ಪಾಲಿ (ರಾಜಸ್ಥಾನ): ಸೂರ್ಯನಗರಿ ಎಕ್ಸ್‌ಪ್ರೆಸ್ (Suryanagari Express Train) ರೈಲಿನ ಎಂಟು ಬೋಗಿಗಳು ಹಳಿತಪ್ಪಿದ ಘಟನೆ ಇಂದು ಮುಂಜಾನೆ (ಜನವರಿ 2) ರಾಜಸ್ಥಾನದ ಪಾಲಿ ಬಳಿ ನಡೆದಿದೆ. ಬಾಂದ್ರಾ ಟರ್ಮಿನಸ್‌ನಿಂದ ಜೋಧ್‌ಪುರಕ್ಕೆ ತೆರಳುತ್ತಿದ್ದ ಈ ರೈಲು ಮುಂಜಾನೆ 3:27ಕ್ಕೆ ಜೋಧ್‌ಪುರ ವಿಭಾಗದ ರಾಜ್‌ಕಿವಾಸ್-ಬೊಮದ್ರಾ ವಿಭಾಗದ ನಡುವೆ ಹಳಿ ತಪ್ಪಿದೆ. ವಾಯುವ್ಯ ರೈಲ್ವೆ ಪ್ರಕಾರ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಜೋಧ್‌ಪುರದಿಂದ ಅಪಘಾತ ಪರಿಹಾರ ರೈಲನ್ನು ಕಳುಹಿಸಲಾಗಿದೆ.
”ಉನ್ನತ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ವಾಯುವ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಮತ್ತು ಇತರ ಉನ್ನತ ಅಧಿಕಾರಿಗಳು ಜೈಪುರದ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾರು-ಟ್ರಕ್ ಡಿಕ್ಕಿಹೊಡೆದು ಅಪಘಾತ: 5 ಮಂದಿ ಸಾವು
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಬಾಂದ್ರಾ ಟರ್ಮಿನಸ್-ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್‌ನ 11 ಬೋಗಿಗಳು ಹಳಿತಪ್ಪಿದವು ಎಂದು CPRO ಹೇಳಿದೆ. ಸ್ಥಳಕ್ಕೆ ಉನ್ನತ ಅಧಿಕಾರಿಗಳು ಆಗಮಿಸಿದ್ದಾರೆ. ಪ್ರಯಾಣಿಕರಿಗೆ ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಏತನ್ಮಧ್ಯೆ, ರಾಜಸ್ಥಾನದಲ್ಲಿ ರೈಲು ಹಳಿತಪ್ಪಿದ ಘಟನೆಯಿಂದಾಗಿ ಹಲವಾರು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಪಘಾತದ ಹಿನ್ನಲೆಯಲ್ಲಿ ರೈಲ್ವೆ ಕೆಲವು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಪ್ರಯಾಣಿಕರ ಬಗ್ಗೆ ವಿಚಾರಿಸಲು ಇಚ್ಛಿಸುವವರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಜೋಧಪುರಕ್ಕೆ – 0291-2654979(1072), 0291- 2654993(1072), 0291- 2624125, 0291- 2431646, ಪಾಲಿ ಮಾರ್ವಾರ್ಗಾಗಿ – 0293- 2250324 ಸಂಪರ್ಕಿಸಬಹುದು. ಪ್ರಯಾಣಿಕರು ಮತ್ತು ಅವರ ಕುಟುಂಬದವರು ಯಾವುದೇ ಮಾಹಿತಿಗಾಗಿ 138 ಮತ್ತು 1072 ಅನ್ನು ಸಂಪರ್ಕಿಸಬಹುದು ಎಂದು ಸಿಪಿಆರ್ಒ ಹೇಳಿದರು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:34 am, Mon, 2 January 23