ಮಲಯಾಳಂ ಸಾಹಿತ್ಯ ಲೋಕದ ಖ್ಯಾತ ಕವಯತ್ರಿ ಸುಗತಕುಮಾರಿ ನಿಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 23, 2020 | 3:21 PM

ಮಲಯಾಳಂ ಭಾಷೆಯ ಖ್ಯಾತ ಕವಯತ್ರಿ, ಪರಿಸರ ಹೋರಾಟಗಾರ್ತಿ ಸುಗತಕುಮಾರಿ (86) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಸೈಲೆಂಟ್ ವ್ಯಾಲಿ ಉಳಿಸಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಸುಗತಕುಮಾರಿ ಕಾವ್ಯವನ್ನೇ ಅಸ್ತ್ರವಾಗಿಸಿದ ಮಾನವತಾವಾದಿ ಮತ್ತು ಹೋರಾಟಗಾರ್ತಿ

ಮಲಯಾಳಂ ಸಾಹಿತ್ಯ ಲೋಕದ ಖ್ಯಾತ ಕವಯತ್ರಿ ಸುಗತಕುಮಾರಿ ನಿಧನ
ಸುಗತಕುಮಾರಿ (ಕೃಪೆ: ವಿಕಿಪಿಡಿಯಾ)
Follow us on

ತಿರುವನಂತಪುರಂ: ಮಲಯಾಳಂ ಭಾಷೆಯ ಖ್ಯಾತ ಕವಯತ್ರಿ, ಪರಿಸರ ಹೋರಾಟಗಾರ್ತಿ ಸುಗತಕುಮಾರಿ (86) ನಿಧನರಾಗಿದ್ದಾರೆ. ಕೋವಿಡ್ ರೋಗದಿಂದ ಉಸಿರಾಟ ಮತ್ತು ಹೃದಯ ಸಂಬಂಧಿ ಸಮಸ್ಯೆ ಉಲ್ಬಣವಾದ ಕಾರಣ ಖಾಸಗಿ ಆಸ್ಪತ್ರೆಯಿಂದ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ಬುಧವಾರ ಬೆಳಗ್ಗೆ 10.52ಕ್ಕೆ ಇವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಒಂದೂವರೆ ವರ್ಷಗಳ ಹಿಂದೆ ‘ಮಾತೃಭೂಮಿ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನನ್ನ ಸಮಯ ಮುಗಿಯುತ್ತಾ ಬರುತ್ತಿದೆ ಎಂದು ಸುಗತಕುಮಾರಿ ಹೇಳಿದ್ದರು. ಹೃದಯಾಘಾತದಿಂದ ನೋವು ಅನುಭವಿಸಿದ್ದ ಈ ಹಿರಿಯ ಜೀವ ಸೈಲೆಂಟ್ ವ್ಯಾಲಿಗೆ ಭೇಟಿ ನೀಡಬೇಕು. ಅದೇ ನನ್ನ ಕೊನೆಯ ಆಸೆ ಎಂದು ಹೇಳಿದ್ದರು.

ಹೋರಾಟದ ಹಾದಿ
1970ರಲ್ಲಿ ‘ಸೈಲೆಂಟ್ ವ್ಯಾಲಿ ಉಳಿಸಿ’ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಸುಗತಕುಮಾರಿ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಜೈವಿಕ ವೈವಿಧ್ಯಗಳ ಭಂಡಾರವಾಗಿರುವ ಸೈಲೆಂಟ್ ವ್ಯಾಲಿ ಅರಣ್ಯ ಪ್ರದೇಶದಲ್ಲಿ ಕೇರಳ ರಾಜ್ಯ ವಿದ್ಯುತ್​​ಶಕ್ತಿ ಮಂಡಳಿ (ಕೆಎಸ್​​ಇಬಿ) ಹೈಡ್ರೊಎಲೆಕ್ಟ್ರಿಕ್ ಅಣೆಕಟ್ಟು ನಿರ್ಮಿಸಲು ಯೋಜನೆ ಮುಂದಿಟ್ಟಾಗ ಪರಿಸರಪ್ರೇಮಿಗಳು ಸೈಲೆಂಟ್ ವ್ಯಾಲಿ ಉಳಿಸಿ ಚಳವಳಿ ಆರಂಭಿಸಿದ್ದರು.

ಈ ಯೋಜನೆಯಿಂದ ಅರಣ್ಯ ಮಾತ್ರವಲ್ಲ ಅಳಿವಿನಂಚಿನಲ್ಲಿರುವ ಸಿಂಹಬಾಲದ ಕೋತಿ ವಂಶವೂ ನಾಶವಾಗುತ್ತದೆ ಎಂದು ಹೋರಾಟಗಾರರು ವಾದಿಸಿದ್ದರು. ಈ ಹೊತ್ತಲ್ಲಿ ಸುಗತಕುಮಾರಿ ‘ಮರತ್ತಿನು ಸ್ತುತಿ’ (ಮರಕ್ಕೆ ಸ್ತುತಿ) ಎಂಬ ಕವನ ರಚಿಸಿದ್ದರು. ಪ್ರಕೃತಿಗೆ ಹಾನಿಯುಂಟು ಮಾಡುವ ಸರ್ಕಾರದ ಯೋಜನೆಯ ವಿರುದ್ಧ ದನಿಯೆತ್ತಿದ ಮೊದಲ ಹೋರಾಟಗಾರ್ತಿ ಎಂಬ ಹೆಗ್ಗಳಿಕೆಯೂ ಇವರಿಗಿದೆ.

2006ರಲ್ಲಿ ಮಲಯಾಳಂ ಕಾವ್ಯ ಕ್ಷೇತ್ರದಲ್ಲಿನ ಕೊಡುಗೆಗಾಗಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಪಡೆದ ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಕವಯತ್ರಿ ಇನ್ನು ಮುಂದೆ ನಾನು ಹೋರಾಟ, ಚಳವಳಿಗಳಿಂದ ದೂರವುಳಿಯಲು ತೀರ್ಮಾನಿಸಿರುವುದಾಗಿ ಹೇಳಿದ್ದರು. 2018ರಲ್ಲಿ ಎರ್ನಾಕುಳಂನಲ್ಲಿ ಬಿಷಪ್ ಒಬ್ಬರು ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ದರ ವಿರುದ್ಧ ಐವರು ಕ್ರೈಸ್ತ ಸನ್ಯಾಸಿನಿಗಳು ಪ್ರತಿಭಟಿಸಿದಾಗ ಸುಗತಕುಮಾರಿ ಮತ್ತೆ ಹೋರಾಟದ ದನಿಯಾದರು. ನಿರಾಶ್ರಿತ ಮಹಿಳೆಯರಿಗೆ ಮತ್ತು ಮಾನಸಿಕ ಅಸ್ವಸ್ಥರಿಗಾಗಿ 1992ರಲ್ಲಿ ‘ಅಭಯಾ’ ಎಂಬ ಆಶ್ರಯ ಕೇಂದ್ರವೊಂದನ್ನು ಇವರು ಸ್ಥಾಪಿಸಿದ್ದರು.

ಕಾವ್ಯವನ್ನೇ ಅಸ್ತ್ರವಾಗಿಸಿದ ಕವಿಯತ್ರಿ
ಸುಗತಕುಮಾರಿ ತಮ್ಮ ಹೋರಾಟಗಳಲ್ಲಿ ಕಾವ್ಯವನ್ನೇ ಅಸ್ತ್ರವಾಗಿಸಿದ್ದರು. ಅವರ ಕವನಗಳಲ್ಲಿ ಪ್ರಕೃತಿ ಪ್ರೇಮ ಎದ್ದು ಕಾಣುತ್ತಿತ್ತು. 1960ರಲ್ಲಿ ಅವರ ಪಾತಿರಾಪ್ಪೂಕ್ಕಳ್ (ಮಧ್ಯರಾತ್ರಿಯ ಹೂವುಗಳು) ಕವನ ಸಂಕಲನಕ್ಕೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಇದಾಗಿ ದಶಕದ ನಂತರ ರಾತ್ರಿ ಮಳ (ರಾತ್ರಿ ಮಳೆ) ಎಂಬ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಮುತ್ತುಚಿಪ್ಪಿ, ಪಾವಂ ಮಾನವಹೃದಯಂ, ಇರುಳ್ ಚಿರಗುಗಳ್, ತುಲಾವರ್ಷ ಪಚ್ಚ ಮತ್ತು ರಾಧಾ ಎವಿಡೆ ಎಂಬುದು ಇವರ ಪ್ರಸಿದ್ಧ ಕೃತಿಗಳು.

ಪ್ರಶಸ್ತಿಗಳು
1982- ಓಡಕ್ಕುಳಲ್ ಪ್ರಶಸ್ತಿ
1984- ವಯಲಾರ್ ಪ್ರಶಸ್ತಿ
1991- ಆಶಾನ್ ಪ್ರಶಸ್ತಿ
2001- ಲಲಿತಾಂಬಿಕ ಸಾಹಿತ್ಯ ಪ್ರಶಸ್ತಿ
2009- ಎಳುತ್ತಚ್ಚನ್ ಮತ್ತು ಬಷೀರ್ ಪ್ರಶಸ್ತಿ
2017- ಒಎನ್ ವಿ ಸಾಹಿತ್ಯ ಪ್ರಶಸ್ತಿ
2019 – ಕಡಮನತಿಟ್ಟ ರಾಮಕೃಷ್ಣ ಪ್ರಶಸ್ತಿ

ಕುಟುಂಬದ ಹಿನ್ನೆಲೆ

ಆರನ್ಮುಳ ವಳುವೇಲಿ ಮನೆತನದಲ್ಲಿ ಗಾಂಧೀವಾದಿ, ಕವಿ ಕೇರಳ ನವೋತ್ಥಾನ ಚಳವಳಿಯಲ್ಲಿ ಸಕ್ರಿಯರಾಗಿದ್ದ ಬೋಧೇಶ್ವರ (ಕೇಶವ ಪಿಳ್ಳ) ಮತ್ತು ಸಂಸ್ಕೃತ ಪಂಡಿತೆ ವಿ.ಕೆ ಕಾರ್ತ್ಯಾಯಿನಿ ಮಗಳಾಗಿ 1934 ಜನವರಿ 2 ರಂದು ಸುಗತಕುಮಾರಿ ಜನಿಸಿದರು. ತತ್ವಶಾಸ್ತ್ರದಲ್ಲಿ ತಿರುವನಂತಪುರಂ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ. ಲೇಖಕ, ನಿರೂಪಕ ಡಾ.ಕೆ.ವೇಲಾಯುಧನ್ ನಾಯರ್ ಅವರೊಂದಿಗೆ ಮದುವೆ. ಒಬ್ಬಳೇ ಮಗಳು ಲಕ್ಷ್ಮಿ. ಸಹೋದರಿಯರಾದ ಡಾ. ಹೃದಯಕುಮಾರಿ, ಡಾ.ಸುಜಾತಾದೇವಿ ಕಲಾ ಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಗಳಿಸಿದವರಾಗಿದ್ದಾರೆ.

ಶಾಂತಿಕವಾಡದಲ್ಲಿ ಅಂತ್ಯ ಸಂಸ್ಕಾರ
ಸುಗತಕುಮಾರಿ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ 4 ಗಂಟೆಗೆ ತಿರುವನಂತಪುರಂನ ಶಾಂತಿಕವಾಡದಲ್ಲಿ ನಡೆಯಲಿದೆ. ಅಯ್ಯಂಕಾಳಿ ಹಾಲ್​​ನಲ್ಲಿ ಮಧ್ಯಾಹ್ನ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. 3.30ಕ್ಕೆ ಮೃತದೇಹವನ್ನು ಶಾಂತಿಕವಾಡಕ್ಕೆ ತರಲಾಗುವುದು ಎಂದು ಕುಟುಂಬದವರು ಹೇಳಿದ್ದಾರೆ. ಮರಣ ಸಂಭವಿಸಿದ ಕೂಡಲೇ ನನ್ನ ಅಂತ್ಯ ಸಂಸ್ಕಾರ ಮಾಡಬೇಕು. ಸಾರ್ವಜನಿಕ ದರ್ಶನ, ಪುಷ್ಪಾರ್ಚನೆ ಮಾಡಬಾರದು ಎಂದು ಸುಗತಕುಮಾರಿ ಸಾವಿನ ಮುನ್ನ ಹೇಳಿದ್ದರು.

ಬನ್ನಂಜೆ ಗೋವಿಂದಾಚಾರ್ಯರ ನೆನಪು | ಸಂಪ್ರದಾಯ-ಆಧುನಿಕತೆಯನ್ನು ಸಮನ್ವಯಿಸಿ ನೋಡಿದ ಘನ ವಿದ್ವಾಂಸ: ಮಲ್ಲೇಪುರಂ ಜಿ.ವೆಂಕಟೇಶ್