Rajasthan Crisis: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು; ಅಶೋಕ್ ಗೆಹ್ಲೋಟ್ ಬಣದ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟ 3 ಬೇಡಿಕೆಗಳೇನು?

| Updated By: ಸುಷ್ಮಾ ಚಕ್ರೆ

Updated on: Sep 26, 2022 | 1:35 PM

ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾದರೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯನ್ನಾಗಿ ಸಚಿನ್ ಪೈಲಟ್ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿತ್ತು. ಇದಕ್ಕೆ ಅಶೋಕ್ ಗೆಹ್ಲೋಟ್ ಬಣದವರು ಅಸಮಾಧಾನಗೊಂಡು, ರಾಜೀನಾಮೆ ಸಲ್ಲಿಸಿದ್ದಾರೆ.

Rajasthan Crisis: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು; ಅಶೋಕ್ ಗೆಹ್ಲೋಟ್ ಬಣದ ಶಾಸಕರು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟ 3 ಬೇಡಿಕೆಗಳೇನು?
ಅಶೋಕ್ ಗೆಹ್ಲೋಟ್- ಸೋನಿಯಾ ಗಾಂಧಿ
Follow us on

ನವದೆಹಲಿ: ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಸಿಎಂ ಅಶೋಕ್ ಗೆಹ್ಲೋಟ್ (Ashok Gehlot) ಬೆಂಬಲಿಗರಾದ 90 ಶಾಸಕರು ನಿನ್ನೆ ರಾತ್ರಿ ಸ್ಪೀಕರ್​ಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಆ 90 ಶಾಸಕರು ಯಾರೆಂಬ ಬಗ್ಗೆ ಇನ್ನೂ ಪಟ್ಟಿ ಹೊರಬಿದ್ದಿಲ್ಲ. ಕಾಂಗ್ರೆಸ್ ಅಧ್ಯಕ್ಷ (Congress President Election) ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿರುವ ಅಶೋಕ್ ಗೆಹ್ಲೋಟ್ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಲ್ಲೂ ಮುಂದುವರೆಯಲು ನಿರ್ಧರಿಸಿದ್ದರು. ಆದರೆ, ಒಬ್ಬರಿಗೆ ಒಂದೇ ಹುದ್ದೆ ಎಂದು ಘೋಷಿಸುವ ಮೂಲಕ ರಾಹುಲ್ ಗಾಂಧಿ (Rahul Gandhi) ಅಶೋಕ್ ಗೆಹ್ಲೋಟ್​ಗೆ ಪರೋಕ್ಷ ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದರೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯನ್ನಾಗಿ ಸಚಿನ್ ಪೈಲಟ್ (Sacin Pilot) ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹಾಕಿತ್ತು. ಇದಕ್ಕೆ ಅಶೋಕ್ ಗೆಹ್ಲೋಟ್ ಬಣದವರು ಅಸಮಾಧಾನಗೊಂಡು, ರಾಜೀನಾಮೆ ಸಲ್ಲಿಸಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಹೊಸ ಅಧ್ಯಕ್ಷರಾಗಿ ಅಶೋಕ್ ಗೆಹ್ಲೋಟ್ ಆಯ್ಕೆಯಾದರೆ ರಾಜಸ್ಥಾನ ಸರ್ಕಾರದ ನಾಯಕತ್ವದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಕರೆಯಲಾಗಿತ್ತು. ಆದರೆ, ಆ ಸಭೆಗೂ ಮೊದಲೇ 90 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ, ಸಭೆ ನಡೆದಿಲ್ಲ. ಸಿಎಲ್​ಪಿ ಸಭೆಗೂ ಮುನ್ನ ಸಚಿವ ಶಾಂತಿ ಧಾರಿವಾಲ್ ಅವರ ನಿವಾಸದಲ್ಲಿ ಸುದೀರ್ಘ ಸಭೆಯ ನಂತರ 90ಕ್ಕೂ ಹೆಚ್ಚು ಶಾಸಕರು ಸ್ಪೀಕರ್ ಸಿಪಿ ಜೋಶಿ ಅವರ ಮನೆಗೆ ಭೇಟಿ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರು ಸಿಎಲ್‌ಪಿ ಸಭೆಗೆ ಶಾಸಕರು ಆಗಮಿಸುತ್ತಾರೆ ಎಂದು ಕಾಯುತ್ತಿದ್ದರು. ಆದರೆ, ಸಭೆ ನಡೆಯದ ಕಾರಣ ಅವರು ದೆಹಲಿಗೆ ಹಿಂತಿರುಗಿದ್ದಾರೆ.

ಇದನ್ನೂ ಓದಿ: Rajasthan Crisis: ನಾನು ದೆಹಲಿಗೆ ಹೋಗಿ ಯಾರನ್ನೂ ಭೇಟಿಯಾಗುವುದಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ; ಸಚಿನ್ ಪೈಲಟ್ ಸ್ಪಷ್ಟನೆ

ಕಾಂಗ್ರೆಸ್ ಮುಂದೆ ಅಶೋಕ್ ಗೆಹ್ಲೋಟ್ ಬಣದ ಶಾಸಕರು 3 ಬೇಡಿಕೆಗಳು:
1. ಅಶೋಕ್ ಗೆಹ್ಲೋಟ್ ನಿಷ್ಠಾವಂತರಾಗಿದ್ದು, ಮುಂದಿನ ರಾಜಸ್ಥಾನ ಮುಖ್ಯಮಂತ್ರಿಯ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿಯುವವರೆಗೆ ತೆಗೆದುಕೊಳ್ಳಬಾರದು. ಮುಂದಿನ ಚುನಾವಣೆಯ ನಂತರವೇ ಆ ಬಗ್ಗೆ ನಿರ್ಧರಿಸಬೇಕು. ಅಕ್ಟೋಬರ್ 19ರೊಳಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಗಿಯಲಿದೆ.

2. ಪ್ರತ್ಯೇಕವಾಗಿ ಬಂಡಾಯ ಶಾಸಕರನ್ನು ಭೇಟಿಯಾಗಿ ಅವರ ಮನವೊಲಿಸಲು ಪ್ರಯತ್ನಿಸಬೇಕೆಂದು ಸೋನಿಯಾ ಗಾಂಧಿ ಅಜಯ್ ಮಾಕನ್, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಿದ್ದರು. ಹೀಗಾಗಿ, ಕಾಂಗ್ರೆಸ್ ವೀಕ್ಷಕರು ಅಶೋಕ್ ಗೆಹ್ಲೋಟ್ ಬಣದವರನ್ನು ಒಬ್ಬೊಬ್ಬರನ್ನಾಗಿ ಪ್ರತ್ಯೇಕವಾಗಿ ಭೇಟಿಯಾಗಲು ಮುಂದಾಗಿದ್ದರು. ಆದರೆ, ಅವರು ಒಬ್ಬೊಬ್ಬರಾಗಿ ಭೇಟಿಯಾಗಲು ಸಾಧ್ಯವಿಲ್ಲ, ಎಲ್ಲರೂ ಒಟ್ಟಿಗೇ ಭೇಟಿಯಾಗಲು ಬಯಸುವುದಾಗಿ ಕಾಂಗ್ರೆಸ್ ಹೈಕಮಾಂಡ್​ಗೆ ಹೇಳಿದ್ದಾರೆ.

3. ರಾಜಸ್ಥಾನದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ಅಶೋಕ್ ಗೆಹ್ಲೋಟ್ ಅವರ ಅಭಿಪ್ರಾಯವನ್ನು ಪರಿಗಣಿಸಬೇಕು. 2020ರಲ್ಲಿ ಸಚಿನ್ ಪೈಲಟ್ ಬೆಂಬಲಿಗರ ಬಂಡಾಯದ ಸಂದರ್ಭದಲ್ಲಿ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರ ಬೆಂಬಲಕ್ಕೆ ನಿಂತವರೇ ಹೊಸ ಸಿಎಂ ಆಗಬೇಕು. ಅಶೋಕ್ ಗೆಹ್ಲೋಟ್ ಬಣದವರೇ ಹೊಸ ಮುಖ್ಯಮಂತ್ರಿಯಾಗಬೇಕೇ ವಿನಃ ಸಿಎಂ ಸ್ಥಾನವನ್ನು ಸಚಿನ್ ಪೈಲಟ್​ಗಾಗಲಿ ಅಥವಾ ಅವರ ಬಣದವರಿಗಾಗಲಿ ನೀಡಬಾರದು ಎಂದು ಶಾಸಕರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: Rajasthan Crisis: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು; ಅಶೋಕ್ ಗೆಹ್ಲೋಟ್ ಬಣದ 90 ಕಾಂಗ್ರೆಸ್‌ ಶಾಸಕರು ರಾಜೀನಾಮೆ

2018ರ ಡಿಸೆಂಬರ್​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬುದು ಗಮನಾರ್ಹ. ನಂತರ ಜುಲೈ 2020ರಲ್ಲಿ ಸಚಿನ್ ಪೈಲಟ್ ಜೊತೆಗೆ ಕಾಂಗ್ರೆಸ್ ಪಕ್ಷದ 18 ಶಾಸಕರು ಅಶೋಕ್ ಗೆಹ್ಲೋಟ್ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು.

ಕೇರಳದಲ್ಲಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಸ್ಥಾನದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಪಕ್ಷದ ನಾಯಕ ಕೆ.ಸಿ. ವೇಣುಗೋಪಾಲ್ ಅವರನ್ನು ಕೇರಳದಿಂದ ದೆಹಲಿಗೆ ಕಳುಹಿಸಿದ್ದಾರೆ. ಇಂದು ಸಂಜೆ ವೇಳೆಗೆ ವೇಣುಗೋಪಾಲ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Mon, 26 September 22