ಎನ್​ಟಿಪಿಸಿ, ಲೆವೆಲ್​ 1 ಪರೀಕ್ಷೆಗಳನ್ನು ತಡೆ ಹಿಡಿದ ರೈಲ್ವೆ ನೇಮಕಾತಿ ಮಂಡಳಿ; ಪ್ರತಿಭಟನಾಕಾರರಿಗೆ ಶಾಕ್​ ನೀಡಿದ ರೈಲ್ವೆ ಇಲಾಖೆ

| Updated By: Lakshmi Hegde

Updated on: Jan 26, 2022 | 3:01 PM

ಹಿಂಸಾತ್ಮಕ ಪ್ರತಿಭಟನೆ ನಡೆಸಿದವರಿಗೆ ಕೇಂದ್ರ ರೈಲ್ವೆ ಇಲಾಖೆ ಖಡಕ್​ ಎಚ್ಚರಿಕೆ ನೀಡಿದೆ. ಹೀಗೆ ಕಾನೂನು ಬಾಹಿರ ಚಟುವಟಿಕೆಗಳು, ವಿಧ್ವಂಸಕ ಕೃತ್ಯ ನಡೆಸಿದರೆ, ಅಂಥವರು ಜೀವನಪರ್ಯಂತ ರೈಲ್ವೆ ಕ್ಷೇತ್ರದಲ್ಲಿ ಯಾವುದೇ ಉದ್ಯೋಗವನ್ನೂ ಪಡೆಯಲಾಗದಂತೆ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದೆ.

ಎನ್​ಟಿಪಿಸಿ, ಲೆವೆಲ್​ 1 ಪರೀಕ್ಷೆಗಳನ್ನು ತಡೆ ಹಿಡಿದ ರೈಲ್ವೆ ನೇಮಕಾತಿ ಮಂಡಳಿ; ಪ್ರತಿಭಟನಾಕಾರರಿಗೆ ಶಾಕ್​ ನೀಡಿದ ರೈಲ್ವೆ ಇಲಾಖೆ
ಪ್ರತಿಭಟನೆಯ ಚಿತ್ರ
Follow us on

ರೈಲ್ವೆ ನೇಮಕಾತಿ ಮಂಡಳಿ (Railways Recruitment Board)  ನಾನ್​ ಟೆಕ್ನಿಕಲ್​ ಪಾಪ್ಯುಲರ್​ ಕೆಟೆಗರಿ (NTPC)  ಮತ್ತು ಲೆವೆಲ್​ 1ರ ಪರೀಕ್ಷೆಗಳನ್ನು ಸದ್ಯ ನಡೆಸದೆ ಇರಲು ನಿರ್ಧರಿಸಿದೆ. ಅಂದರೆ ಸ್ವಲ್ಪ ಕಾಲ ಅಮಾನತಿನಲ್ಲಿ ಇಡಲು ಅಥವಾ ತಡೆ ಹಿಡಿಯಲು ನಿರ್ಧರಿಸಿದೆ.  ಉದ್ಯೋಗಾಕಾಂಕ್ಷಿಗಳ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾಗಿ ರೈಲ್ವೆ ನೇಮಕಾತಿ ಮಂಡಳಿ ವಕ್ತಾರರು ತಿಳಿಸಿದ್ದಾರೆ. ಅಲ್ಲದೆ, ಪ್ರತಿಭಟನಾ ನಿರತರ ಕುಂದು-ಕೊರತೆ, ಸಮಸ್ಯೆ ಆಲಿಸಲು ರೈಲ್ವೆ ಮಂಡಳಿಯಿಂದ ಸಮಿತಿ ರಚಿಸಲಾಗಿದೆ. ರೈಲ್ವೆ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಯನ್ನು ಶಾಂತವಾಗಿ ಮಾಡದೆ, ರೈಲ್ವೆ ಹಳಿಗಳ ಮೇಲೆ ಧರಣಿ ಕುಳಿತು, ರೈಲು ಸಂಚಾರಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ಇಂದು ಮುಂಜಾನೆ ಬಿಹಾರದ ಆರಾಹ್​​ನಲ್ಲಿ ಪ್ರಯಾಣಿಕರ ರೈಲೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಪೊಲೀಸರ ಮೇಲೆ ಕೂಡ ಕಲ್ಲ ತೂರಾಟ ನಡೆಸಿದ್ದಾರೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ರೈಲ್ವೆ ನೇಮಕಾತಿ ಮಂಡಳಿಯು ಎನ್​ಟಿಪಿಸಿಯ ಮೊದಲ ಹಂತದ ಕಂಪ್ಯೂಟರ್​ ಬೇಸ್ಡ್​ ಟೆಸ್ಟ್​ (ಗಣಕಯಂತ್ರ ಆಧಾರಿತ ಪರೀಕ್ಷೆ-CBT-1)ಪರೀಕ್ಷೆಯ ಫಲಿತಾಂಶವನ್ನು ಜನವರಿ 15ರಂದು ನಡೆಸಿತ್ತು. ಈ ಫಲಿತಾಂಶದ ಆಧಾರದ ಮೇಲೆ ಸಿಬಿಟಿ-2ನೇ ಹಂತದ ಪರೀಕ್ಷೆಗೆ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್ ಮಾಡಲಾಗುತ್ತದೆ. ಆದರೆ ಸಿಬಿಟಿ 1ರ ಪರೀಕ್ಷೆಯ ಫಲಿತಾಂಶ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ತುಂಬ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ರೈಲ್ವೆ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಪ್ರತಿಭಟನೆ ಕಾರಣದಿಂದ ಮಂಗಳವಾರ ಬಿಹಾರದ ಹಲವು ಭಾಗಗಳು ಸೇರಿ ಅನೇಕ ಕಡೆ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರತಿಭಟನಾ ನಿರತರು ರೈಲ್ವೆ ಹಳಿಗಳ ಮೇಲೆಲ್ಲ ಕುಣಿದಾಡಿದ್ದಾರೆ.

ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ ವಿಡಿಯೋ, ಫೋಟೋಗಳೂ ಕೂಡ ವೈರಲ್ ಆಗುತ್ತಿವೆ. ಈ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಲಾಠಿ ಚಾರ್ಜ್​ ಖಂಡಿಸಿದ್ದಾರೆ. ಉದ್ಯೋಗಾಕಾಂಕ್ಷಿಗಳು ಉದ್ಯೋಗಕ್ಕಾಗಿ ಬೇಡಿಕೆ ಇಟ್ಟಿದ್ದಕ್ಕಾಗಿ ಅವರ ಮೇಲೆ ಡಬಲ್ ಇಂಜಿನ್ ಸರ್ಕಾರ ಲಾಠಿಚಾರ್ಜ್ ನಡೆಸಿತು ಎಂದು ಟ್ವೀಟ್ ಮಾಡಿದ್ದರು.  ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದ ಪಾಟ್ನಾ ಜಿಲ್ಲಾಡಳಿತ, ಪ್ರತಿಭಟನೆಯನ್ನು ನಿಲ್ಲಿಸುವ ಸಲುವಾಗಿ ಸಣ್ಣ ಪ್ರಮಾಣದಲ್ಲಿ ಪೊಲೀಸ್​ ಫೋರ್ಸ್​ ಬಳಸಲಾಯಿತು ಎಂದು ಸ್ಪಷ್ಟನೆ ನೀಡಿದೆ.

ರೈಲ್ವೆ ಇಲಾಖೆಯಿಂದ ಖಡಕ್​ ಎಚ್ಚರಿಕೆ
ಹೀಗೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದವರಿಗೆ ಕೇಂದ್ರ ರೈಲ್ವೆ ಇಲಾಖೆ ಖಡಕ್​ ಎಚ್ಚರಿಕೆ ನೀಡಿದೆ. ಹೀಗೆ ಕಾನೂನು ಬಾಹಿರ ಚಟುವಟಿಕೆಗಳು, ವಿಧ್ವಂಸಕ ಕೃತ್ಯ ನಡೆಸಿದರೆ, ಅಂಥವರು ಜೀವನಪರ್ಯಂತ ರೈಲ್ವೆ ಕ್ಷೇತ್ರದಲ್ಲಿ ಯಾವುದೇ ಉದ್ಯೋಗವನ್ನೂ ಪಡೆಯಲಾಗದಂತೆ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಹೇಳಿದೆ. ಪ್ರತಿಭಟನೆಗೆ ಸಂಬಂಧಪಟ್ಟ ವಿಡಿಯೋಗಳನ್ನು ಕೇಂದ್ರ ರೈಲ್ವೆ ಸಚಿವಾಲಯ ಪರೀಕ್ಷಿಸುತ್ತಿದೆ.  ಹಾಗೇ, ಒಂದು ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆ, ರೈಲ್ವೆ ಉದ್ಯೋಗ ಆಕಾಂಕ್ಷಿಗಳು ಹಲವು ಪ್ರತಿಭಟನೆ ನೆಪದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದು ನಮ್ಮ ಗಮನಕ್ಕೆ ಬಂದಿದೆ. ರೈಲ್ವೆ ಹಳಿಗಳಲ್ಲಿ ಪ್ರತಿಭಟನೆ ನಡೆಸಿ, ರೈಲುಗಳನ್ನು ತಡೆಗಟ್ಟಿದ್ದಾರೆ. ಇದು ಅಶಿಸ್ತಿನ ಪರಮಾವಧಿಯಾಗಿದ್ದು, ಹೀಗೆಲ್ಲ ಪ್ರತಿಭಟನೆ ನಡೆಸುವವರು ರೈಲ್ವೆ ಅಥವಾ ಇನ್ಯಾವುದೇ ಸರ್ಕಾರಿ ಉದ್ಯೋಗಕ್ಕೂ ಅರ್ಹರಾದವರು ಅಲ್ಲ. ನಾವು ಪ್ರತಿಭಟನೆಯಲ್ಲಿ ಧ್ವಂಸ, ಅಶಿಸ್ತು ತೋರಿಸಿದವರನ್ನು ವಿಡಿಯೋ ಮೂಲಕ ಪತ್ತೆ ಮಾಡುತ್ತೇವೆ. ಅಂಥವರ ವಿರುದ್ಧ ಪೊಲೀಸ್ ಕ್ರಮ ಖಂಡಿತ ಅಷ್ಟೇ ಅಲ್ಲ, ಜೀವನಪರ್ಯಂತ ರೈಲ್ವೆ ಉದ್ಯೋಗದಿಂದ ಡಿಬಾರ್ ಆಗಲಿದ್ದಾರೆ ಎಂದು ಹೇಳಿದೆ. ಈ ಮೂಲಕ ಪ್ರತಿಭಟನೆಯಲ್ಲಿ ತೊಡಗಿದ್ದವರಿಗೆ ರೈಲ್ವೆ ಸಚಿವಾಲಯ ಶಾಕ್​ ಕೊಟ್ಟಿದೆ.

ಇದನ್ನೂ ಓದಿ: ಶಕ್ತಿಧಾಮದಲ್ಲಿ ಶಿವರಾಜ್​ಕುಮಾರ್​ ಧ್ವಜಾರೋಹಣ; ಮಕ್ಕಳ ಜತೆ ಗಣರಾಜ್ಯೋತ್ಸವ ಆಚರಣೆ

Published On - 12:58 pm, Wed, 26 January 22