ಚಂದ್ರಬಾಬು ನಾಯ್ಡು ಸಮಾವೇಶದಲ್ಲಿ ಮತ್ತೊಂದು ಅಹಿತಕರ ಘಟನೆ, ಸೀರೆ ಪಡೆಯಲು ನೂಕು ನುಗ್ಗಲು ಉಂಟಾಗಿ 3 ಮಹಿಳೆಯರು ಸಾವು
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಮತ್ತೊಂದು ಅಹಿತಕರ ಘಟನೆ ನಡೆದಿದೆ. ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಭಾಗವಹಿಸಿದ್ದ ಸಮಾವೇಶದಲ್ಲಿ ನೂಕುನುಗ್ಗಲು ಉಂಟಾಗಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.
ಗುಂಟೂರು(ಆಂಧ್ರ ಪ್ರದೇಶ): ಮೊನ್ನೇ ಅಷ್ಟೇ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಅವರ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಎಂಟು ಮಂದಿ ದುರ್ಮರಣ ಹೊಂದಿದ್ದರು. ಇದರ ಬೆನ್ನಲ್ಲೇ ಇಂದು (ಜನವರಿ 1) ಸಂಕ್ರಾಂತಿ ಹಬ್ಬದ ಅಂಗವಾಗಿ ಚಂದ್ರಬಾಬುನಾಯ್ಡು ಅವರು ಸೀರೆ ಹಂಚುತ್ತಿದ್ದ ಕಾರ್ಯಕ್ರಮದಲ್ಲಿ ಮತ್ತೆ 3 ಮಹಿಳೆಯರು ಸಾವನ್ನಪ್ಪಿದ್ದಾರೆ. ಆಂಧ್ರದ ಗುಂಟೂರಿನ ವಿಕಾಸನಗರದಲ್ಲಿ ಸಂಭವಿಸಿರುವ ದುರಂತ ಸಂಭವಿಸಿದೆ.
ಇದನ್ನು ಓದಿ: Chandrababu Naidu: ಮಾಜಿ ಸಿಎಂ ಚಂದ್ರಬಾಬು ನಾಯ್ಡು ರ್‍ಯಾಲಿ ವೇಳೆ ಕಾಲ್ತುಳಿತ: 8 ಜನರು ಸಾವು
ಮಾಜಿ ಸಿಎಂ, ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬುನಾಯ್ಡು ಅವರು ಇಂದು ಆಂಧ್ರದ ಗುಂಟೂರಿನ ವಿಕಾಸನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಅಲ್ಲದೇ ಇದೇ ವೇಳೆ ಸಂಕ್ರಾಂತಿ ಹಬ್ಬದ ಅಂಗವಾಗಿ ಸೀರೆ ಹಂಚುತ್ತಿದ್ದ ವೇಳೆ ನೂಕುನುಗ್ಗಲು ಉಂಟಾಗಿ 3 ಮಹಿಳೆಯರು ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಓರ್ವ ಮಹಿಳೆ ಸಾವನ್ನಪ್ಪಿದ್ದರೆ, ಆಸ್ಪತ್ರೆಯಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ.
ಗುಂಟೂರು ವಿಕಾಸನಗರದಲ್ಲಿ ಟಿಡಿಪಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆದಿದೆ. ಈ ಸಭೆಯಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಎನ್ ಟಿಆರ್ ಅವರ ಜನತಾ ವಸ್ತ್ರಗಳು ಹಾಗೂ ಚಂದ್ರಣ್ಣ ಸಂಕ್ರಾಂತಿ ಉಡುಗೊರೆ ವಿತರಣೆಯಲ್ಲಿ ಅವ್ಯವಸ್ಥೆ ಉಂಟಾಯಿತು. ಚಂದ್ರಬಾಬು ಭಾಷಣದ ನಂತರ ಪಕ್ಷದ ಮುಖಂಡರು ಚಂದ್ರಣ್ಣ ಅವರಿಂದ ಉಡುಗೊರೆ ಕಳುಹಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಂಡರು. ಇದೇ ವೇಳೆ ಮಹಿಳೆಯರು ಉಡುಗೊರೆ ತೆಗೆದುಕೊಳ್ಳಲು ಮುಂದಾದಾಗ ಕಾಲ್ತುಳಿತ ಉಂಟಾಗಿದೆ.
ಕಾರ್ಯಕ್ರಮದ ಅವ್ಯವಸ್ಥೆಯೇ ಅವ್ಯವಸ್ಥೆಗೆ ಈ ಘಟನೆಗೆ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.
ಡಿಸೆಂಬರ್ 28ರಂದು ಆಂಧ್ರದಲ್ಲಿ ಟಿಡಿಪಿ ರ್‍ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 8 ಜನರು ಸಾವನ್ನಪ್ಪಿರುವಂತಹ ಘಟನೆ ನೆಲ್ಲೂರು ಕ್ಷೇತ್ರದ ವ್ಯಾಪ್ತಿಯ ಕಂದುಕೂರಿನಲ್ಲಿ ನಡೆದಿತ್ತು. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟಿಡಿಪಿ ಬಹಿರಂಗ ಸಭೆ ಆಯೋಜಿಸಿದ್ದರು. ಈ ವೇಳೆ ವೇದಿಕೆ ಬಳಿ ನೂಕುನುಗ್ಗಲು ಉಂಟಾಗಿದ್ದು, 8 ಜನ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿದ್ದವು. ಈ ದುರಂತ ಬೆನ್ನಲ್ಲೇ ಇದೀಗ ಮತ್ತೊಂದು ಸಮಾವೇಶದಲ್ಲಿ ಮೂವರು ಮಹಿಳೆ ಮೃತಪಟ್ಟಿದ್ದು, ಕಳೆದ 1 ವಾರದಲ್ಲೇ ನಾಯ್ಡು ಕಾರ್ಯಕ್ರಮದಲ್ಲಿ 2ನೇ ಸಲ ಕಾಲ್ತುಳಿತ ಉಂಟಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:00 pm, Sun, 1 January 23