ಉದಯಪುರ್: ಜನತೆ ಹಾಗೂ ಕಾಂಗ್ರೆಸ್ ನಡುವಿನ ಕೊಂಡಿ ಕಳಚಿದೆ, ಹೀಗಾಗಿ ಮುಂಬರುವ ಅಕ್ಟೋಬರ್ನಿಂದ ದೇಶಾದ್ಯಂತ ಯಾತ್ರೆಯನ್ನು ಆರಂಭಿಸುವುದಾಗಿ ಸಂಸದ ರಾಹುಲ್ ಗಾಂಧಿ( Rahul Gandhi) ಘೋಷಿಸಿದ್ದಾರೆ.
ಉದಯಪುರದಲ್ಲಿ ನಡೆದ ಚಿಂತನ-ಮಂಥನ ಅಧಿವೇಶನದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ‘‘ಪಕ್ಷವು ವಾಸ್ತವವನ್ನು ಅರಿತು ಜನತೆ ಹಾಗೂ ಕಾಂಗ್ರೆಸ್ ನಡುವೆ ಉತ್ತಮ ಸಂಬಂಧವನ್ನು ಮರುಸೃಷ್ಟಿಸುವ ಕುರಿತು ಕಠಿಣ ಶ್ರಮವಹಿಸಿ ಕೆಲಸ ಮಾಡಬೇಕಿದೆ’’ ಎಂದು ಹೇಳಿದ್ದಾರೆ.
‘‘ಜನತೆ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಸಂಬಂಧ ಹಾಳಾಗಿದೆ, ಅದನ್ನು ಮೊದಲಿನಂತೆ ಮಾಡಲು ಕೇವಲ ಒಂದೆರಡು ದಿನ ಯಾತ್ರೆಯನ್ನು ನಡೆಸಿದರೆ ಸಾಧ್ಯವಿಲ್ಲ ಇದು ವರ್ಷಗಟ್ಟಲೆ ನಡೆಸಬೇಕಿದೆ’’ ಎಂದರು.
400ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಆದಾಗ್ಯೂ,ಈ ಸಾಮೂಹಿಕ ಆಂದೋಲನ ಕಾರ್ಯಕ್ರಮದ ಅಂತಿಮ ಕರೆಯನ್ನು ಕಾರ್ಯಕಾರಿ ಸಮಿತಿ ತೆಗೆದುಕೊಳ್ಳುತ್ತದೆ.
ಮೂರು ದಿನಗಳಿಂದ ನಡೆಯುತ್ತಿರುವ ಕಾಂಗ್ರೆಸ್ ನವ ಸಂಕಲ್ಪ ಶಿಬಿರಕ್ಕೆ ಇಂದು ಕೊನೆಯ ದಿನ. ಆರು ವಿವಿಧ ಸಮಿತಿಗಳು ಮೂರು ದಿನಗಳಿಂದ ಚರ್ಚಿಸಿ ನೀಡಿದ ಸಲಹೆಗಳ ಬಗ್ಗೆ ಇಂದು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ದೇಶದ ಪ್ರಸ್ತುತ ರಾಜಕೀಯ ಸ್ಥಿತಿ, ಆರ್ಥಿಕ ಸ್ಥಿತಿಗತಿ, ಸಾಮಾಜಿಕವಾಗಿ ನಡೆಯುತ್ತಿರುವ ವಿದ್ಯಾಮಾನಗಳು, ಮಹಿಳೆಯರು, ಯುವಕರು, ರೈತರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು, ಹಿಂದುಳಿದವರು ಮತ್ತು ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು.
ಕಾಶ್ಮೀರದಿಂದ ಕನ್ಯಾಕುಮಾರಿಗೆ ಪ್ರಯಾಣ ಮಾಡಬೇಕು. ಸಾಧ್ಯವಾದರೆ ಪಾದಯಾತ್ರೆ ಮೂಲಕವೇ ಜನರನ್ನು ತಲುಪಬೇಕು. ಅಥವಾ ಬಸ್ ಮತ್ತು ರೈಲ್ವೆ ಮೂಲಕ ಪ್ರಯಾಣ ಮಾಡಿ ಅಲ್ಲಲ್ಲಿ ಜನರೊಂದಿಗೆ ಸಂವಾದ ಮಾಡಬೇಕು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಹೆಚ್ಚಿನ ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ