ದೆಹಲಿ: ದೇಶದ ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿ, ಇತಿಹಾಸ ಸೃಷ್ಟಿಸಿರುವ ಕಮಲ ಪಾಳಯಕ್ಕೆ ಸದ್ಯ ಸಂಕಷ್ಟ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಮಾಡಿದ ಹರಸಾಹಸ ವ್ಯರ್ಥವಾಗಿದೆ. ಮತ್ತೊಂದ್ಕಡೆ ವಿರೋಧಿ ಪಡೆ ಒಂದಾಗಿದ್ದರೂ, ಒಳಗೊಳಗೆ ಅಸಮಾಧಾನ ಭುಗಿಲೆದ್ದಿದೆ.
‘ಮಹಾ’ ಮೈತ್ರಿ ಬಗ್ಗೆ ರಾಹುಲ್ ಸೈಲೆಂಟ್ ಆಗಿದ್ದೇಕೆ..?
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುತ್ತಿದ್ದಂತೆ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಗುಡ್ಬೈ ಹೇಳಿದ್ದರು. ಎಐಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಿ ಸೋಲಿನ ಹೊಣೆ ಹೊತ್ತಿದ್ದರು. ಆದ್ರಿದು ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಬೇಸರ ಮೂಡಿಸಿತ್ತು. ರಾಹುಲ್ ಪಲಾಯನ ಮಾಡಿದ್ದಾರೆ ಅನ್ನೋ ಬಹಿರಂಗ ಟೀಕೆ ಕೇಳಿಬಂದಿತ್ತು. ಈಗ ರಾಹುಲ್ರ ಮತ್ತೊಂದು ವರ್ತನೆ ಹಿರಿಯ ಕಾಂಗ್ರೆಸ್ಸಿಗರ ಬೇಸರಕ್ಕೆ ಕಾರಣವಾಗಿದೆ.
ಎಐಸಿಸಿ ಹುದ್ದೆಗೆ ರಾಹುಲ್ ರಾಜೀನಾಮೆ ನೀಡುತ್ತಿದ್ದಂತೆ ಮತ್ತೊಮ್ಮೆ ಸೋನಿಯಾ ಬಂದು ಕೂತಿದ್ದರು. ರಾಜಕೀಯ ಅನುಭವದ ಮೂಲಕ ಹೊಸ ತಂತ್ರಗಳನ್ನ ಹೂಡಿ, ಹರಿಯಾಣ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗೆ ನವಚೈತನ್ಯ ನೀಡಿದ್ದಾರೆ. ಇದರ ಫಲವಾಗಿ ಮಹಾರಾಷ್ಟ್ರದಲ್ಲಿ ಬದ್ಧವೈರಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಇದು ಅಮ್ಮನಿಗೆ ಇಷ್ಟವಿದ್ದರೂ, ಸೋನಿಯಾ ಪುತ್ರ ರಾಹುಲ್ಗೆ ಬಿಲ್ಕುಲ್ ಹಿಡಿಸಿಲ್ಲ ಎನ್ನಲಾಗ್ತಿದೆ. ರಾಹುಲ್ ಸೈಲೆಂಟಾಗಿರೋದ್ರಿಂದ ಅನುಮಾನಗಳು ಮತ್ತಷ್ಟು ದಟ್ಟವಾಗಿವೆ.
ಹಿರಿಯ ನಾಯಕರ ಜೊತೆ ತಿಕ್ಕಾಟಕ್ಕೆ ಕಾರಣವಾಗುತ್ತಾ ರಾಹುಲ್ ನಡೆ..?
ಈಗಾಗಲೇ ರಾಹುಲ್ ಪಾಳಯದಲ್ಲಿ ಗುರುತಿಸಿಕೊಂಡಿದ್ದ ನಾಯಕರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಅನ್ನೋ ಆರೋಪ ಕೇಳಿಬರ್ತಿದೆ. ಇದ್ರ ನಡುವೆ ಹಿರಿಯರು ಕೈಗೊಂಡ ನಿರ್ಧಾರಕ್ಕೆ ರಾಹುಲ್ ಒಪ್ಪಿಗೆ ಸೂಚಿಸದಿರುವುದು ಮತ್ತೆ ಕಾಂಗ್ರೆಸ್ನಲ್ಲಿ ಆಂತರಿಕ ಕಲಹಕ್ಕೆ ದಾರಿ ಮಾಡಿಕೊಡಲಿದೆಯಾ ಅನ್ನೋ ಪ್ರಶ್ನೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಉದ್ಧವ್ ಠಾಕ್ರೆ ಪ್ರಮಾಣವಚನಕ್ಕೂ ರಾಹುಲ್ ಬರಲ್ಲ ಅಂತಾ ಹೇಳಲಾಗುತ್ತಿದೆ.