Amarnath Yatra: ಮೇಘಸ್ಫೋಟದ ನಂತರ ಯಾತ್ರೆಯ ಪುನರಾರಂಭಕ್ಕೆ ಕಾಯುತ್ತಿರುವ ಅಮರನಾಥ ಯಾತ್ರಿಕರು
ಹವಾಮಾನ ವೈಪರಿತ್ಯದಿಂದ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದ್ದು, ಬಾಲ್ತಾಸ್ ಮೂಲ ಶಿಬಿರದಲ್ಲಿರುವ ಯಾತ್ರಿಕರು ಅಮರನಾಥ ಯಾತ್ರೆಯು ಮತ್ತೆ ಆರಂಭವಾಗಲು ಕಾಯುತ್ತಿದ್ದಾರೆ.
ಶ್ರೀನಗರ: ಮೇಘಸ್ಫೋಟದ (Cloud Burst) ನಂತರ ಅಮರನಾಥ ಯಾತ್ರೆಯು (Amarnath Yatra) ತಾತ್ಕಾಲಿಕವಾಗಿ ರದ್ದಾಗಿದೆ. ಹವಾಮಾನ ವೈಪರಿತ್ಯದಿಂದ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದ್ದು, ಬಾಲ್ತಾಸ್ ಮೂಲ ಶಿಬಿರದಲ್ಲಿರುವ ಯಾತ್ರಿಕರು ಅಮರನಾಥ ಯಾತ್ರೆಯು ಮತ್ತೆ ಆರಂಭವಾಗಲು ಕಾಯುತ್ತಿದ್ದಾರೆ. ಬಾಲ್ತಾಸ್ ಪ್ರದೇಶದಲ್ಲಿ ಮಳೆಯೂ ಜೋರಾಗಿ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.
ಅಮರನಾಥ ಯಾತ್ರೆಯ ಮಾರ್ಗವೂ ಹಾಳಾಗಿದ್ದು, ರಿಪೇರಿ ಕಾಮಗಾರಿ ಆರಂಭವಾಗಿದೆ. ಮಾರ್ಗವನ್ನು ಸರಿಪಡಿಸಿ ಮತ್ತು ಯಾತ್ರೆ ಆರಂಭವಾಗಲು ತುಸು ಸಮಯ ಬೇಕಾಗಬಹುದು ಎಂದು ತಂತ್ರಜ್ಞರು ಹಾಗೂ ಅಧಿಕಾರಿಗಳು ಹೇಳಿದ್ದಾರೆ. ಪುಣೆಯಿಂದ ಬಂದಿದ್ದ ಕುಂದನ್ ನಾಯಕ್ ಎನ್ನುವವರು ಸಹ ಬಾಲ್ತಾಲ್ನಲ್ಲಿ ಕಾಯುತ್ತಿದ್ದು, ‘ಯಾತ್ರೆ ಮುಗಿಸದೇ ಊರಿಗೆ ಹಿಂದಿರುಗುವುದಿಲ್ಲ’ ಎಂದು ಹಟ ಹಿಡಿದಿದ್ದಾರೆ. ‘ನನ್ನ ನೋಂದಣಿ ಪ್ರಕಾರ ಇಂದು ನನಗೆ ಸ್ವಾಮಿಯ ದರ್ಶನ ಆಗಬೇಕಿತ್ತು. ಆದರೆ ಯಾತ್ರೆಯು ಸ್ಥಗಿತಗೊಂಡಿರುವುದರಿಂದ ಇಲ್ಲಿಯೇ ಕಾಯಬೇಕಾಗಿದೆ. ಯಾತ್ರೆಯು ಪುನರಾರಂಭವಾಗುವವರೆಗೆ ಇಲ್ಲಿಯೇ ಕಾಯುತ್ತೇವೆ’ ಎಂದು ಅವರು ಹೇಳಿದರು.
ಪಂಜಾಬ್ನಿಂದ ಬಂದಿದ್ದ ಆಯುಷ್ ಎನ್ನುವ ಬಾಲಕ ಮಾತನಾಡಿ, ‘ದರ್ಶನವಿಲ್ಲದೆ ಮನೆಗೆ ಹಿಂದಿರುಗುವುದಿಲ್ಲ’ ಎಂದು ಹೇಳಿದ. ‘ಅಮರನಾಥ ಯಾತ್ರೆಯ ಮಾರ್ಗದಲ್ಲಿ ಒಡೆದು ಹೋಗಿರುವ ನೀರಿನ ಪೈಪ್ಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ನನಗೆ ಇಲ್ಲಿನ ಆಡಳಿತದ ಮೇಲೆ ಸಂಪೂರ್ಣ ನಂಬಿಕೆಯಿದೆ. ಇಂದು ಯಾತ್ರೆ ಪುನರಾರಂಭವಾಗದಿದ್ದರೆ, ನಾಳೆಯಾದರೂ ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಾರೆ’ ಎಂದು ಪಂಜಾಬ್ನಿಂದ ಬಂದಿದ್ದ ಡಾ ದೇವರಾಜ್ ಹೇಳಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಪಡೆy (National Disaster Response Force – NDRF) ಮಾಹಿತಿ ಪ್ರಕಾರ ಮೇಘಸ್ಫೋಟದಿಂದಾಗಿ ಕನಿಷ್ಠ 16 ಮಂದಿ ಅಮರನಾಥ ಯಾತ್ರಿಕರು ಮೃತಪಟ್ಟಿದ್ದಾರೆ. ಪರಿಹಾರ ಕಾರ್ಯಾಚರಣೆಗಾಗಿ ವಾಯುಪಡೆಯು ನಾಲ್ಕು Mi-17V5 ಮತ್ತು ನಾಲ್ಕು ಚೀತನ್ ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ.
Baltal, J&K | Amarnath yatra temporarily stopped in view of cloudburst incident, pilgrims wait for it to recommence pic.twitter.com/gaJCqv5Iaw
— ANI (@ANI) July 10, 2022
ಚೀತಲ್ ಹೆಲಿಕಾಪ್ಟರ್ಗಳು ಈವರೆಗೆ 45 ಬಾರಿ ಹಾರಾಟ ನಡೆಸಿದ್ದು, ಎನ್ಡಿಆರ್ಎಫ್ ಮತ್ತು ಸೇನಾ ಸಿಬ್ಬಂದಿಯನ್ನು ಕೊಂಡೊಯ್ದಿದೆ. ಈವರೆಗೆ 3.5 ಟನ್ ಪರಿಹಾರ, ರಿಪೇರಿ ಸಾಮಗ್ರಿಗಳನ್ನು ದುರಂತ ನಡೆದ ಸ್ಥಳಕ್ಕೆ ರವಾನಿಸಲಾಗಿದೆ. ಅಮರನಾಥ ಗುಹೆಯಲ್ಲಿ ಸಿಲುಕಿದ್ದ 45 ಯಾತ್ರಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಅಮರನಾಥ ಯಾತ್ರಿಕರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿಶೇಷ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಮೃತರ ಗೌರವಾರ್ಥ 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.
ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ರೆಜಿಮೆಂಟ್ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಡಿಎಸ್ ಔಜ್ಲಾ ನೇತೃತ್ವದಲ್ಲಿ ರಕ್ಷಣೆ ಮತ್ತು ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. ಇಂಡೊ-ಟಿಬೇಟನ್ ಬಾರ್ಡರ್ ಪೊಲೀಸ್ನ ಸಿಬ್ಬಂದಿಯನ್ನೂ ಸ್ಥಳಕ್ಕೆ ನಿಯೋಜಿಸಲಾಗಿದೆ. ಅಮರನಾಥದ ಪವಿತ್ರ ಗುಹೆಯ ಸಮೀಪ ಶುಕ್ರವಾರ ಮೇಘಸ್ಫೋಟ ಸಂಭವಿಸಿದ್ದರಿಂದ ಸಮೀಪದ ನಾಲೆಯಲ್ಲಿ ದೊಡ್ಡಮಟ್ಟದಲ್ಲಿ ನೀರು ಹರಿದುಬಂದು, ಯಾತ್ರೆಯು ಅಸ್ತವ್ಯಸ್ತಗೊಂಡಿತು.
ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ
ಅಮರನಾಥ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಭಕ್ತರಿಗೆ ಅಗತ್ಯ ಸೇವೆ ಒದಗಿಸುತ್ತಿರುವ ಮುಸ್ಲಿಮರು ಭಾನುವಾರ ಬಕ್ರೀದ್ ಪ್ರಯುಕ್ತ ಬಲ್ತಾಲ್ ಶಿಬಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮೇಘಸ್ಫೋಟದಿಂದ ಮೃತಪಟ್ಟವರ ಆತ್ಮಗಳಿಗೆ ಶಾಂತಿ ಕೋರಿ ಮತ್ತು ಅಮರನಾಥ ಯಾತ್ರೆ ಸುಸೂತ್ರವಾಗಿ ನಡೆಯಬೇಕೆಂದು ಆಶಿಸಿ ಮತ್ತೊಮ್ಮೆ ಹೆಚ್ಚುವರಿಯಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
J&K | Members of Muslim community, who are offering services to pilgrims during Amarnath yatra, offer namaz at Baltal Base Camp on #EidAlAdha
Spl prayer was conducted for those who lost their lives in the cloudburst & Masjid committee offered help to pilgrims who need assistance pic.twitter.com/piQ3QfxeWl
— ANI (@ANI) July 10, 2022
Published On - 12:51 pm, Sun, 10 July 22