಿನ ಬಳಿಕ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ ನಿರ್ಧಾರದ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಿದ್ದಾರೆ.
ತಾಯಿಯ ಬಗ್ಗೆ ರಾಹುಲ್ ಹೇಳಿದ್ದೇನು? ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ತಮ್ಮ ತಂದೆ-ತಾಯಿಯ ನಡುವಿನ ಪ್ರೀತಿಯ ಬಗ್ಗೆಯೂ ಭಾವುಕರಾಗಿ ಮಾತನಾಡಿದ್ದಾರೆ. ತಮ್ಮ ತಂದೆ-ತಾಯಿ ಪರಸ್ಪರ ಎಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ಬಾಲ್ಯದ ನೆನಪುಗಳ ಮೂಲಕ ವಿವರಿಸಿದ್ದಾರೆ.
ತಮ್ಮ ಮನೆಯಲ್ಲಿ ಊಟದ ಸಮಯದಲ್ಲಿ ತಾಯಿ ಸೋನಿಯಾ ಗಾಂಧಿ ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಬಾಲ್ಯದಲ್ಲಿ ಎಲ್ಲರ ಮನೆಯಲ್ಲೂ ಹೀಗೆಯೇ ಇರುತ್ತದೆ ಎಂದು ಭಾವಿಸಿದ್ದೆ. ಆದರೆ ಸ್ನೇಹಿತರ ಮನೆಗೆ ಹೋದಾಗ ಅಲ್ಲಿ ಹೀಗಿರಲಿಲ್ಲ ಎಂಬುದು ಗೊತ್ತಾಯಿತು ಎಂದು ರಾಹುಲ್ ಹೇಳಿದ್ದಾರೆ.
ತಂದೆಯ ಅಗಲಿಕೆಯ ಬಳಿಕ ತಾಯಿಯ ಜೀವನವೇ ಬದಲಾಯಿತು. ಆದರೆ ದೇಶದ ಜನರು ಸೋನಿಯಾ ಗಾಂಧಿ ಅವರಿಗೆ ಪ್ರೀತಿ ಮತ್ತು ಬೆಂಬಲ ನೀಡಿದರು. ಜನರ ಪ್ರೀತಿಯಿಂದಲೇ ಅವರು ಮತ್ತೆ ಬದುಕಿನಲ್ಲಿ ಹೊಸ ಅರ್ಥ ಕಂಡುಕೊಂಡರು ಎಂದು ರಾಹುಲ್ ಸ್ಮರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
