ರಾಮಮಂದಿರ ಮುಂದಿನ ಪೀಳಿಗೆಗೂ ಸ್ಫೂರ್ತಿದಾಯಕವಾಗಲಿದೆ: ಪ್ರಧಾನಿ ಮೋದಿ
ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇದೊಂದು ಐತಿಹಾಸಿಕ ಕ್ಷಣ,ಕೋಟ್ಯಂತರ ಭಾರತೀಯರ ಮನದಲ್ಲಿ ದಶಕಗಳಿಂದ ಮನೆಮಾಡಿದ್ದ ಮಹದಾಸೆ ಇಂದು ನೆರವೇರಿದೆ ಎಂದು ಹೇಳಿದರು. “ವಿಶ್ವದಾದ್ಯಂತ ಇಂದು ರಾಮನ ಘೋಷವಾಕ್ಯ ಮೊಳಗುತ್ತಿದೆ. ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ನನ್ನಿಂದ ಮಾಡಿಸುತ್ತಿರವುದು ನನ್ನ ಸೌಭಾಗ್ಯ ಮತ್ತು ನನಗೆ ಸಂದಿರುವ ಅತಿ ದೊಡ್ಡ ಗೌರವ. ನನಗೆ ಈ ಅವಕಾಶ ಕಲ್ಪಿಸಿದ ಶ್ರೀರಾಮ ಜನ್ಮಭೂಮಿ ಟ್ರಸ್ಟ್ಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ,”ಎಂದು ಹೇಳಿದ ಪ್ರಧಾನಿ ಮೋದಿ, […]
ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇದೊಂದು ಐತಿಹಾಸಿಕ ಕ್ಷಣ,ಕೋಟ್ಯಂತರ ಭಾರತೀಯರ ಮನದಲ್ಲಿ ದಶಕಗಳಿಂದ ಮನೆಮಾಡಿದ್ದ ಮಹದಾಸೆ ಇಂದು ನೆರವೇರಿದೆ ಎಂದು ಹೇಳಿದರು.
“ವಿಶ್ವದಾದ್ಯಂತ ಇಂದು ರಾಮನ ಘೋಷವಾಕ್ಯ ಮೊಳಗುತ್ತಿದೆ. ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ನನ್ನಿಂದ ಮಾಡಿಸುತ್ತಿರವುದು ನನ್ನ ಸೌಭಾಗ್ಯ ಮತ್ತು ನನಗೆ ಸಂದಿರುವ ಅತಿ ದೊಡ್ಡ ಗೌರವ. ನನಗೆ ಈ ಅವಕಾಶ ಕಲ್ಪಿಸಿದ ಶ್ರೀರಾಮ ಜನ್ಮಭೂಮಿ ಟ್ರಸ್ಟ್ಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ,”ಎಂದು ಹೇಳಿದ ಪ್ರಧಾನಿ ಮೋದಿ, ಈ ಕ್ಷಣಕ್ಕಾಗಿ ಕಾದ ಭಾರತೀಯರೆಲ್ಲ ರೋಮಾಂಚಿತರಾಗಿದ್ದಾರೆ ಎಂದರು.
“ದೇಶದ ಮೂಲೆ ಮೂಲೆಯಲ್ಲೂ ಇಂದು ರಾಮನಾಮ ಜಪಿಸಲಾಗುತ್ತಿದೆ, ಭಗವಾನ್ ಭಾಸ್ಕರನ ಪ್ರಸನ್ನತೆಯಲ್ಲಿ, ಸರಯೂ ನದಿ ತೀರದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ. ಜೈ ಶ್ರೀರಾಮ ಘೋಷಣೆ ಕೇವಲ ರಾಮನ ನಗರದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಮೊಳಗುತ್ತಿದೆ. ನಾಡಿನ ಸಮಸ್ತ ನಾಗರಿಕರಿಗೆ, ವಿಶ್ವದ ನಾನಾ ಭಾಗಗಳಲ್ಲಿ ವಾಸವಾಗಿರುವ ಭಾರತೀಯರಿಗೆ, ಮತ್ತು ಎಲ್ಲಾ ರಾಮಭಕ್ತರಿಗೆ ನನ್ನ ಕೃತಙ್ಞತೆಗಳನ್ನು ಸಮರ್ಪಿಸುತ್ತೇನೆ,” ಎಂದು ಮೋದಿ ಹೇಳಿದರು.
ಟೆಂಟ್ನಲ್ಲಿ ವಾಸಮಾಡುತ್ತಿದ್ದ ನಮ್ಮ ರಾಮಲಲ್ಲಾನಿಗೆ ಒಂದು ಭವ್ಯ ಮಂದಿರವನ್ನು ನಿರ್ಮಿಸಲಾಗುತ್ತದೆ. ಶತಮಾನಗಳಿಂದ ನಡೆಯುತ್ತಿದ್ದ ವ್ಯಾಜ್ಯ ಕೊನೆಗೊಂಡಿದ್ದು ರಾಮನ ಭೂಮಿ ಈಗ ವಿವಾದಮುಕ್ತವಾಗಿದೆ. ಇಲ್ಲಿ ನಿರ್ಮಾಣಗೊಳ್ಳುವ ಮಂದಿರವು ನಮ್ಮ ಪರಂಪರೆಗಳ ಆಧುನಿಕ ಮತ್ತು ಕೋಟ್ಯಂತರ ಭಾರತೀಯರ ಸಾಮೂಹಿಕ ಸಂಕಲ್ಪದ ಪ್ರತೀಕವಾಗಿರುತ್ತದೆ. ಮುಂಬರುವ ಪೀಳಿಗೆಗಳಿಗೆ ಈ ಮಂದಿರ ಸ್ಫೂರ್ತಿದಾಯಕವಾಗಿರಲಿದೆ,” ಎಂದು ಪ್ರಧಾನಿ ಹೇಳಿದರು.
“ಶ್ರೀರಾಮ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಕೇವಲ ಇತಿಹಾಸವನ್ನು ಮಾತ್ರ ಸೃಷ್ಟಿಸಿಲ್ಲ, ಅದನ್ನು ಪುನರಾವರ್ತನೆಗೊಳಿಸಿದೆ. ನಾವಿಕರು ಮತ್ತು ಬುಡಕಟ್ಟು ಜನಾಂಗದವರು, ಭಗವಾನ್ ರಾಮನಿಗೆ ಸಹಾಯ ಮಾಡಿದಂತೆ ಹಾಗೂ ಗೋವರ್ಧನ ಪರ್ವತವನ್ನು ಎತ್ತಲು, ಮಕ್ಕಳು ಶ್ರೀಕೃಷ್ಣನಿಗೆ ನೆರವಾದಂತೆಯೇ ಪ್ರತಿಯೊಬ್ಬ ಭಾರತೀಯನ ಪ್ರಯತ್ನವು ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಸಹಾಯವಾಗುತ್ತದೆ,” ಎಂದು ಪ್ರಧಾನಿ ಹೇಳಿದರು.
“ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಭವ್ಯ ರಾಮಮಂದಿರವು ಶ್ರೀರಾಮನ ಹೆಸರಿನಂತೆಯೇ ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಮತ್ತು ನಿರಂತರ ಸ್ಫೂರ್ತಿಯ ಸೆಲೆಯಾಗಿರುತ್ತದೆ ಎಂಬ ನಂಬಿಕೆ ನನ್ನಲ್ಲಿದೆ,” ಎಂದು ಮೋದಿ ಹೇಳಿದರು.
“ನಾವಿಲ್ಲಿ ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ, ಮನುಕುಲ ರಾಮನನ್ನು ನಂಬಿದಂತೆಲ್ಲ ಅದರ ಅಭಿವೃದ್ಧಿಯಾಗಿದೆ. ಆತನು ತೋರಿದ ಪಥದಿಂದ ವಿಮುಖರಾದಾಗಲೆಲ್ಲ ನಾಶದ ಬಾಗಿಲು ತೆರೆದುಕೊಂಡಿದೆ. ಪ್ರತಿಯೊಬ್ಬ ಭಾರತೀಯನ ಭಾವನೆಗಳನ್ನು ನಾವು ಗೌರವಿಸಬೇಕು. ವಿಶ್ವಾಸ ಮತ್ತು ಪರಸ್ಪರ ಬೆಂಬಲದ ಮೂಲಕ ಪ್ರತಿಯೊಬ್ಬರ ಅಭಿವೃದ್ಧಿ ಸಾಕಾರಗೊಳ್ಳವಂತೆ ಮಾಡಬೇಕು,” ಎಂದು ನರೇಂದ್ರ ಮೋದಿ ಹೇಳಿದರು.
ಇಡೀ ದೇಶಕ್ಕೆ ಇದೊಂದು ಭಾವನಾತ್ಮಕ ಕ್ಷಣ, ಎಲ್ಲರ ಹೃದಯಗಳಲ್ಲಿ ಬೆಳಕು ಮೂಡಿದೆ ಎಂದು ಹೇಳುತ್ತಾ, ಮತ್ತೊಮ್ಮೆ ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತಾ ಪ್ರಧಾನಿ ನರೇಂದ್ರ ಮೋದಿ ಮಾತು ಮುಗಿಸಿದರು.