ರಕ್ಷಣಾ ಸಚಿವ ರಾಜನಾಥ್ ಸಿಂಗ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಪ್ರಭಾವಿ ರಾಜಕಾರಿಣಿ, ಜನಾನುರಾಗಿ ನಾಯಕ ಎಂದು ಹೆಸರುವಾಸಿಯಾದವರು. ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದ ರಾಜನಾಥ್ ಸಿಂಗ್, ಮಾಧ್ಯಮಗಳಿಂದ ಮೊದಲಿನಿಂದಲೂ ಮಾಧ್ಯಮಗಳಿಂದ ತುಸು ಅಂತರ ಕಾಯ್ದುಕೊಂಡವರು. ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರೂ ಪ್ರಚಾರಪ್ರಿಯರಲ್ಲ ಎನ್ನುವುದು ವಿಶೇಷ. ರಾಜನಾಥ್ ಸಿಂಗ್ ತೆಗೆದುಕೊಂಡ ಕೆಲವು ನಿರ್ಣಯಗಳು, ಸಂಕಷ್ಟ ಪರಿಸ್ಥಿತಿಗಳನ್ನು ನಿರ್ವಹಿಸಿದ ರೀತಿನೀತಿಗಳು ಸುದ್ದಿಯಾಗಿದ್ದು ಉಂಟೇ ವಿನಃ ಅವರ ವೈಯಕ್ತಿಕ ಬದುಕಿನ ಏರಿಳಿತಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದು ಕಡಿಮೆ.
ಇಂದು (ಜುಲೈ 10) ರಾಜನಾಥ್ ಸಿಂಗ್ ಹುಟ್ಟುಹಬ್ಬ. ಅವರ ಬದುಕಿನ ಬಗ್ಗೆ ನೀವು ತಿಳಿಯಲು ಇಚ್ಛಿಸುವ 10 ಮುಖ್ಯ ಮಾಹಿತಿ ಇಲ್ಲಿದೆ.
- ರಾಜನಾಥ್ ಸಿಂಗ್ ಅವರು 10ನೇ ಜುಲೈ 1951ರಂದು ಜನಿಸಿದರು. ಉತ್ತರ ಪ್ರದೇಶದ ಚಂಡೌಲಿ ಜಿಲ್ಲೆಯ ಭಭೌರಾ ಹಳ್ಳಿ ಅವರ ಜನ್ಮಸ್ಥಳ.
- ರೈತ ಕುಟುಂಬದಲ್ಲಿ ಜನಿಸಿದ ಅವರಿಗೆ ದೇಶದ ಗ್ರಾಮೀಣ ಪ್ರದೇಶದ ಸ್ಥಿತಿಗತಿ ಮತ್ತು ರೈತರ ಕಷ್ಟಕಾರ್ಪಣ್ಯಗಳ ಬಗ್ಗೆ ಚೆನ್ನಾಗಿ ಗೊತ್ತು.
- ಗ್ರಾಮದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡರು. ಗೋರಖ್ಪುರ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
- ರಾಜನಾಥ್ ಸಿಂಗ್ ಅವರ ಪತ್ನಿಯ ಹೆಸರು ಸಾವಿತ್ರಿ ಸಿಂಗ್. ಜೂನ್ 5, 1971ರಂದು ಇವರ ಮದುವೆಯಾಯಿತು.
- ಶ್ರದ್ಧಾವಂತ ಹಿಂದೂ ಮತ್ತು ಧಾರ್ಮಿಕ ಆಚರಣೆಗಳನ್ನು ಅನುಸರಿಸುವ ವ್ಯಕ್ತಿ ರಾಜನಾಥ ಸಿಂಗ್. ಮೃದು ಮಾತಿನ ಅವರ ವಾಗ್ ವೈಖರಿಯನ್ನು ಪಕ್ಷಭೇದವಿಲ್ಲದೆ ಎಲ್ಲರೂ ಇಷ್ಟಪಡುತ್ತಾರೆ.
- ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು.
- 2005ರಿಂದ 2009 ಮತ್ತು 2013ರಿಂದ 2014ರವೆಗೆ ಬಿಜೆಪಿಯ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿದ್ದರು.
- ತಮ್ಮ 13ನೇ ವಯಸ್ಸಿನಲ್ಲಿ ಆರ್ಎಸ್ಎಸ್ ಶಾಖೆಗೆ ಹೋಗಲು ಆರಂಭಿಸಿದ ರಾಜನಾಥ್ ಸಿಂಗ್ ಇಂದಿಗೂ ತಮ್ಮನ್ನು ತಾವು ಒಬ್ಬ ಸ್ವಯಂಸೇವೇಕ ಎಂದೇ ಪರಿಚಯಿಸಿಕೊಳ್ಳುತ್ತಾರೆ.
- ಹಿಂದುತ್ವ ಸಿದ್ಧಾಂತದ ಕಟ್ಟರ್ ಪ್ರತಿಪಾದಕರಾಗಿರುವ ಸಿಂಗ್, ಅಯೋಧ್ಯೆಯಲ್ಲಿ ಮಸೀದಿ ಕೆಡವಿ ರಾಮಮಂದಿರ ಕಟ್ಟಬೇಕು ಎಂದು ಕರೆ ನೀಡಿದ್ದ ಪ್ರಮುಖರಲ್ಲಿ ಒಬ್ಬರು.
- ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾಲದಲ್ಲಿ ರಾಜನಾಥ್ ಸಿಂಗ್ ರಸ್ತೆ ಸಾರಿಗೆ ಸಚಿವರಾಗಿದ್ದರು. ಈ ಅವಧಿಯಲ್ಲಿ ದೇಶದಲ್ಲಿ ಹೊಸ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ಆರಂಭವಾಗಿದ್ದವು. ಮಾತ್ರವಲ್ಲದೇ ಹಲವು ಹೆದ್ದಾರಿಗಳು ಮೇಲ್ದರ್ಜೆಗೇರಿದವು.