ಇಂದು ಗಣರಾಜ್ಯೋತ್ಸವ. ಭಾರತ ಈ ಬಾರಿ 73ನೇ ಗಣರಾಜ್ಯೋತ್ಸವ ಆಚರಿಸಿಕೊಳ್ಳುತ್ತಿದೆ (Republic Day 2022). ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು 1947ರ ಆಗಸ್ಟ್ 15ರಂದು. ಹೀಗಾಗಿ ಪ್ರತಿವರ್ಷ ಆಗಸ್ಟ್ 15ನ್ನು ಸ್ವಾತಂತ್ರ್ಯೋತ್ಸವ ಎಂದು ಆಚರಣೆ ಮಾಡುತ್ತೇವೆ. ಅದೇ, ದೇಶದಲ್ಲಿ ಅಧಿಕೃತವಾಗಿ ಸಂವಿಧಾನ ಜಾರಿಗೆ ಬಂದಿದ್ದು 1950ರ ಜನವರಿ 26ರಂದು. ಅಂದಿನಿಂದಲೂ ಪ್ರತಿವರ್ಷ ಜನವರಿ 26ರನ್ನು ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿನ (Republic Day) ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ನೇತೃತ್ವ ವಹಿಸಿದ್ದರು. ಸಂವಿಧಾನ ರಚನೆಯಾಗಿ ಜಾರಿಗೆ ಬಂದ ಬಳಿಕ ಭಾರತವೊಂದು ಸಾರ್ವಭೌಮ ರಾಷ್ಟ್ರವಾಯಿತು. ಹಾಗೇ, ಭಾರತದಲ್ಲಿ 1949ರ ನವೆಂಬರ್ 26ರಂದು ಸಂವಿಧಾನ ಸಭೆಯಲ್ಲಿ, ಸಂವಿಧಾನವನ್ನು ಅಂಗೀಕರಿಸಿದ ನೆನಪಿಗೆ, ದೇಶದಲ್ಲಿ ಪ್ರತಿವರ್ಷ ನವೆಂಬರ್ 26ರನ್ನು ಸಂವಿಧಾನ ದಿನ ಎಂದೂ ಆಚರಣೆ ಮಾಡಲಾಗುತ್ತದೆ.
ಗಣರಾಜ್ಯೋತ್ಸವವನ್ನು ದೇಶಾದ್ಯಂತ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಖಾಸಗಿ ಸಂಸ್ಥೆ, ಎನ್ಜಿಒಗಳೂ ಆಚರಿಸಲಾಗುತ್ತದೆ. ದೆಹಲಿಯ ರಾಜಪಥ್ನಲ್ಲಿ ನಡೆಯುವ, ಭಾರತೀಯ ಸೈನ್ಯವನ್ನೊಳಗೊಂಡ ಪರೇಡ್ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಈ ಪರೇಡ್ಗಳು ಇಂಡಿಯಾ ಗೇಟ್ಬಳಿ ಕೊನೆಗೊಳ್ಳುತ್ತವೆ. ಹಾಗೇ, ಭಾರತದ ರಾಷ್ಟ್ರಪತಿ (ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್) ರಾಜಪಥದ ಬಳಿ ಧ್ವಜಾರೋಹಣ ನಡೆಸುತ್ತಾರೆ. ಗಣರಾಜ್ಯೋತ್ಸವದ ಆಚರಣೆ, ಭಾರತದ ಸಂಸ್ಕೃತಿ, ಸಾಮಾಜಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಭಾರತದ ಭೂಸೇನೆ, ವಾಯುಸೇನೆ, ನೌಕಾಪಡೆಗಳ ಪರೇಡ್ಗಳು, ಏರ್ ಶೋಗಳು ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ.
ಅದಾದ ಬಳಿಕ ಭಾರತದ ರಾಷ್ಟ್ರಪತಿಗಳು ಪದ್ಮ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಈ ಪದ್ಮ ಪ್ರಶಸ್ತಿಗಳು ದೇಶದ ಉನ್ನತ ಗೌರವ ಆಗಿದೆ. ಅದರೊಂದಿಗೆ ವೀರ ಸೈನಿಕರಲ್ಲಿ ಆಯ್ಕೆಯಾದವರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ. ಈ ಗಣರಾಜ್ಯೋತ್ಸವ ಪರೇಡ್ನ ನೇರ ಪ್ರಸಾರ ಬಹುತೇಕ ಎಲ್ಲ ಟಿವಿ ಚಾನಲ್ಗಳಲ್ಲೂ ಇರುತ್ತದೆ. ಅಷ್ಟೇ ಅಲ್ಲ, ಕೆಲವು ಯೂಟ್ಯೂಬ್ ಚಾನಲ್ಗಳೂ ಕೂಡ ಲೈವ್ ಪ್ರಸಾರ ಮಾಡುತ್ತವೆ.
ಗಣರಾಜ್ಯೋತ್ಸವದ ಮಹತ್ವ
ಭಾರತ ಸ್ವತಂತ್ರಗೊಂಡು, ತನ್ನದೇ ಅಸ್ತಿತ್ವ, ಗುರುತು ರೂಪಿಸಿಕೊಂಡಿದ್ದನ್ನು ಈ ಗಣರಾಜ್ಯೋತ್ಸವ ಸಾರುತ್ತದೆ. ಅಷ್ಟೇ ಅಲ್ಲ, ಪ್ರಜಾಸತ್ತಾತ್ಮಕವಾಗಿ ತಮ್ಮ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿಯನ್ನು ನಾಗರಿಕರಿಗೆ ನೀಡಿದ ದಿನವನ್ನು ಗಣರಾಜ್ಯೋತ್ಸವ ಸ್ಮರಿಸುತ್ತದೆ. ಹಾಗೇ, ಗಣರಾಜ್ಯೋತ್ಸವವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಣೆ ಮಾಡಲಾಗಿದ್ದು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಯಾವುದೇ ಇರಲಿ, ಬೆಳಗ್ಗೆ ಧ್ವಜಾರೋಹಣ ಮಾಡಿ ನಂತರ ಕೆಲಸ ನಿರ್ವಹಿಸುವುದಿಲ್ಲ.
ಇದನ್ನೂ ಓದಿ: Republic Day 2022: ಗಣರಾಜ್ಯೋತ್ಸವದ ಹಿನ್ನೆಲೆ, ಸಂವಿಧಾನದ ಬಗ್ಗೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು