ಇಲಿ ತಂದೊಡ್ಡುವ ಸಂಕಷ್ಟಗಳನ್ನು ಅದನ್ನು ಬಲ್ಲವರೇ ಬಲ್ಲರು. ಇಂಥ ಇಲಿಯ ಕಾರಣಕ್ಕೀಗ ಇಬ್ಬರು ವೈದ್ಯರ ಕೆಲಸ ಹೋಗಿದೆ. ತೆಲಂಗಾಣದವ ವಾರಂಗಲ್ನ ಮಹಾತ್ಮ ಗಾಂಧಿ ಮೆಮೋರಿಯಲ್ ಆಸ್ಪತ್ರೆಯ ರೆಸ್ಪಿರೇಟರಿ ಇಂಟರ್ಮೀಡಿಯೇಟ್ ಕೇರ್ ಘಟಕದಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಇಲಿ ಕಚ್ಚಿದ ಪರಿಣಾಮ, ಅಲ್ಲಿದ್ದ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ. ಇದು ನಿರ್ಲಕ್ಷ್ಯದ ಪರಮಾವಧಿ ಎಂದು ಪರಿಗಣಿಸಲಾಗಿದೆ.
ರೋಗಿಯ ಹೆಸರು ಶ್ರೀನಿವಾಸ್ ಎಂದಾಗಿದ್ದು 38 ವರ್ಷ. ಶ್ವಾಸಕೋಶ ಮತ್ತು ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಮಾರ್ಚ್ 26ರಂದು ರೆಸ್ಪಿರೇಟರಿ ಇಂಟರ್ಮೀಡಿಯೇಟ್ ಕೇರ್ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಅಷ್ಟೊತ್ತಿಗೆ ಶ್ರೀನಿವಾಸ್ ಕಾಲು, ಕೈಗಳ ಮೇಲೆಲ್ಲ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಈ ಗಾಯವಾಗಿದ್ದು ಇಲಿಗಳಿಂದ. ಈ ಘಟಕದಲ್ಲಿ ಇಲಿಗಳಿದ್ದು, ಅವರು ಶ್ರೀನಿವಾಸ್ಗೆ ಕಚ್ಚುತ್ತಿವೆ ಎಂದು ಅವರನ್ನು ಆರೈಕೆ ಮಾಡಲು ಇದ್ದವರು ಮತ್ತು ಕುಟುಂಬದ ಇನ್ನಿತರ ಸದಸ್ಯರು ಆರೋಪಿಸಿದ್ದರು.
ಮಹಾತ್ಮ ಗಾಂಧಿ ಮೆಮೋರಿಯಲ್ ಆಸ್ಪತ್ರೆ ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು. ಇಲ್ಲೀಗ ರೋಗಿಗೆ ಇಲಿ ಕಡಿದಿದ್ದು ಟೀಕೆಗೆ ಗುರಿಯಾಗಿದ್ದಲ್ಲದೆ, ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಆಸ್ಪತ್ರೆಯ ವ್ಯವಸ್ಥಾಪಕ ಬಿ. ಶ್ರೀನಿವಾಸ್ ರಾವ್ ಅವರನ್ನು ವರ್ಗಾವಣೆ ಮಾಡಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ರೆಸ್ಪಿರೇಟರಿ ಇಂಟರ್ಮೀಡಿಯೇಟ್ ಕೇರ್ನಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ. ಆದರೆ ಇಲ್ಲೊಂದು ಪ್ರಮುಖ ವಿಷಯವೆಂದರೆ, ಕಡಿದಿದ್ದು ಇಲಿಯೇ ಎಂಬುದನ್ನು ಶ್ರೀನಿವಾಸ್ ಕುಟುಂಬದವರಾಗಲೀ, ಅವರೊಂದಿಗೆ ಇದ್ದವರಾಗಲಿ ನೋಡಲಿಲ್ಲ. ಗಾಯದ ಸ್ವರೂಪ ನೋಡಿ, ಅದು ಇಲಿಯೇ ಎಂದು ಶಂಕಿಸಲಾಗಿದೆ ಎಂಬುದನ್ನು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇನ್ನು ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಉಳಿದುಕೊಳ್ಳಲು ಬಂದವರು ಹೆಚ್ಚುಳಿದ ತಿಂಡಿಗಳನ್ನು ಹೊರಗಿನ ಆವರಣದಲ್ಲಿ ಬಿಸಾಕುವುದರಿಂದ ಅಲ್ಲಿ ಇಲಿಗಳು ಇದ್ದಿದ್ದೂ ಹೌದು. ರೋಗಿಗ ಮೈಮೇಲೆ ಆದ ಗಾಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ರಾಜ್ಯ ಆರೋಗ್ಯ ಇಲಾಖೆ ಸಚಿವ ಟಿ. ಹರೀಶ್ ರಾವ್ ಕೂಡ ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಜತೆಗೆ, ಅವರ ಬಗ್ಗೆ ಕಾಳಜಿಯನ್ನೂ ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಜಾನ್ವಿ ಕಪೂರ್ ಮೈಮಾಟಕ್ಕೆ ಸರಿಸಾಟಿ ಯಾರು?