ಅಸ್ಸಾಂ ಮತ್ತು ಉತ್ತರ ಪ್ರದೇಶ ಸೇರಿ ಕೆಲವು ರಾಜ್ಯಗಳು ನಿಧಾನವಾಗಿ ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸುತ್ತಿರುವ ಬೆನ್ನಲ್ಲೇ ಮಿಜೋರಾಂ ಇದರ ವಿರುದ್ಧವಾಗಿ ಹೆಜ್ಜೆ ಇಡುತ್ತಿದೆ. ಅತ್ಯಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ 1 ಲಕ್ಷ ರೂ.ಬಹುಮಾನ ಕೊಡುವುದಾಗಿ ಮಿಜೋರಾಂ ಸಚಿವರೊಬ್ಬರು ಘೋಷಣೆ ಮಾಡಿದ್ದಾರೆ. ಹಾಗಂತ ಇದು ಸದ್ಯಕ್ಕೇನೂ ಇಡೀ ರಾಜ್ಯಕ್ಕೆ ಅನ್ವಯ ಆಗಿಲ್ಲ. ತಮ್ಮ ಕ್ಷೇತ್ರದಲ್ಲಿ ಮಾತ್ರ ಅನ್ವಯಿಸಿದ್ದಾರೆ.
ಅಪ್ಪನ ದಿನಾಚರಣೆ ಸಂದರ್ಭದಲ್ಲಿ ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಈ ಘೋಷಣೆ ಮಾಡಿದ್ದಾರೆ. ಇವರು ಐಜಾಲ್ ಪೂರ್ವ-2 ಕ್ಷೇತ್ರದ ಶಾಸಕರಾಗಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ತುಂಬು ಕುಟುಂಬವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಘೋಷಣೆ ಮಾಡಿದ್ದಾಗಿ ತಿಳಿಸಿದ್ದಾರೆ. ಹಾಗೇ, 1 ಲಕ್ಷ ರೂ.ಬಹುಮಾನ ಪಡೆಯಲು ನಿರ್ದಿಷ್ಟವಾಗಿ ಎಷ್ಟು ಮಕ್ಕಳನ್ನು ಹೊಂದಿರಬೇಕು ಎಂಬುದನ್ನೇನೂ ಅವರು ಸ್ಪಷ್ಟಪಡಿಸಲಿಲ್ಲ.
ಮಿಜೋರಾಂ ಪ್ರತಿ ಚದರ ಮೀಟರ್ಗೆ 52 ಜನರಂತೆ ಜನಸಂಖ್ಯಾ ಸಾಂದ್ರತೆ ಹೊಂದಿದೆ. ಇದು ರಾಷ್ಟ್ರೀಯ ಸರಾಸರಿ (380 ಇರಬೇಕು)ಗಿಂತ ತುಂಬ ಕಡಿಮೆ. ಮಿಜೋರಾಂನಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಹಲವು ದಿನಗಳಿಂದಲೂ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ರಾಬರ್ಟ್ ತಿಳಿಸಿದ್ದಾರೆ. ಹಾಗೇ ಬಹುಮಾನವನ್ನು ತನ್ನ ಮಗನ ಒಡೆತನದ ಈಶಾನ್ಯ ಕನ್ಸಲ್ಟೆನ್ಸಿ ಸರ್ವೀಸ್ ಪ್ರಾಯೋಜಿಸಲಿದೆ ಎಂದೂ ಹೇಳಿದ್ದಾರೆ. ಇನ್ನೊಂದೆಡೆ ಅಸ್ಸಾಂ, ಉತ್ತರ ಪ್ರದೇಶದಂಥ ಕೆಲವು ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಎರಡು ಮಕ್ಕಳ ನೀತಿಯನ್ನು ಅಳವಡಿಸುತ್ತಿವೆ. ಇನ್ನು ಮುಂದೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ಸೌಲಭ್ಯಗಳಲ್ಲಿ ಕಡಿತ ಮಾಡಲಾಗುವುದು ಎಂಬಂಥ ಕಾನೂನನ್ನು ತರುತ್ತಿವೆ.
ಇದನ್ನೂ ಓದಿ: ಸ್ವದೇಶಿ ಕೊವ್ಯಾಕ್ಸಿನ್ ಲಸಿಕೆ ಪ್ರಭಾವ ಇಳಿಕೆಯಾಗಿದೆ: ಡಿಸಿಜಿಐ ಅಂತಿಮ ಡಾಟಾ ಏನು ಹೇಳುತ್ತದೆ?