ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಕುಟ್ಟ ಖಾಸಗಿ ಹೋಂಸ್ಟೇ ಪರವಾನಗಿ ರದ್ದು
ಕೊಡಗಿನ ಕುಟ್ಟದಲ್ಲಿ ಅಮೆರಿಕದ ಪ್ರವಾಸಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಖಾಸಗಿ ಹೋಂಸ್ಟೇಯ ಪರವಾನಗಿಯನ್ನು ರದ್ದುಗೊಳಿಸಿದೆ. ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪವೂ ಇದ್ದು, ಸದ್ಯ ಪ್ರಕರಣ ಸಂಬಂಧ ಹೋಂಸ್ಟೇ ಮಾಲೀಕ ಹಾಗೂ ದೌರ್ಜನ್ಯ ಎಸಗಿದ ಕುಕ್ ಜೈಲಿನಲ್ಲಿದ್ದಾರೆ.
ಮಡಿಕೇರಿ, ಏಪ್ರಿಲ್ 23: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರವಾಸೋದ್ಯಮ ಇಲಾಖೆ, ಆರೋಪಿತ ಹೋಂಸ್ಟೇಯ ಪರವಾನಗಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕಳೆದ ಕೆಲವು ದಿನಗಳ ಹಿಂದೆ ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಪ್ರವಾಸಕ್ಕಾಗಿ ಕುಟ್ಟ ಗ್ರಾಮದ ‘ದೇವಿ ವಿಲ್ಲಾ’ ಹೋಂಸ್ಟೇಗೆ ಬಂದಿದ್ದರು. ಈ ವೇಳೆ ಹೋಂಸ್ಟೇಯ ಕುಕ್ ಆಗಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಪಾನೀಯಕ್ಕೆ ಮಾದಕ ದ್ರವ್ಯ ಬೆರೆಸಿ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಘಟನೆ ನಡೆದ ಬಳಿಕ ಮಹಿಳೆ ಸಹಾಯಕ್ಕಾಗಿ ಯತ್ನಿಸಿದಾಗ, ಹೋಂಸ್ಟೇ ಮಾಲೀಕ ವಿಶಾಲ್ ಸುಮಾರು ಮೂರು ದಿನಗಳ ಕಾಲ ವೈಫೈ ಸಂಪರ್ಕ ಕಡಿತಗೊಳಿಸಿ, ಮಹಿಳೆಗೆ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಬಿಡದೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ವೃಜೇಶ್ ಕುಮಾರ್ ಹಾಗೂ ಮಾಲೀಕ ವಿಶಾಲ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರ ಸುರಕ್ಷತೆಯಲ್ಲಿ ವಿಫಲವಾದ ಮತ್ತು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ 2024ರ ಜನವರಿಯಲ್ಲಷ್ಟೇ ಪರವಾನಗಿ ಪಡೆದಿದ್ದ ಈ ಹೋಂಸ್ಟೇಯನ್ನು ಬಂದ್ ಮಾಡಿದೆ. ಜಿಲ್ಲೆಯ ಎಲ್ಲಾ ಹೋಂಸ್ಟೇಗಳು ಕಡ್ಡಾಯವಾಗಿ ಪ್ರವಾಸಿಗರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಿವರಗಳಿಗೆ ಓದಿ: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Apr 23, 2026 10:16 AM
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
