41 ನಿಮಿಷದಲ್ಲಿ ಅತ್ಯಾಚಾರ, ಕೊಲೆ, ದರೋಡೆ; ಐಆರ್​ಎಸ್​ ಅಧಿಕಾರಿ ಮನೆಯಲ್ಲಿ ನಡೆದಿದ್ದೇನು? ಆರೋಪಿ ಸಿಕ್ಕಿದ್ದು ಹೇಗೆ?

ದೆಹಲಿಯ ಐಆರ್​ಎಸ್​ ಅಧಿಕಾರಿಯ ಮಗಳ ಮೇಲೆ ಅತ್ಯಾಚಾರ, ಕೊಲೆ ನಡೆದಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸಾಕಷ್ಟು ಭದ್ರತೆ ಇರುವ ದೆಹಲಿಯ ಐಷಾರಾಮಿ ಕೈಲಾಶ್ ಹಿಲ್ಸ್​ನಲ್ಲಿ ಅಧಿಕಾರಿಯ ಮನೆಯಲ್ಲಿ ಬೆಳಗಿನ ಜಾವದಲ್ಲೇ ನಡೆದ ಈ ಘಟನೆ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಐಆರ್​ಎಸ್​ ಅಧಿಕಾರಿ ಹಾಗೂ ಅವರ ಹೆಂಡತಿ ವಾಕಿಂಗ್​ಗೆ ಹೋಗಿದ್ದಾಗ ನಿನ್ನೆ ಮುಂಜಾನೆ ಅವರ 22 ವರ್ಷದ ಮಗಳ ಮೇಲೆ ಮನೆಯೊಳಗೆ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಈ ಘಟನೆ ನಡೆದ 12 ಗಂಟೆಯಲ್ಲೇ ಪೊಲೀಸರು ಆರೋಪಿ ರಾಹುಲ್​ನನ್ನು ಬಂಧಿಸಿದ್ದಾರೆ.

41 ನಿಮಿಷದಲ್ಲಿ ಅತ್ಯಾಚಾರ, ಕೊಲೆ, ದರೋಡೆ; ಐಆರ್​ಎಸ್​ ಅಧಿಕಾರಿ ಮನೆಯಲ್ಲಿ ನಡೆದಿದ್ದೇನು? ಆರೋಪಿ ಸಿಕ್ಕಿದ್ದು ಹೇಗೆ?
Rahul Meena
Image Credit source: TV9

Updated on: Apr 23, 2026 | 3:42 PM

ನವದೆಹಲಿ, ಏಪ್ರಿಲ್ 23: ಬುಧವಾರ ಬೆಳಗ್ಗೆ 6.40ಕ್ಕೆ ದೆಹಲಿಯ ಐಷಾರಾಮಿ ಪ್ರದೇಶವಾದ ಕೈಲಾಶ್ ಹಿಲ್ಸ್​ನಲ್ಲಿರುವ ಐಆರ್​ಎಸ್​ ಅಧಿಕಾರಿಯೊಬ್ಬರ (IRS Officer) ಮನೆಯೊಳಗೆ ಭೀಕರ ಘಟನೆ ನಡೆದಿತ್ತು. ಬೆಳಗ್ಗೆ 6.30ಕ್ಕೆ ಐಆರ್​ಎಸ್​ ಅಧಿಕಾರಿ ತನ್ನ ಹೆಂಡತಿಯ ಜೊತೆ ವಾಕಿಂಗ್​​ಗೆ ಹೋದಕೂಡಲೆ ಅದೇ ಮನೆಯ ಮಾಜಿ ಕೆಲಸಗಾರ ರಾಹುಲ್ ಆ ಮನೆಯೊಳಗೆ ನುಗ್ಗಿದ್ದ. ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಸಂಚು ಮಾಡಿದ್ದ ಆತನಿಗೆ ಆ ಮನೆಯ ಹೊರಗೆ ಕೆಲಸಗಾರರಿಗಾಗಿ ಎಲ್ಲಿ ಕೀ ಇಟ್ಟಿರುತ್ತಾರೆ ಎಂಬುದು ಗೊತ್ತಿತ್ತು. ಆ ಮನೆಯಲ್ಲಿ ಎಲ್ಲಿ ಸಿಸಿಟಿವಿ ಇದೆ, ಮನೆ ಮಾಲೀಕ ಎಷ್ಟು ಗಂಟೆಗೆ ಹೋಗಿ ಎಷ್ಟು ಗಂಟೆಗೆ ವಾಕಿಂಗ್ ಮುಗಿಸಿ ವಾಪಾಸ್ ಬರುತ್ತಾರೆ ಎಲ್ಲವೂ ಆತನಿಗೆ ಗೊತ್ತಿತ್ತು. ಹೀಗಾಗಿ, ಕೆಲಸದವರಿಗಾಗಿ ಹೊರಗೆ ಇಟ್ಟಿದ್ದ ಕೀ ತೆಗೆದುಕೊಂಡು ಬಾಗಿಲು ತೆರೆದು ಒಳಗೆ ಹೋದ ಅವನು ಸೀದಾ ಹೋಗಿದ್ದು ಮೇಲಿನ ಮಹಡಿಗೆ.

ಮೇಲಿನ ಮಹಡಿಯಲ್ಲಿ ಐಆರ್​ಎಸ್​ ಅಧಿಕಾರಿಯ 22 ವರ್ಷದ ಮಗಳ ರೂಂ ಇತ್ತು. ಪಿಯುಸಿಯಲ್ಲಿ ಟಾಪರ್ ಆಗಿದ್ದ ಆಕೆ ಅಪ್ಪನಂತೆ ಅಧಿಕಾರಿಯಾಗಬೇಕೆಂದು ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅಪ್ಪ-ಅಮ್ಮ ವಾಕಿಂಗ್​ಗೆ ಹೋಗುವ ಮುನ್ನವೇ ಎದ್ದು ಓದಲು ಕೂರುತ್ತಿದ್ದ ಆಕೆ ಅಂದು ಕೂಡ ಅಲ್ಲಿ ಓದುತ್ತಾ ಕುಳಿತಿದ್ದರು. ಆಗ ಆ ರೂಂಗೆ ಬಂದ ರಾಹುಲ್​ನನ್ನು ಕಂಡು ಆಕೆ ಹೆದರಿ ಕಿರುಚಿದ್ದರು. ಆದರೆ, ಆಕೆಯ ಕೂಗು ಯಾರಿಗೂ ಕೇಳಲಿಲ್ಲ. ಅಷ್ಟರಲ್ಲಿ ರಾಹುಲ್ ಟೇಬಲ್ ಲ್ಯಾಂಪ್​ನಿಂದ ಆಕೆಯ ತಲೆಗೆ ಹೊಡೆದಿದ್ದ. ಇದರಿಂದ ಆಕೆಯ ತಲೆಯಲ್ಲಿ ರಕ್ತ ಬಂದು, ಪ್ರಜ್ಞಾಹೀನರಾಗಿದ್ದರು. ಆಕೆಗೆ ಪ್ರಜ್ಞೆ ಹೋಗುತ್ತಿದ್ದಂತೆ ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿದ್ದ ರಾಹುಲ್ ಆಕೆಯ ಕುತ್ತಿಗೆಗೆ ಮೊಬೈಲ್ ಚಾರ್ಜರ್​ನ ವೈರ್ ಸುತ್ತಿ ಕತ್ತು ಹಿಸುಕಿ ಕೊಂದಿದ್ದ.

ಆಕೆಯ ಮೈಯಲ್ಲಿದ್ದ ರಕ್ತ ಆತನ ಮೈಗೂ ಮೆತ್ತಿಕೊಂಡಿತ್ತು. ಹೀಗೇ ಮನೆಯಿಂದ ಆಚೆ ಹೋದರೆ ಸಿಕ್ಕಿಹಾಕಿಕೊಳ್ಳುವುದು ಗ್ಯಾರಂಟಿ ಎಂದು ಆತ ಮೃತ ಯುವತಿಯ ಸಹೋದರನ ಬಟ್ಟೆ ತೆಗೆದುಕೊಂಡು ಬಾತ್​ರೂಂಗೆ ಹೋಗಿ ಬಟ್ಟೆ ಬದಲಾಯಿಸಿದ್ದ, ಶೂ ಕೂಡ ಚೇಂಜ್ ಮಾಡಿದ್ದ. ಬಳಿಕ ಕೆಳಗಿನ ಮಹಡಿಗೆ ಬಂದು ಐಆರ್​ಎಸ್​ ಅಧಿಕಾರಿಯ ರೂಂನಿಂದ ಎರಡೂವರೆ ಲಕ್ಷ ರೂ. ಹಣ ತೆಗೆದುಕೊಂಡು ಬ್ಯಾಗ್​​ನಲ್ಲಿಟ್ಟುಕೊಂಡಿದ್ದ. ನಂತರ ಏನೂ ಆಗಿಯೇ ಇಲ್ಲವೆಂಬಂತೆ ಬಾಗಿಲು ಲಾಕ್ ಮಾಡಿ, 7.21ಕ್ಕೆ ಮನೆಯಿಂದ ಹೊರಗೆ ಹೋಗಿದ್ದ. ಅದಾದ ಸ್ವಲ್ಪ ಹೊತ್ತಿನಲ್ಲೇ ಮನೆಗೆ ಬಂದ ಐಆರ್​ಎಸ್​ ಅಧಿಕಾರಿ ದಂಪತಿ ಮಗಳ ರೂಂಗೆ ಹೋದಾಗ ಅಲ್ಲಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಷ್ಟರಲ್ಲಾಗಿಯೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.

ಇದನ್ನೂ ಓದಿ: ಆದಾಯ ತೆರಿಗೆ​ ಅಧಿಕಾರಿ ಜಿಮ್​ನಲ್ಲಿದ್ದಾಗ ಮನೆಯಲ್ಲಿ ಮಗಳ ಬರ್ಬರ ಹತ್ಯೆ

ಹಾಡಹಗಲೇ ಕೇವಲ 41 ನಿಮಿಷದಲ್ಲಿ ಆ ಐಷಾರಾಮಿ ಮನೆಯಲ್ಲಿ ಭೀಕರ ಹತ್ಯೆ ನಡೆದಿತ್ತು. ಈ ಘಟನೆಯ ಮಾಹಿತಿ ತಿಳಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿದಾಗ ರಾಹುಲ್ ಓಡಾಡಿದ್ದು ಕಂಡುಬಂದಿತ್ತು. ಆತ ಆ ಮನೆಯಲ್ಲಿ ಕೆಲಸಕ್ಕಿದ್ದಾಗ ಹಣ ಕದ್ದಿದ್ದರಿಂದ ಆತನನ್ನು ಕೆಲಸದಿಂದ ತೆಗೆದುಹಾಕಿದ್ದ ವಿಷಯ ತಿಳಿದ ಪೊಲೀಸರಿಗೆ ಸೇಡಿಗಾಗಿ ಆತನೇ ಈ ಕೃತ್ಯ ಎಸಗಿದ್ದಾನೆಂಬುದು ಮನದಟ್ಟಾಗಿತ್ತು. ಈ ಘಟನೆ ನಡೆದ 12 ಗಂಟೆಯೊಳಗೆ ಪೊಲೀಸರು ರಾಹುಲ್​ನನ್ನು ಓಯೋ ಹೋಟೆಲ್​ನಿಂದ ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ರಾಹುಲ್ ಅಲ್ಲಿಂದ ಹೋಗಿದ್ದ ಆಟೋ ಚಾಲಕನನ್ನು ವಿಚಾರಿಸಿದ ಪೊಲೀಸರಿಗೆ ಆತ ಓಯೋ ಹೋಟೆಲ್​ ಬಳಿ ಇಳಿದುಕೊಂಡ ಮಾಹಿತಿ ಸಿಕ್ಕಿತ್ತು. ಆತನನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿತ್ತು. ಕೊನೆಗೂ ಹೋಟೆಲ್​ನಲ್ಲಿ ತಣ್ಣಗೆ ಕುಳಿತಿದ್ದ ರಾಹುಲ್ ಪೊಲೀಸರ ಅತಿಥಿಯಾಗಿದ್ದ.

ನಿನ್ನೆ ರಾತ್ರಿಯೇ ದೆಹಲಿಯಿಂದ ತನ್ನ ಊರಾದ ರಾಜಸ್ಥಾನಕ್ಕೆ ತೆರಳಲು ರಾಹುಲ್ ಪ್ಲಾನ್ ಮಾಡಿದ್ದ. ಅಲ್ಲಿಯವರೆಗೂ ತನ್ನ ಬಗ್ಗೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಪೊಲೀಸರು ಅವನಿಗಿಂತ ಬಹಳ ಹೆಜ್ಜೆ ಮುಂದಿದ್ದರು. ರಾಹುಲ್ ಐಆರ್​ಎಸ್​ ಅಧಿಕಾರಿಯ ಮನೆಯ ಬಳಿ ಒಂದೆರಡು ದಿನದಿಂದ ಓಡಾಡಿದ್ದನ್ನು ಸ್ಥಳೀಯ ಅಂಗಡಿಯವರು ನೋಡಿದ್ದರು. ಆತ ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರಿಗೆ ಅವನ ಪರಿಚಯವಿತ್ತು. ಅವನನ್ನು ಕೆಲಸದಿಂದ ವಜಾಗೊಳಿಸಿದ್ದು ಕೂಡ ಅವರಿಗೆ ಗೊತ್ತಿತ್ತು. ಹೀಗಾಗಿ, ಪೊಲೀಸರ ವಿಚಾರಣೆ ವೇಳೆ ಅಂಗಡಿಯವರು ರಾಹುಲ್ ಬಗ್ಗೆ ಹೇಳಿದ್ದರಿಂದ ಪೊಲೀಸರು ಸಿಸಿಟಿವಿಯಲ್ಲಿ ರಾಹುಲ್​ನನ್ನು ಪತ್ತೆಹಚ್ಚಲು ಸಹಾಯವಾಗಿತ್ತು.

ಇದನ್ನೂ ಓದಿ: ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಕುಟ್ಟ ಖಾಸಗಿ ಹೋಂಸ್ಟೇ ಪರವಾನಗಿ ರದ್ದು

ಪೊಲೀಸರು ವಿಚಾರಣೆ ವೇಳೆ ರಾಹುಲ್ ಆ 41 ನಿಮಿಷ ಆ ಮನೆಯಲ್ಲಿ ತಾನು ಏನೇನು ಮಾಡಿದನೆಂಬುದರ ಸಂಪೂರ್ಣ ಮಾಹಿತಿ ನೀಡಿದ್ದಾನೆ. ಆತನನ್ನು ಹಿಡಿಯಲು 15 ತಂಡಗಳನ್ನು ರಚಿಸಲಾಗಿತ್ತು. ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ಗೆ ವ್ಯಸನಿಯಾಗಿದ್ದ ರಾಹುಲ್ ಜನರಿಂದ ಹಣವನ್ನು ಸಾಲವಾಗಿ ಪಡೆಯುತ್ತಿದ್ದ. ಅಪರಾಧಕ್ಕೂ ಮುನ್ನ ತನ್ನ ಫೋನ್ ಅನ್ನು 10,000 ರೂಪಾಯಿಗೆ ಮಾರಿದ್ದ. ಐಆರ್‌ಎಸ್ ಅಧಿಕಾರಿಯ ಮಗಳನ್ನು ಕೊಲೆ ಮಾಡಿದ ನಂತರ 2.5 ಲಕ್ಷ ರೂಪಾಯಿಗಳನ್ನು ಕದ್ದಿದ್ದ. ಹಣಕ್ಕಾಗಿ ಆ ಮನೆಗೆ ದರೋಡೆಗೆ ಹೋದ ಆತ ತನ್ನ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ಮತ್ತು ಕೊಲೆ ನಡೆಸಿದ್ದ. ಪೊಲೀಸರು ಮನೆ ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆಗಾಗಿ ಪರಿಶೀಲಿಸಿದಾಗ ರಾಹುಲ್ ಬೆಳಿಗ್ಗೆ 6:30ಕ್ಕೆ ಆ ಕಾಲೋನಿಗೆ ಬಂದಿರುವುದು ಕಂಡುಬಂದಿತ್ತು. ಅವನು ಬೆಳಿಗ್ಗೆ 6:40ರ ಸುಮಾರಿಗೆ ಮನೆಯೊಳಗೆ ಪ್ರವೇಶಿಸಿದನು. ನಂತರ ಬೆಳಿಗ್ಗೆ 7:20ಕ್ಕೆ ಅಲ್ಲಿಂದ ಮಾಡಿ ಪರಾರಿಯಾಗಿದ್ದನು. ಅವನು 41 ನಿಮಿಷಗಳಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ ಎಂದು ಜಂಟಿ ಆಯುಕ್ತ ವಿಜಯ್ ಕುಮಾರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us