ರೈತ ದಿನದ ಉಡುಗೊರೆಯಾಗಿ ನೂತನ ಕೃಷಿ ಕಾಯ್ದೆ ಹಿಂಪಡೆಯಿರಿ: ಕೇಂದ್ರ ಸರ್ಕಾರಕ್ಕೆ ರೈತರ ಮನವಿ

ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಮೋದಿ ಸರ್ಕಾರ ರೈತ ದಿನದ ಉಡುಗೊರೆ ನೀಡಬೇಕು ಎಂದು, ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಳಿಕೊಂಡಿದ್ದಾರೆ.

ರೈತ ದಿನದ ಉಡುಗೊರೆಯಾಗಿ ನೂತನ ಕೃಷಿ ಕಾಯ್ದೆ ಹಿಂಪಡೆಯಿರಿ: ಕೇಂದ್ರ ಸರ್ಕಾರಕ್ಕೆ ರೈತರ ಮನವಿ
ದೆಹಲಿ ಚಲೋದಲ್ಲಿ ಪಂಜಾಬ್ ರೈತರು (ಸಂಗ್ರಹ ಚಿತ್ರ)
Edited By:

Updated on: Apr 06, 2022 | 11:23 PM

ದೆಹಲಿ: ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಮೋದಿ ಸರ್ಕಾರ ರೈತ ದಿನದ ಉಡುಗೊರೆ ನೀಡಬೇಕು ಎಂದು, ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಳಿಕೊಂಡಿದ್ದಾರೆ. ನಾವು ರೈತರು ಕೂಡ ಶಿಕ್ಷಿತರಾಗಿದ್ದೇವೆ. ಕೇಂದ್ರದ ನೂತನ ಕೃಷಿ ಕಾಯ್ದೆಗಳ ಬಗ್ಗೆ ನಮಗೂ ಗೊತ್ತು ಎಂದು ರೈತರು ಹೇಳಿದ್ದಾರೆ.

ಈ ನಡುವೆ, ಪ್ರಧಾನಿ ಮೋದಿ ಇಂದು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಹುಟ್ಟು ಹಬ್ಬವನ್ನು ನೆನಪಿಸಿಕೊಂಡಿದ್ದಾರೆ. ಚೌಧರಿ ಚರಣ್ ಸಿಂಗ್ ಅವರು ಗ್ರಾಮ ಮತ್ತು ರೈತರ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ. ಮತ್ತೊಂದೆಡೆ, ಚೌಧರಿ ಚರಣ್ ಸಿಂಗ್ ಅವರ ಹುಟ್ಟುಹಬ್ಬವನ್ನು ಪ್ರತಿಭಟನೆಯಲ್ಲಿ ತೊಡಗಿರುವ ರೈತರು ಹೋಮ-ಹವನ ನಡೆಸುವ ಮೂಲಕ ಆಚರಿಸಿಕೊಂಡಿದ್ದಾರೆ. ದೆಹಲಿ-ಉತ್ತರ ಪ್ರದೇಶ ಗಡಿ ಭಾಗದಲ್ಲಿ ರೈತರು ಹವನ ಮಾಡಿದ್ದಾರೆ.

ದೇಶದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ಒಂದು ತಿಂಗಳ ಗಡಿಯತ್ತ ಸಾಗುತ್ತಿದೆ. ಈ ಅವಧಿಯಲ್ಲಿ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಯಾವುದೇ ಫಲಿತಾಂಶ ನೀಡಿಲ್ಲ. ನೂತನ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ. ಹಾಗಾಗಿ, ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತಮುಖಂಡರು ಪಟ್ಟುಹಿಡಿದು ಕುಳಿತಿದ್ದಾರೆ. ಕೇಂದ್ರ ಸರ್ಕಾರ, ನಾವು ಕಾಯ್ದೆ ತಿದ್ದುಪಡಿಗೆ ತಯಾರಿದ್ದೇವೆ ಆದರೆ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ಸಮರ್ಥನೆ ನೀಡುತ್ತಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಹಲವು ರಾಜ್ಯಗಳು ಇಂದು ರೈತರ ಪರವಾಗಿ ಮಾತನಾಡಿದೆ. ಆಮ್ ಆದ್ಮಿ ಪಕ್ಷ ದೆಹಲಿಯ ಲೋಧಿ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದರಿಂದಾಗಿ ರಸ್ತೆಗಳು ಕೂಡ ಬಂದ್ ಆಗಿವೆ. ಮುಂದಿನ ಮೂರು ಗಂಟೆಗಳ ಕಾಲ ಟ್ರಾಫಿಕ್ ವ್ಯತ್ಯಯ ಮುಂದುವರೆಯಬಹುದು ಎಂದು ದೆಹಲಿ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ರೈತರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ. ರೈತ ಹೋರಾಟಕ್ಕೆ ಕೇರಳ ಯಾಕೆ ಮೂಗು ತೂರಿಸುತ್ತಿದೆ ಎಂದು ಕೆಲವರು ಕೇಳುತ್ತಿದ್ದಾರೆ. ಆಹಾರ ವಸ್ತುಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುವ ರಾಜ್ಯವಾಗಿರುವ ಕೇರಳ, ಆಹಾರ ಸಮಸ್ಯೆ ಉಂಟಾದರೆ ಹೆಚ್ಚೇ ಸಂಕಷ್ಟಕ್ಕೀಡಾಗಲಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

Delhi Chalo: ಬೋರಿಸ್ ಜಾನ್ಸನ್​ರ ಗಣರಾಜ್ಯೋತ್ಸವ ಭೇಟಿ ತಡೆಯುವಂತೆ ಇಂಗ್ಲೆಂಡ್ ಸಂಸದರಿಗೆ ಪತ್ರ ಬರೆಯಲಿವೆ ರೈತ ಒಕ್ಕೂಟಗಳು

Published On - 1:44 pm, Wed, 23 December 20