ಚೆನ್ನೈ: ತಮಿಳುನಾಡಿನ ನೂತನ ರಾಜ್ಯಪಾಲರಾಗಿ ಕೇರಳದ ಮಾಜಿ ಐಪಿಎಸ್ ಅಧಿಕಾರಿ ರವೀಂದ್ರ ನಾರಾಯಣ ರವಿ (ಎನ್.ಆರ್. ರವಿ) ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಇಂದು ಪ್ರಮಾಣವಚನ ಬೋಧಿಸಿದರು.
ನೂತನ ರಾಜ್ಯಪಾಲರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಚಿವರು, ವಿರೋಧ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಆರ್.ಎನ್. ರವಿ ಅವರು ತಮಿಳುನಾಡಿನ 25ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ತಮಿಳುನಾಡಿನ ರಾಜ್ಯಪಾಲರಾಗಿದ್ದ ಬನ್ವರಿಲಾಲ್ ಪುರೋಹಿತ್ ಅವರನ್ನು ಪಂಜಾಬ್‌ಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್. ಎನ್ ರವಿ ಅವರನ್ನು ತಮಿಳುನಾಡು ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು. ಕಳೆದ ವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರವೀಂದ್ರ ನಾರಾಯಣ ರವಿ ಅವರನ್ನು ತಮಿಳುನಾಡು ರಾಜ್ಯಪಾಲರಾಗಿ ನೇಮಕ ಮಾಡಿದ್ದರು.
ಕೇರಳದ ಮಾಜಿ ಐಪಿಎಸ್ ಅಧಿಕಾರಿಯಾಗಿರುವ 69 ವರ್ಷದ ರವಿ ನಾಗಾಲ್ಯಾಂಡ್ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರದ ನಾಗಾ ಶಾಂತಿ ಮಾತುಕತೆಯ ಸಂವಾದಕರಾಗಿ ಅವರು ಕಾರ್ಯ ನಿರ್ವಹಿಸಿದ್ದರು.
ಪಾಟ್ನಾದಲ್ಲಿ ಜನಿಸಿದ ರವಿ 1976ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಆರಂಭದಲ್ಲಿ ಕೇರಳದಲ್ಲಿ ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ರವಿ ಬಳಿಕ ಸಿಬಿಐ ಮತ್ತು ಗುಪ್ತಚರ ಬ್ಯೂರೋಗೆ ವರ್ಗಾವಣೆಯಾಗಿದ್ದರು.
ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಮಾತನಾಡಿದ್ದ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ಮಣಿಪುರ ರಾಜ್ಯಪಾಲರಾಗಿ ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದ ಲಾ. ಗಣೇಶನ್ ನೇಮಕ
(Ravindra Narayan Ravi sworn in as Governor of Tamil Nadu Former IPS Officer RN Ravi is TN Governor)