ರಾಮಮಂದಿರ ಆಯ್ತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡ್ತೇವೆ: ಅಮಿತ್​​ ಶಾ ಮಹತ್ವದ ಘೋಷಣೆ

|

Updated on: May 16, 2024 | 3:42 PM

ಕೇಂದ್ರ ಗೃಹ ಸಚಿವ ಅಮಿತ್​​ ಶಾ ಮಹತ್ವದ ಘೋಷಣೆಯೊಂದನ್ನು ಬಿಹಾರ ಚುನಾವಣೆ ರ್ಯಾಲಿಯಲ್ಲಿ ಮಾಡಿದ್ದಾರೆ. ರಾಮಮಂದಿರ ಆಯ್ತು ಇನ್ನು ಬಿಹಾರದ ಸೀತಾಮರ್ಹಿಯಲ್ಲಿ ಸೀತಾ ಮಂದಿರವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಮೋದಿ ಅವರದೇ ನೇತೃತ್ವ ಎಂದು ಹೇಳಿದ್ದಾರೆ.

ರಾಮಮಂದಿರ ಆಯ್ತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡ್ತೇವೆ: ಅಮಿತ್​​ ಶಾ ಮಹತ್ವದ ಘೋಷಣೆ
Follow us on

ಬಿಹಾರದಲ್ಲಿ ಲೋಕಚುನಾವಣೆ ಪ್ರಚಾರದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​​​ ಶಾ, (amit shah) ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಬಿಹಾರದ ಸೀತಾಮರ್ಹಿಯಲ್ಲಿ ಸೀತಾ ಮಾತೆಯ ಮಂದಿರವನ್ನು ಬಿಜೆಪಿ ನಿರ್ಮಿಸಲಿದೆ ಎಂದು ಹೇಳಿದೆ. ರಾಮ ಮಂದಿರ ಆಯಿತು ಇನ್ನು ಸೀತಾ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾವು ‘ವೋಟ್ ಬ್ಯಾಂಕ್’ಗೆ ಹೆದರುವುದಿಲ್ಲ. . ಅಯೋಧ್ಯೆಯಲ್ಲಿ ರಾಮಲಲ್ಲಾ ಮಂದಿರವನ್ನು ನಿರ್ಮಿಸಿದ ಪ್ರಧಾನಿ ಮೋದಿಗೆ ಈಗ ಉಳಿದಿರುವ ಕೆಲಸವೆಂದರೆ ಮಾ ಸೀತೆಯ ಜನ್ಮಸ್ಥಳದಲ್ಲಿ ದೊಡ್ಡ ಸ್ಮಾರಕವನ್ನು ನಿರ್ಮಿಸುವುದು. ರಾಮನನ್ನು ಮಂದಿರದಿಂದ ಹಾಗೂ ಆತನ ಜನ್ಮಸ್ಥಳದಿಂದ ದೂರವಿಟ್ಟರು. ಆದರೆ ಸೀತೆಯನ್ನು ಆಕೆಯ ಜನ್ಮಸ್ಥಳದಿಂದ ದೂರವಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸೀತೆಯ ಜೀವನದಂತೆ ಆದರ್ಶಪ್ರಾಯವಾದ ದೇವಾಲಯವನ್ನು ಯಾರಾದರೂ ನಿರ್ಮಿಸಲು ಸಾಧ್ಯವಾದರೆ, ಅದು ನರೇಂದ್ರ ಮೋದಿ ಮತ್ತು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಹಿಂದೂ ಪುರಾಣಗಳ ಪ್ರಕಾರ, ರಾಜ ಜನಕನು ಸೀತಾಮರ್ಹಿಯ ಬಳಿ ಹೊಲವನ್ನು ಉಳುಮೆ ಮಾಡುತ್ತಿದ್ದಾಗ, ಸೀತಾ ಮಾತೆ ಮಣ್ಣಿನ ಮಡಕೆಯಿಂದ ಜೀವವನ್ನು ಪಡೆಯುತ್ತಾಳೆ. ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದರು. ಇದೀಗ ಸೀತಾ ದೇವಿಯ ದೇವಸ್ಥಾನಕ್ಕಾಗಿ ಮತ್ತೊಮ್ಮೆ ಮೋದಿ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.

ಬಿಹಾರದ 40 ಕ್ಷೇತ್ರಗಳ ಪೈಕಿ ಸೀತಾಮರ್ಹಿ ಕೂಡ ಒಂದು, ಮೇ 20 ರಂದು ಐದನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದೆ ಎಂದರು. ಈ ರ್ಯಾಲಿಯಲ್ಲಿ ಅಮಿತ್​ ಶಾ, ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಟೀಕಿಸಿದ್ದಾರೆ. ಇಂದು ಲಾಲು ಯಾದವ್ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ತಮ್ಮ ಮಗನನ್ನು ಉಪಮುಖ್ಯಮಂತ್ರಿ ಮಾಡಿದ್ರು, ಆದರೆ ಇದೀಗ ಅವರ ಪರಿಸ್ಥಿತಿ ಏನಾಗಿದೆ ಎಂಬುದನ್ನು ನೀವು ನೋಡಬಹುದು ಎಂದು ಹೇಳಿದರು.

ಇದನ್ನೂ ಓದಿ: ಸಿಎಎ ಬಗ್ಗೆ ಕಾಂಗ್ರೆಸ್, ಎಸ್​ಪಿ ಸುಳ್ಳು ಸುದ್ದಿ ಹರಡುತ್ತಿದೆ; ಅಜಂಗಢದಲ್ಲಿ ಪ್ರಧಾನಿ ಮೋದಿ ಆರೋಪ

ಮೋದಿ ಸರ್ಕಾರ ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುತ್ತದೆ ಎಂದು ಕಾಂಗ್ರೆಸ್, ಆರ್‌ಜೆಡಿ ಎಂದಿಗೂ ಯೋಚಿಸಿರಲಿಲ್ಲ. ಬಿಹಾರಕ್ಕೆ ‘ವಿಕಾಸರಾಜ್’ ಬೇಕು, ‘ಜಂಗಲ್ ರಾಜ್’ ಅಲ್ಲ ಎಂದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ 40 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 39 ಸ್ಥಾನಗಳನ್ನು ಗೆದ್ದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Thu, 16 May 24